ವೃದ್ಧನ ಬ್ಯಾಂಕ್​ ಖಾತೆಯಿಂದ 1.60 ಲಕ್ಷ ರೂ. ಎಗರಿಸಿದ ಶುಶ್ರೂಷಕ

0
6

ಉಡುಪಿ : ಬ್ರಹ್ಮಾವರ ಯಡ್ತಾಡಿ ಗ್ರಾಮದ ಸೈಬರ್​ಕಟ್ಟೆಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರ ಆರೈಕೆಗೆಂದು ಬಂದಿದ್ದ ಹೋಮ್​ ನರ್ಸ್​ ರೋಗಿಯ ಮೊಬೈಲ್​ ಬಳಸಿ ಯುಪಿಐ ಮೂಲಕ 1.60 ಲಕ್ಷ ರೂ. ಹಣವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡು ವಂಚಿಸಿದ ಟನೆ ನಡೆದಿದೆ.

ಯಡ್ತಾಡಿ ಗ್ರಾಮದ ಸೈಬರ್​ಕಟ್ಟೆ ನಿವಾಸಿ ಭಾಗ್ಯಲಕ್ಷ್ಮೀ ಎಂಬುವರ ಪತಿ ಶ್ರೀನಿವಾಸ ಪೂಜಾರಿ ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರ ಆರೈಕೆಗಾಗಿ ಉಡುಪಿಯಲ್ಲಿರುವ ‘ವಿ ಕೇರ್​ ಹೋಮ್​ ನರ್ಸ್​ ಸಂಸ್ಥೆಯನ್ನು ಸಂಪರ್ಕಿಸಿ, 28,000 ರೂ. ಮುಂಗಡ ಹಣ ಪಾವತಿಸಿದ್ದರು. ಸಂಸ್ಥೆಯವರು ಜೂನ್​ 25ರಂದು ಸಚಿನ್​ ಎಂಬ ಹೋಮ್​ ಬ್ರದರ್​ನನ್ನು ಕಳುಹಿಸಿಕೊಟ್ಟಿದ್ದರು. ಕೆಲ ದಿನಗಳ ಕಾಲ ಕೆಲಸದಲ್ಲಿದ್ದ ಸಚಿನ್​ ಜುಲೈ 7ರಂದು ತುರ್ತು ಕೆಲಸವಿದೆ ಎಂದು ಹೇಳಿ ತನ್ನ ಊರಿಗೆ ತೆರಳಿದ್ದ.

ವಂಚನೆ ಬೆಳಕಿಗೆ ಬಂದಿದ್ದು ಹೇಗೆ?

ಜುಲೈ 28ರಂದು ಶ್ರೀನಿವಾಸ್​ ಮಗಳು ತಮ್ಮ ತಂದೆಯ ಬ್ಯಾಂಕ್​ ಖಾತೆಯನ್ನು ಪರಿಶೀಲಿಸಿದಾಗ ಅಸಲಿ ವಿಷಯ ಹೊರಬಿದ್ದಿದೆ. ಸಚಿನ್​ ಜೂನ್​ 25 ರಿಂದ ಜುಲೈ 7 ರ ಅವಧಿಯಲ್ಲಿ ಶ್ರೀನಿವಾಸ ಪೂಜಾರಿ ಅವರ ಗಮನಕ್ಕೆ ಬಾರದಂತೆ ಅವರ ‘ಬ್ಯಾಂಕ್​ ಆಫ್​ ಬರೋಡಾ’ ಖಾತೆಯಿಂದ ಮೊಬೈಲ್​ ಯುಪಿಐ ಮೂಲಕ ಹಂತ-ಹಂತವಾಗಿ ಒಟ್ಟು 1,60,500 ರೂ. ಹಣವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿರುವುದು ಪತ್ತೆಯಾಗಿದೆ.

ವಿ ಕೇರ್​ ಹೋಮ್​ ನರ್ಸ್​ ಸಂಸ್ಥೆಯನ್ನು ವಿಚಾರಿಸಿದಾಗ ಈ ವಿಷಯಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಸಂಸ್ಥೆಯವರು ಹಾರಿಕೆ ಉತ್ತರ ನೀಡಿದ್ದಾರೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಆರೋಪಿ ಸಚಿನ್​ ಹಾಗೂ ಆತನಿಗೆ ಸಾಥ್​ ನೀಡಿದ ಸಂಸ್ಥೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಭಾಗ್ಯಲಕ್ಷ್ಮೀ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.