ಮಣಿಪಾಲ–ಅಂಬಾಗಿಲು ರಸ್ತೆ ಅವ್ಯವಸ್ಥೆ ; ಚರಂಡಿ ನಿರ್ಮಾಣಕ್ಕೆ ಸಾಮಾಜಿಕ ಕಾರ್ಯಕರ್ತ ಸತೀಶ್ ಪೂಜಾರಿ ಕೀಳಂಜೆ ಒತ್ತಾಯ

0
7

ಉಡುಪಿ : ಮಣಿಪಾಲದಿಂದ ಅಂಬಾಗಿಲು ಸಂಪರ್ಕಿಸುವ ಪ್ರಮುಖ ರಸ್ತೆಯಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಳೆ ನೀರು ರಸ್ತೆಯಲ್ಲೇ ನಿಂತು ಕೆರೆಯಂತಾಗಿದ್ದು, ವಾಹನ ಸವಾರರು ಹಾಗೂ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಪರಂಪಳ್ಳಿ ಸೆಂಚುರಿ ಚಿಕನ್ ಸೆಂಟರ್ ಎದುರು ಹಾಗೂ ವಿಶ್ವಾಸ್ ಹೋಟೆಲ್ ಸಮೀಪದ ರಸ್ತೆಯಲ್ಲಿ ಮಳೆ ನೀರು ನಿಂತು ದೊಡ್ಡ ದೊಡ್ಡ ಹೊಂಡಗಳು ನಿರ್ಮಾಣವಾಗಿದ್ದು, ಈ ಮಾರ್ಗದಲ್ಲಿ ಸಂಚರಿಸುವ ಸಾವಿರಾರು ವಾಹನಗಳಿಗೆ ಅಪಾಯ ಎದುರಾಗಿದೆ. ಈ ರಸ್ತೆಯು ಮಣಿಪಾಲ ಕೆಎಂಸಿ ಆಸ್ಪತ್ರೆ ಸಂಪರ್ಕಿಸುವ ಪ್ರಮುಖ ಮಾರ್ಗವಾಗಿರುವುದರಿಂದ, ದಿನನಿತ್ಯ ಆಂಬುಲೆನ್ಸ್ ಸೇರಿದಂತೆ ಸಾವಿರಾರು ವಾಹನಗಳು ಇದೇ ರಸ್ತೆಯಲ್ಲಿ ಸಂಚರಿಸುತ್ತವೆ.

ಮಳೆಗಾಲದಲ್ಲಿ ರಸ್ತೆ ಮೇಲೆಯೇ ನೀರು ನಿಲ್ಲುವುದರಿಂದ ಹೊಂಡಗಳು ಕಾಣಿಸದೆ ಅಪಘಾತಗಳ ಸಂಭವ ಹೆಚ್ಚುತ್ತಿದೆ. ರಾತ್ರಿ ವೇಳೆಯಲ್ಲಿ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುತ್ತಿದ್ದು, ರೋಗಿಗಳನ್ನು ಸಾಗಿಸುವ ಆಂಬುಲೆನ್ಸ್‌ಗಳಿಗೂ ಸಂಚಾರ ಕಷ್ಟಕರವಾಗುತ್ತಿದೆ ಎಂದು ವಾಹನ ಸವಾರರು ತಿಳಿಸಿದ್ದಾರೆ.

ರಸ್ತೆಯ ಎರಡೂ ಬದಿಗಳಲ್ಲಿ ಸಮರ್ಪಕ ಚರಂಡಿ ಇಲ್ಲದಿರುವುದು ಸಮಸ್ಯೆಯ ಮೂಲ ಕಾರಣವಾಗಿದ್ದು, ಮಳೆ ನೀರು ರಸ್ತೆಯ ಮೇಲೆಯೇ ಹರಿಯುತ್ತಿದೆ. ಇದರಿಂದ ಜಲ್ಲಿಕಲ್ಲು, ಮಣ್ಣು ರಸ್ತೆಯ ಮಧ್ಯೆ ಗುಡ್ಡೆಯಾಗಿ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಅಲ್ಲದೆ, ರಸ್ತೆ ಬದಿಯ ಹುಲ್ಲು ಮತ್ತು ಪೊದೆಗಳು ಬೆಳೆದು ವಾಹನ ಸವಾರರ ದೃಷ್ಟಿಗೆ ಅಡ್ಡಿಯಾಗುತ್ತಿರುವುದರಿಂದ ಅಪಾಯ ಮತ್ತಷ್ಟು ಹೆಚ್ಚಿದೆ.

ಮಣಿಪಾಲ ಕಾಯಿನ್ ಸರ್ಕಲ್‌ನಿಂದ ಅಂಬಾಗಿಲುವರೆಗೆ ರಸ್ತೆ ನಿರ್ಮಾಣದ ವೇಳೆ ಚರಂಡಿ ವ್ಯವಸ್ಥೆಗೆ ಆದ್ಯತೆ ನೀಡದಿರುವುದು ಈಗ ರಸ್ತೆ ಹಾಳಾಗಲು ಪ್ರಮುಖ ಕಾರಣವಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ರಸ್ತೆ ಮಳೆ ನೀರಿನ ಕಾರಣದಿಂದ ವೇಗವಾಗಿ ಹಾಳಾಗುತ್ತಿರುವುದಕ್ಕೆ ಸಂಬಂಧಿಸಿದ ಇಲಾಖೆಯ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ರಸ್ತೆ ಎರಡೂ ಬದಿಗಳಲ್ಲಿ ತಕ್ಷಣವೇ ಸಮರ್ಪಕ ಚರಂಡಿ ನಿರ್ಮಿಸಿ, ರಸ್ತೆಯ ಮೇಲಿನ ನೀರು ನಿಲ್ಲದಂತೆ ಶಾಶ್ವತ ವ್ಯವಸ್ಥೆ ಕಲ್ಪಿಸಬೇಕು. ಜೊತೆಗೆ ರಸ್ತೆ ಬದಿಯ ಹುಲ್ಲು-ಪೊದೆಗಳನ್ನು ತೆರವುಗೊಳಿಸಿ, ರಸ್ತೆ ದೀಪಗಳ ವ್ಯವಸ್ಥೆಯನ್ನು ಸುಧಾರಿಸಬೇಕು ಎಂದು ಸಾರ್ವಜನಿಕರು, ವಾಹನ ಸವಾರರು ಹಾಗೂ ಸ್ಥಳೀಯ ನಿವಾಸಿಗಳ ಪರವಾಗಿ ಸಾಮಾಜಿಕ ಕಾರ್ಯಕರ್ತ ಹಾಗೂ ಸಮಾಜ ಸೇವಕರಾದ ಸತೀಶ್ ಪೂಜಾರಿ ಕೀಳಂಜೆ ಅವರು ಜಿಲ್ಲಾಡಳಿತ, ಲೋಕೋಪಯೋಗಿ ಇಲಾಖೆ (PWD) ಹಾಗೂ ನಗರಸಭೆ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.