ಉಡುಪಿ: ದೇಶದಲ್ಲಿ ಚಳವಳಿಯ ನೆಪದಲ್ಲಿ ಅರಾಜಕತೆ ಸೃಷ್ಟಿಸಲು ಕೆಲವರು ಪ್ರಯತ್ನಿಸುತ್ತಿದ್ದು, ವಿದೇಶಿ ಶಕ್ತಿಗಳೊಂದಿಗೆ ಕೈಜೋಡಿಸುತ್ತಿದ್ದಾರೆ ಎಂದು ಮಾಜಿ ಸಚಿವ ಹಾಗೂ ಶಾಸಕ ವಿ. ಸುನಿಲ್ ಕುಮಾರ್ ಆರೋಪಿಸಿದರು.
ನಗರದ ಜಟ್ಕಾ ಸ್ಟ್ಯಾಂಡ್ನಲ್ಲಿ ಮಂಗಳವಾರ ಕಾಂಗ್ರೆಸ್ ಹಾಗೂ ದೇಶವಿರೋಧಿ ಶಕ್ತಿಗಳ ವಿರುದ್ಧ ಜಿಲ್ಲಾ ಬಿಜೆಪಿ ವತಿಯಿಂದ ಆಯೋಜಿಸಿದ್ದ ಬೃಹತ್ ಪ್ರತಿಭಟನೆ ಉದ್ದೇಶಿಸಿ ಅವರು ಮಾತನಾಡಿದರು.
ಚಳವಳಿಯ ಹೆಸರಿನಲ್ಲಿ ಸೈನಿಕರ ಮೇಲೆ ಕಲ್ಲು ತೂರಾಟ ಹಾಗೂ ಪೊಲೀಸರ ಮೇಲೆ ದಾಳಿ ನಡೆಸುವುದನ್ನು ಭಾರತೀಯ ಸಮಾಜ ಒಪ್ಪುವುದಿಲ್ಲ. ಜಂತರ್ ಮಂತರ್ನಲ್ಲಿ ನಡೆದ ಪ್ರತಿಭಟನೆಯಲ್ಲಿ ಪ್ರಧಾನಿ ಮೋದಿ ಹಾಗೂ ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಭಾಷೆ ಬಳಸಲಾಗಿದೆ. ಇಂತಹ ಪ್ರತಿಭಟನೆಗಳ ಉದ್ದೇಶವೇ ದೇಶದಲ್ಲಿ ಅಶಾಂತಿ ಸೃಷ್ಟಿಸುವುದಾಗಿದೆ ಎಂದು ಹೇಳಿದರು.
ಪ್ರಧಾನಿ ಮೋದಿ ಅಧಿಕಾರ ಅವಧಿಯಲ್ಲಿ ಭಾರತ ದೇಶದ ಪ್ರತಿಷ್ಠೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಾಗಿದೆ. ಆದರೆ, ದೇಶವನ್ನು ದುರ್ಬಲಗೊಳಿಸುವ ಉದ್ದೇಶದಿಂದ ಕೆಲವು ಶಕ್ತಿಗಳು ಕಾರ್ಯನಿರ್ವಹಿಸುತ್ತಿವೆ. ಕಾಂಗ್ರೆಸ್ಗೆ ಚುನಾವಣಾ ವ್ಯವಸ್ಥೆ, ಸಂಸತ್ತು ಹಾಗೂ ಕಾನೂನಿನ ಮೇಲೆ ನಂಬಿಕೆ ಇಲ್ಲ. ಪ್ರಧಾನಿ ನರೇಂದ್ರ ಮೋದಿ ಹಾಗೂ ಹಿಂದೂ ಧರ್ಮದ ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಸುತ್ತಿದ್ದಾರೆ. ಸದುದ್ದೇಶದಿಂದ ಪ್ರತಿಭಟನೆ ನಡೆಸುವವರ ಭಾಷೆ ಚೆನ್ನಾಗಿರುತ್ತದೆ. ಆದರೆ ಕೆಟ್ಟ ಉದ್ದೇಶ ಹೊಂದಿರುವವರ ಭಾಷೆ ಮತ್ತು ಶಬ್ದಗಳು ಅವಾಚ್ಯ ಹಾಗೂ ಭಾರತೀಯತೆಗೆ ಅಪಮಾನ ತರುವಂತಿರುತ್ತವೆ ಎಂದು ಹೇಳಿದರು.
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವನ್ನು ಕೇಂದ್ರ ಸರ್ಕಾರ ಸಮರ್ಥಿಸಿಲ್ಲ. ಪ್ರಕರಣ ಬೆಳಕಿಗೆ ಬಂದ ತಕ್ಷಣ ಮರುಪರೀಕ್ಷೆ ನಡೆಸಲಾಗಿತ್ತು. ಆದರೆ, ಇಂತಹ ಘಟನೆಗಳನ್ನು ನೆಪವಾಗಿಸಿಕೊಂಡು ವಿದ್ಯಾರ್ಥಿಗಳಿಗೆ ಸಂಬಂಧವೇ ಇಲ್ಲದ ಗುಂಪು ಹೋರಾಟ ನಡೆಸುತ್ತಿದೆ ಎಂದು ಕಿಡಿಕಾರಿದರು.
ಎಲ್ಲವನ್ನು ಮೋದಿಯೊಬ್ಬರೇ ಮಾಡುತ್ತಾರೆ ಎಂದು ಕುಳಿತುಕೊಂಡರೆ ಸಾಧ್ಯವಿಲ್ಲ. ಸಮಾಜವಿರೋಧಿ ಹಾಗೂ ವಿದೇಶಿ ಶಕ್ತಿಗಳೊಂದಿಗೆ ಕೈಜೋಡಿಸುವ ದೇಶವಿರೋಧಿ ಚಟುವಟಿಕೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು ಎಂದರು.

