ಕಾಸರಗೋಡು : ಕೇರಳ ರಾಜ್ಯ-ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಹಾಗೂ ಕಾಸರಗೋಡಿನ ಕನ್ನಡ ಭವನ ಮತ್ತು ಪ್ರಕಾಶನ ಸಂಯುಕ್ತವಾಗಿ ಆಯೋಜಿಸುತ್ತಿರುವ ‘ಕನ್ನಡ ಭವನದ ರಜತಸಂಭ್ರಮ ಸಮಾರೋಪ’ ಮತ್ತು ‘ಕರ್ನಾಟಕ ಗಡಿನಾಡು ಕನ್ನಡ ಸಮ್ಮೇಳನ – 2026’ ಬರುವ ಜುಲೈ 26ರಂದು ನುಳ್ಳಿಪ್ಪಾಡಿಯ ಕನ್ನಡ ಭವನದಲ್ಲಿ ವಿಜೃಂಭಣೆಯಿಂದ ಜರುಗಲಿದೆ.
ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಡಾ| ಸಿ. ಸೋಮಶೇಖರ್ ಅವರ ಸರ್ವಾಧ್ಯಕ್ಷತೆಯಲ್ಲಿ ಈ ಬೃಹತ್ ಸಮ್ಮೇಳನ ನಡೆಯಲಿದ್ದು, ಕಾಸರಗೋಡಿನ ಬೀದಿಗಳಲ್ಲಿ ಅದ್ಧೂರಿ ಕನ್ನಡ ವೈಭವದ ಮೆರವಣಿಗೆಯೊಂದಿಗೆ ಬೆಳಿಗ್ಗೆ 9 ಗಂಟೆಗೆ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ.

ನಯನ ಕೊಡಿಯಾಲ್ ಬೈಲ್ ಅವರಿಗೆ ಗೌರವ
ಈ ಐತಿಹಾಸಿಕ ರಜತಸಂಭ್ರಮದ ಭಾಗವಾಗಿ ನೀಡಲಾಗುವ “ಭರವಸೆಯ ಶಿಕ್ಷಣ ರತ್ನ – Light of Hopes (Teachers Achievement Award – 2026)” ಪ್ರಶಸ್ತಿಗೆ ಶಿಕ್ಷಣ ಮತ್ತು ಸಮಾಜಮುಖಿ ಕ್ಷೇತ್ರದಲ್ಲಿ ನಿರಂತರ ಸೇವೆ ಸಲ್ಲಿಸುತ್ತಿರುವ ಗೌರವಾನ್ವಿತ ಶಿಕ್ಷಕಿ ನಯನ ಕೊಡಿಯಾಲ್ ಬೈಲ್ ಅವರು ಆಯ್ಕೆಯಾಗಿದ್ದಾರೆ.
ಶಿಕ್ಷಣ ಕ್ಷೇತ್ರದಲ್ಲಿ ಅವರು ತೋರಿದ ವಿದ್ಯಾರ್ಥಿಪರ ಕಾಳಜಿ, ಸಮಾಜಮುಖಿ ಚಿಂತನೆ ಹಾಗೂ ಕನ್ನಡ ನಾಡು-ನುಡಿಯ ಪ್ರಸಾರದಲ್ಲಿ ಅವರ ಕೊಡುಗೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

ಜುಲೈ 26ರ ಸಮಾರೋಪ ಸಮಾರಂಭದಲ್ಲಿ ಅವರಿಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಲಾಗುವುದು ಎಂದು ಆಮಂತ್ರಣ ಪತ್ರದಲ್ಲಿ ತಿಳಿಸಿರುತ್ತಾರೆ.
ಸಮ್ಮೇಳನದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ರಾಷ್ಟ್ರೀಯ ಪ್ರಶಸ್ತಿಗಳನ್ನು ಹಾಗೂ ಉದಯೋನ್ಮುಖ ವಿದ್ಯಾರ್ಥಿಗಳಿಗೆ ‘ಭರವಸೆಯ ಬೆಳಕು’ ಪ್ರಶಸ್ತಿಗಳನ್ನು ವಿತರಿಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.
ವರದಿ : ಮಂದಾರ ರಾಜೇಶ್

