ಪೇಜಾವರ ಶ್ರೀ ದೆಹಲಿ ಚಾತುಮಾರ್ಸ್ಯ ಅತ್ಯಂತ ಸಕಾಲಿಕ

0
16

ಉಡುಪಿ: ಪೇಜಾವರ ಶ್ರೀಗಳು ಮಧ್ವಾಚಾರ್ಯರ ಭಕ್ತಿ ಸಂದೇಶಗಳನ್ನು ಪ್ರಸಾರಗೊಳಿಸಲು ದೇಶದ ರಾಜಧಾನಿ ದೆಹಲಿಯಲ್ಲಿ ಚಾತುಮಾರ್ಸ್ಯ ವ್ರತ ನಡೆಸುತ್ತಿರುವುದು ಅತ್ಯಂತ ಸಕಾಲಿಕವಾಗಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಪ್ರಹ್ಲಾದ್​ ಜೋಶಿ ತಿಳಿಸಿದ್ದಾರೆ.
ಬುಧವಾರ ನವದೆಹಲಿ ವಸಂತ್​ ಕುಂಜ್​ ಪೇಜಾವರ ಮಠದ ಶಾಖೆ ವೇದವ್ಯಾಸ ಗುರುಕುಲ – ಶ್ರೀ ಕೃಷ್ಣಧಾಮದಲ್ಲಿ ಚಾತುಮಾರ್ಸ್ಯ ವೃತಾಚರಣೆ ಸಭಾಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೀರ್ತಿಶೇಷ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ದೇಶಾದ್ಯಂತ ಸಂಚರಿಸಿ ಧರ್ಮಮಾರ್ಗದಲ್ಲಿ ನಡೆಯಲು ಜನತೆಗೆ ನೀಡಿದ ಪ್ರೇರಣೆ ಪ್ರೋತ್ಸಾಹ ಹಾಗೂ ಹಿಂದು ಸಮಾಜವನ್ನು ಸಂಘಟಿಸುವಲ್ಲಿ ನೀಡಿದ ಮಾರ್ಗದರ್ಶನ ನೀಡಿ ಸಂತಕುಲಕ್ಕೇ ಓರ್ವ ಆದರ್ಶರೆನಿಸಿದ್ದಾರೆ. ಈ ಚಾತುಮಾರ್ಸ್ಯದಿಂದ ಸಮಸ್ತ ದೆಹಲಿಯ ಜನರಿಗೂ ಶ್ರೀಗಳ ದಿವ್ಯಾಶಿರ್ವಾದ ಲಭಿಸುತ್ತಿರುವುದು ಅತ್ಯಂತ ಅಭಿನಂದನೀಯ ಎಂದರು.

ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಮಾತನಾಡಿ, ರಾಮರಾಜ್ಯ ನಿಮಾರ್ಣದೆಡೆಗಿನ ಕಲ್ಪನೆ ಸಾಕಾರಕ್ಕಾಗಿ ಪ್ರತಿಯೊಬ್ಬರೂ ಸಮಾಜಮುಖಿಯಾಗಿ ಸಕ್ರಿಯರಾಗಬೇಕು. ಚಾತುಮಾರ್ಸ್ಯದ ಅವಧಿಯಲ್ಲಿ ದೆಹಲಿಯಲ್ಲಿ ಮಠದ ಕಾರ್ಯಚಟುವಟಿಕೆ ವಿಸ್ತಾರಗೊಳಿಸುವ ಪ್ರಯತ್ನ ನಡೆಸಲಾಗುವುದು.

ವಿಶ್ವಹಿಂದು ಪರಿಷತ್ತಿನ ಅಂತಾರಾಷ್ಟ್ರೀಯ ಅಧ್ಯಕ್ಷ ಅಲೋಕ್​ ಕುಮಾರ್​ ಅಧ್ಯಕ್ಷತೆ ವಹಿಸಿದ್ದರು. ಸಂಸದ ಕೋಟ ಶ್ರೀನಿವಾಸ ಪೂಜಾರಿ, ಬಿ.ವೈ. ರಾಘವೇಂದ್ರ, ದೆಹಲಿ ಮೇಯರ್​ ಪರ್ವೇಶ್​ ವಾಹಿ, ಮಾಜಿ ಸಂಸದ ರಮೇಶ್​ ಬಿಧೂರಿ ಉಪಸ್ಥಿತರಿದ್ದರು.
ಕೇಂದ್ರೀಯ ಸಂಸತ ವಿವಿ ಉಪಕುಲಪತಿ ಡಾ. ಶ್ರೀನಿವಾಸ ವರಖೇಡಿ ಪ್ರಸ್ತಾವನೆಗೈದರು. ವಿಹಿಂಪ ಪ್ರಾಂತ ಸಂಘಟನಾ ಕಾರ್ಯದರ್ಶಿ ಸುಬೋಧ್​ ಚಂದ್ರ ಸ್ವಾಗತಿಸಿದರು. ಹಿರಿಯ ವಿದ್ವಾಂಸ ಡಾ. ವೀರನಾರಾಯಣ ಪಾಂಡುರಂಗಿ, ಬ್ರಹ್ಮೋಸ್​ ನಿರ್ದೇಶಕ ಪ್ರೊ. ಜಯತೀರ್ಥ್​ ಜೋಶಿ , ವೇದವ್ಯಾಸ ಗುರುಕುಲ ನಿರ್ದೇಶಕ ಡಾ.ವಿಠೋಬಾಚಾರ್ಯ ಉಪಸ್ಥಿತರಿದ್ದರು .
ಸಮಿತಿ ಕಾರ್ಯದರ್ಶಿ ವಾಸುದೇವ ಭಟ್​ ಪೆರಂಪಳ್ಳಿ , ಅಶ್ವಿನ್​ ಕಕ್ರಣ್ಣಾಯ, ಕೃಷ್ಣಮೂರ್ತಿ ಭಟ್​ , ಮಹಾನಿಧಿ ಆಚಾರ್ಯ ಸಹಕರಿಸಿದರು. ಈ ಸಂದರ್ಭದಲ್ಲಿ ಹಿರಿಯ ವಿದ್ವಾಂಸ ತಿರುಮಲ ಕುಲಕರ್ಣಿ ಆಚಾರ್ಯರು ಅನುವಾದಿಸಿದ ಆಚಾರ್ಯ ಮಧ್ವರ ಜೀವನ ಚರಿತ್ರೆಯ ಹಿಂದಿ ಅವತರಣಿಕೆಯನ್ನು ಪ್ರಹ್ಲಾದ್​ ಜೋಶಿ ಬಿಡುಗಡೆಗೊಳಿಸಿದರು. ಮಠದ ನವೀಕರಣ ಕಾಮಗಾರಿ ನಿರ್ವಹಿಸಿದ ಇಂಜಿನಿಯರ್​ ಸಂತೋಷ್​ ಬೆಂಗಳೂರು , ರಿಶಿರಾಜ್​ ದೆಹಲಿ ಅವರನ್ನು ಶ್ರೀಗಳು ಸನ್ಮಾನಿಸಿದರು. ಸಭಾಕಾರ್ಯಕ್ರಮಕ್ಕೂ ಮುನ್ನ ಶ್ರೀಗಳನ್ನು ಸಾಲಂಕೃತ ವಾಹನದಲ್ಲಿ ಕುಳ್ಳಿರಿಸಿ ಭವ್ಯ ಶೋಭಾಯಾತ್ರೆಯ ಮೂಲಕ ಮಂದಿರಕ್ಕೆ ಬರಮಾಡಿಕೊಳ್ಳಲಾಯಿತು.