ಬಿಲ್ಲವ ಸಮುದಾಯದ ಯುವಕರು ಭವಿಷ್ಯದ ದಿನಗಳಲ್ಲಿ ಮುಖ್ಯವಾಹಿನಿಗೆ ಬರಬೇಕು : ಮುದ್ರಾಡಿ ಮಂಜುನಾಥ ಪೂಜಾರಿ

0
5

ಹೆಬ್ರಿ ಸಂಘದ ಅಭಿವೃದ್ಧಿಗೆ ವಿಶೇಷ ಸಹಕಾರ : ಸುನಿಲ್ ಕುಮಾರ್

ಹೆಬ್ರಿ : ಹೆಬ್ರಿ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಆಶ್ರಯದಲ್ಲಿ ಬಿಲ್ಲವ ಯುವ ಘಟಕದ ನೇತ್ರತ್ವದಲ್ಲಿ ಹೆಬ್ರಿ ತಾಲ್ಲೂಕು ಮಟ್ಟದ ಕೆಸರಡ್‌ ಒಂಜಿದಿನ ಬಿರುವೆರ್ನ ಕೂಟ ಕಾರ್ಯಕ್ರಮವು ದಿನಾಂಕ 02/08/2026 ರ ಭಾನುವಾರ ಹೆಬ್ರಿ ತಾಣ ಅಂಬಡಿ ಗದ್ದೆಯಲ್ಲಿ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಾಜ್ಯದ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮುದ್ರಾಡಿ ಮಂಜುನಾಥ ಪೂಜಾರಿ ನಮ್ಮ ಬಿಲ್ಲವ ಸಮುದಾಯದ ಯುವಕರು ಭವಿಷ್ಯದ ದಿನಗಳಲ್ಲಿ ಮುಖ್ಯವಾಹಿನಿಗೆ ಬರಬೇಕು, ಸಾಮಾಜಿಕ, ರಾಜಕೀಯ ಮತ್ತು ಉದ್ಯಮ ರಂಗದಲ್ಲಿ ಸಕ್ರೀಯವಾಗಬೇಕು. ಸರ್ಕಾರದ ವಿವಿಧ ಅವಕಾಶವನ್ನು ಸವಲತ್ತುಗಳನ್ನು ಪಡೆದು ಮುಂದೆ ಬರಬೇಕು, ನಮ್ಮ ಸಮಾಜದ ಸೇವೆ ಮಾಡಿದ್ದರಿಂದ ಇಂದು ನನಗೆ ರಾಜ್ಯದ ನಮ್ಮ ಜನರ ಸೇವೆ ಮಾಡುವ ಅವಕಾಶ ನನಗೆ ಲಭಿಸಿದೆ, ಸಮಾಜದ ಜೊತೆಗೆ ನಿರಂತರವಾಗಿ ಇರುತ್ತೇನೆ, ಸಮಾಜಕ್ಕೆ ಇನ್ನಷ್ಟು ಶಕ್ತಿ ತುಂಬವ ಕೆಲಸವನ್ನು ಮಾಡಬೇಕಿದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕ ಸುನೀಲ್‌ ಕುಮಾರ್‌ ಮಾತನಾಡಿ ಯುವಕರನ್ನು ಒಗ್ಗೂಡಿಸಲು ಇಂತಹ ಕಾರ್ಯಕ್ರಮ ವೇದಿಕೆಯಾಗುತ್ತದೆ, ಕೆಸರಡ್‌ ಒಂಜಿ ದಿನ ಕಾರ್ಯಕ್ರಮದ ಮೂಲಕ ಯುವ ಸಮುದಾಯ ಕೃಷಿಯತ್ತ ಮತ್ತೆ ಆಕರ್ಷಿತರಾಗಬೇಕು, ಆಟಕ್ಕೆ ಮಾತ್ರ ಸೀಮಿತವಾಗದೆ ಕೆಸರಡ್‌ ಒಂಜಿ ದಿನದ ಪ್ರೇರಣೆಯಿಂದ ದೂರವಾದ ಕೃಷಿ ಬದುಕು ಮತ್ತೇ ಆರಂಭವಾಗಲಿ, ಕೃಷಿ ನಮ್ಮ ಬದುಕಿಗೆ ಅತ್ಯಂತ ಪ್ರಮುಖವಾಗಿದೆ, ಎಲ್ಲಾ ವಾಣಿಜ್ಯ ಉದ್ಯೋಗ ಉದ್ಯಮಗಳ ಜೊತೆಗೆ ಕೃಷಿ ಬೇಸಾಯ ಮಾಡಬೇಕು ಎಂದರು.
ಹೆಬ್ರಿ ಸಮುದಾಯ ಭವನದ ಮುಂದಿನ ಅಭಿವೃದ್ಧಿಗೆ ಶಾಸಕರ ನಿಧಿಯ ಅನುದಾನದ ಜೊತೆಗೆ ಸರ್ಕಾರದ ಮೂಲಕ ಇನ್ನಷ್ಟು ನೆರವು ದೊರಕಿಸುವ ಪ್ರಯತ್ನ ಮಾಡುತ್ತೇನೆ, ಸಂಘದ ಹವಾನಿಯಂತ್ರಿತ ಭವನ ನಿರ್ಮಾಣದ ಕನಸು ಸಾಕಾರಗೊಳ್ಳಲಿ ಎಂದು ಅಶಿಸಿದರು.

ಹೆಬ್ರಿ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಅಧ್ಯಕ್ಷ ಬೇಳಂಜೆ ಹರೀಶ ಪೂಜಾರಿ ಅಧ್ಯಕ್ಷತೆ ವಹಿಸಿ ನಮ್ಮ ಸಂಘವು ಇನ್ನಷ್ಟು ಅಭಿವೃದ್ಧಿಗೊಳ್ಳಬೇಕಿದೆ, ಯುವಕರು ಸೇರಿ ಸರ್ವರೂ ಕೈಜೋಡಿಸಬೇಕು, ಪ್ರವೀಣ್‌ ಪೂಜಾರಿ ನೇತ್ರತ್ವದಲ್ಲಿ ಬಿಲ್ಲವ ಯುವ ಘಟಕದ ಕೆಸರಡ್‌ ಒಂಜಿ ದಿನ ಅತ್ಯಂತ ಯಶಸ್ವಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಹೆಬ್ರಿ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಗೌರವಾಧ್ಯಕ್ಷ ಎಚ್. ಎಸ್.ಅಣ್ಣಪ್ಪ ಪೂಜಾರಿ, ಸ್ಥಾಪಕಾಧ್ಯಕ್ಷ ಎಚ್.ನಾರಾಯಣ ಪೂಜಾರಿ, ಹೆಬ್ರಿ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಬಿಲ್ಲವ ಯುವ ಘಟಕದ ಅಧ್ಯಕ್ಷ ಪ್ರವೀಣ್‌ ಪೂಜಾರಿ ಮುದ್ರಾಡಿ,
ಹೆಬ್ರಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ತಾರಾನಾಥ ಬಂಗೇರ ಮಹಿಳಾ ಘಟಕದ ಅಧ್ಯಕ್ಷೆ ಜಯಂತಿ ಪೂಜಾರಿ ಸಂಘದ ಪದಾಧಿಕಾರಿಗಳು, ಪ್ರಮುಖರು, ಮುಖಂಡರು, ಯುವ ಘಟಕ ಮತ್ತು ಮಹಿಳಾ ಘಟಕದ ಪದಾಧಿಕಾರಿಗಳು ಭಾಗವಹಿಸಿದ್ದರು.

ಹಿರಿಯರು, ಪುರುಷರು ಮತ್ತು ಮಹಿಳೆಯರು ಹಾಗೂ ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು.
ಶಿಕ್ಷಕರಾದ ಪ್ರಕಾಶ ಪೂಜಾರಿ ಮಾತಿಬೆಟ್ಟು ನಿರೂಪಿಸಿ ಬೇಳಂಜೆ ಹರೀಶ ಪೂಜಾರಿ ಸ್ವಾಗತಿಸಿ ಪ್ರವೀಣ ಪೂಜಾರಿ ಮುದ್ರಾಡಿ ವಂದಿಸಿದರು.

ಸಮಾರೋಪ : ಸಂಜೆ ಸಮಾರೋಪ ಮತ್ತು ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಿತು.

ಹೆಬ್ರಿ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಅಧ್ಯಕ್ಷ ಬೇಳಂಜೆ ಹರೀಶ ಪೂಜಾರಿ, ಮುನಿಯಾಲು ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಅಧ್ಯಕ್ಷ ಟಿ.ಮಂಜುನಾಥ ಪೂಜಾರಿ, ಬೆಳ್ವೆ ಅಲ್ಬಾಡಿ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಅಧ್ಯಕ್ಷ ರಾಜು ಪೂಜಾರಿ, ಶಿವಪುರ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಅಧ್ಯಕ್ಷ ದಿವಾನಂದ ಸಾಲಿಯಾನ್‌, ಹೆಬ್ರಿ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷ ಪೂಜಾರಿ ನೆಕ್ಕರಬೆಟ್ಟು, ಕೊಶಾಧಿಕಾರಿ ರತ್ನಾಕರ ಪೂಜಾರಿ ಕುಚ್ಚೂರು,
ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ರಮೇಶ್ ಪೂಜಾರಿ ಶಿವಪುರ ಯುವ ಘಟಕದ ಕಾರ್ಯದರ್ಶಿ ಸುನೀಲ್‌ ಪೂಜಾರಿ ಕನ್ಯಾನ, ಮಹಿಳಾ ಘಟಕದ ಕಾರ್ಯದರ್ಶಿ ಹೇಮಾವತಿ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.