ಮಟ್ಕಾ ಆರೋಪಿ ರಮೇಶ ಅರಸ್‌ ಚಿಕ್ಕಮಗಳೂರಿಗೆ ಗಡಿಪಾರು

0
4

​ಉಡುಪಿ: ಸಾರ್ವಜನಿಕ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ, ಉಡುಪಿ ಜಿಲ್ಲೆಯ ಮಟ್ಕಾ ಜುಗಾರಿ ಆರೋಪಿಯೊಬ್ಬನನ್ನು ಚಿಕ್ಕಮಗಳೂರು ಜಿಲ್ಲೆಗೆ ಗಡಿಪಾರು ಮಾಡಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಆದೇಶ ಹೊರಡಿಸಿದ್ದಾರೆ.

​ ಶಿವಳ್ಳಿ ಗ್ರಾಮದ ಮಠದಬೆಟ್ಟು ನಾಗಬನದ ಬಳಿಯ ನಿವಾಸಿ ರಾಮರಾಜ್‌ ಅಲಿಯಾಸ್ ರಮೇಶ ಅರಸ್‌ (48) ಗಡಿಪಾರಾದ ಆರೋಪಿಯಾಗಿದ್ದಾನೆ.

ಈತನನ್ನು ಚಿಕ್ಕಮಗಳೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಗೆ ಗಡಿಪಾರುಗೊಳಿಸಿ ಶನಿವಾರ ಅಧಿಕೃತ ಆದೇಶ ಹೊರಡಿಸಲಾಗಿದೆ.

​4 ಪ್ರಕರಣಗಳಲ್ಲಿ ಶಿಕ್ಷೆ
ಆರೋಪಿ ರಮೇಶ ಅರಸ್‌ ವಿರುದ್ಧ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಕಾನೂನುಬಾಹಿರವಾಗಿ ಮಟ್ಕಾ ಜುಗಾರಿ ದಂಧೆ ನಡೆಸಿದ ಒಟ್ಟು 5 ಪ್ರಕರಣಗಳು ದಾಖಲಾಗಿದ್ದವು. ಈ ಪೈಕಿ ಈಗಾಗಲೇ 4 ಪ್ರಕರಣಗಳಲ್ಲಿ ಆರೋಪಿಗೆ ನ್ಯಾಯಾಲಯದಿಂದ ಶಿಕ್ಷೆಯಾಗಿದ್ದು, ಇನ್ನುಳಿದ ಒಂದು ಪ್ರಕರಣವು ಸದ್ಯ ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿದೆ.