ಕರಾವಳಿ ಜಿಲ್ಲೆಗಳ ವಿದ್ಯಾರ್ಥಿಗಳು ಸರಕಾರಿ ಸೇವೆಗಳಿಗೆ ವಿಶೇಷ ಆಸಕ್ತಿ ವಹಿಸಿ : ಯಶ್ ಪಾಲ್ ಸುವರ್ಣ

0
10

ದೇಶದ ಕಾರ್ಯಾಂಗ ವ್ಯವಸ್ಥೆಯಲ್ಲಿ ಮಹತ್ವದ ಪಾತ್ರ ವಹಿಸುವ ಐ. ಎ.ಎಸ್., ಐ.ಪಿ. ಎಸ್., ಕೆ. ಎ.ಎಸ್. ನಂತಹ ಸರಕಾರಿ ಸೇವೆಯ ಹುದ್ದೆಗಳ ನೇಮಕಾತಿ ಬಗ್ಗೆ ಕರಾವಳಿ ಜಿಲ್ಲೆಯ ವಿದ್ಯಾರ್ಥಿಗಳು ವಿಶೇಷ ಆಸಕ್ತಿ ವಹಿಸಿ ಸರಕಾರಿ ಅಧಿಕಾರಿಗಳಾಗಿ ಜಿಲ್ಲೆಯ ಪ್ರಗತಿಗೆ ಕೊಡುಗೆ ನೀಡಲು ಮುಂದಾಗುವಂತೆ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಹೇಳಿದರು.

ಶಾಸಕ ಯಶ್ ಪಾಲ್ ಸುವರ್ಣ ರವರ ನೇತೃತ್ವದಲ್ಲಿ ಅಭಿನವ ಭಾರತ ಉಡುಪಿ ಹಾಗೂ ಸ್ಪರ್ಧಾ ಸಾರಥಿ ಕೆ. ಎ. ಎಸ್. ಅಕಾಡೆಮಿ ಕುಂದಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಪೊಲೀಸ್ ನೇಮಕಾತಿ ಬಗೆ ಮಾದರಿ ಪರೀಕ್ಷೆ ಹಾಗೂ ಪ್ರೇರಣಾ ಶಿಬಿರದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.

ಪ್ರತಿ ವರ್ಷ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆಯುವ ಕರಾವಳಿ ಜಿಲ್ಲೆಯ ವಿದ್ಯಾರ್ಥಿಗಳು ಸರಕಾರಿ ಸೇವೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚಿನ ಸಾಧನೆ ದಾಖಲಿಸಿಲ್ಲ. ಈ ನಿಟ್ಟಿನಲ್ಲಿ ಜಿಲ್ಲೆಯ ವಿದ್ಯಾರ್ಥಿಗಳಿಗೆ ಈ ಬಗ್ಗೆ ಅಗತ್ಯ ಮಾರ್ಗದರ್ಶನ ಹಾಗೂ ಸಹಕಾರ ನೀಡುವ ನಿಟ್ಟಿನಲ್ಲಿ ಆಯೋಜಿಸಿರುವ ಶಿಬಿರದ ಸದುಪಯೋಗ ಪಡೆಯುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಸಮಾರಂಭದ ಸಂಪನ್ಮೂಲ ವ್ಯಕ್ತಿ ಬ್ರಹ್ಮಾವರ ಪೊಲೀಸ್ ಠಾಣೆಯ ಪ್ರೊಬೇಷನರಿ ಪೊಲೀಸ್ ಉಪ ನಿರೀಕ್ಷಕರಾದ ಆಶ್ರಿತ ಶೆಟ್ಟಿ ಮಾತನಾಡಿ ನಿರಂತರ ಪ್ರಯತ್ನ ಹಾಗೂ ಕಠಿಣ ಪರಿಶ್ರಮದಿಂದ ವಿಶೇಷ ಆಸಕ್ತಿ ವಹಿಸಿ ಸಿದ್ಧತೆ ಮಾಡಿಕೊಂಡಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದು ಸರಕಾರಿ ಹುದ್ದೆಗಳನ್ನು ಪಡೆಯಲು ವಿಫುಲ ಅವಕಾಶವಿದ್ದು, ಉಡುಪಿ ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿಗಳು ಪೊಲೀಸ್ ಇಲಾಖೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇವೆ ಸಲ್ಲಿಸಲು ಆಸಕ್ತಿ ವಹಿಸುವಂತೆ ಹೇಳಿದರು.

ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಜಗದೀಶ್ ರವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು, ಸ್ಪರ್ಧಾ ಸಾರಥಿ ಸಂಸ್ಥೆಯ ಆಡಳಿತ ನಿರ್ದೇಶಕರಾದ ಶ್ರೀ ಆದರ್ಶ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮಟ್ಟು ಯತೀಶ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.