ಮಣಿಪಾಲದ 6 ಪಬ್​, ಬಾರ್​ಗಳ ಮೇಲೆ ಪೊಲೀಸರ ದಾಳಿ

0
20

ಉಡುಪಿ : ವಿದ್ಯಾರ್ಥಿಗಳಿಗೆ ಅಕ್ರಮವಾಗಿ ಹುಕ್ಕಾ ನೀಡುವುದು ಹಾಗೂ 21 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವಕ-&ಯುವತಿಯರಿಗೆ ಮದ್ಯ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಮಣಿಪಾಲ ವ್ಯಾಪ್ತಿಯ ಪಬ್​ ಹಾಗೂ ಬಾರ್​ಗಳ ಮೇಲೆ ದಿಢೀರ್​ ದಾಳಿ ನಡೆಸಿದ್ದಾರೆ.

ಮಣಿಪಾಲದ ಎಕ್ಸ್​ಟಸಿ ಪಬ್​, ಮಣಿಪಾಲದ ಡೌನ್​ ದಿ ರೋಡ್​ ಬಾರ್​ ಆ್ಯಂಡ್​ ರೆಸ್ಟೋರೆಂಟ್​, ಡೆಕ್ಸರ್​ ಬಾರ್​ ಆ್ಯಂಡ್​ ರೆಸ್ಟೋರೆಂಟ್​, ಈಶ್ವರನಗರದ ಸಾಯಿ ಸಾಗರ್​ ಬಾರ್​ ಮತ್ತು ರೆಸ್ಟೋರೆಂಟ್​, ಡಿ.ಟಿ ಬಾರ್​ ಆ್ಯಂಡ್​ ರೆಸ್ಟೋರೆಂಟ್​, ಜನನಿ ಬಾರ್​ ಆ್ಯಂಡ್​ ರೆಸ್ಟೋರೆಂಟ್​ ಮೇಲೆ ದಾಳಿ ಮಾಡಿದ್ದು, ಈ ವೇಳೆ ನಿಯಮ ಮೀರಿ ಮದ್ಯ ಸೇವಿಸುತ್ತಿದ್ದ 21 ವರ್ಷದೊಳಗಿನ 64 ಯುವಕರು, 23 ಯುವತಿಯರು ಹಾಗೂ 17 ವರ್ಷದ ಓರ್ವ ಅಪ್ರಾಪ್ತ ಯುವಕ ಪತ್ತೆಯಾಗಿದ್ದಾರೆ.

6 ಪ್ರಕರಣ ದಾಖಲು

ನಿಯಮ ಉಲ್ಲಂಘಿಸಿ ಅಪ್ರಾಪ್ತರಿಗೆ ಮತ್ತು ಯುವಜನತೆಗೆ ಮದ್ಯ ಸರಬರಾಜು ಮಾಡಿದ ಪಬ್​ ಮತ್ತು ಬಾರ್​ಗಳ ಮಾಲೀಕರು ಹಾಗೂ ಮ್ಯಾನೇಜರ್​ಗಳ ವಿರುದ್ಧ ಮಣಿಪಾಲ ಪೊಲೀಸ್​ ಠಾಣೆಯಲ್ಲಿ ಪ್ರತ್ಯೇಕವಾಗಿ 6 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.

ಕೋಟ್ಪಾ ಕಾಯ್ದೆ ಹಾಗೂ ಕರ್ನಾಟಕ ಅಬಕಾರಿ ಕಾಯ್ದೆ ಉಲ್ಲಂಘಿಸಿರುವ ಬಾರ್​ ಮತ್ತು ರೆಸ್ಟೋರೆಂಟ್​ಗಳ ಪರವಾನಗಿಯನ್ನು ಅಮಾನತುಗೊಳಿಸುವಂತೆ ಉಡುಪಿ ಜಿಲ್ಲಾಧಿಕಾರಿಗಳಿಗೆ ವರದಿ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.