ಉಡುಪಿಯ ಯಕ್ಷಗಾನಕಲಾರಂಗದ ಐವೈಸಿ ಸಭಾಭವನದಲ್ಲಿ ವಿಶಿಷ್ಟ ಧಾರ್ಮಿಕ ಕಾರ್ಯಕ್ರಮ ಜರುಗಿತು. ಸಂಸ್ಥೆಯ ಆಜೀವ ಸದಸ್ಯರಾದ ವೇದಮೂರ್ತಿ ಸೀತಾರಾಮ ಭಟ್ಟರು ಸಂಸ್ಥೆಯ ಕಾರ್ಯಚಟುವಟಿಕೆಯ ಕುರಿತು ತುಂಬಾ ಅಭಿಮಾನ ಉಳ್ಳವರು. ಸಮಾಜಪರ ಕಾಳಜಿಯಿಂದ ಕೆಲಸ ಮಾಡುತ್ತಿರುವ ಸಂಸ್ಥೆಯ ಕಾರ್ಯಕರ್ತರ ಶ್ರೇಯೋಭಿವೃದ್ಧಿಗೆ ನೂತನ ಕಟ್ಟಡದಲ್ಲಿ ಸತ್ಯನಾರಾಯಣ ಪೂಜೆ ಮಾಡಲು ಸಂಕಲ್ಪಿಸಿದ್ದೇನೆ ಅವಕಾಶ ಮಾಡಿಕೊಡಿ ಎಂದು ಎರಡು ವರ್ಷದಿಂದ ಕೇಳುತ್ತಾ ಬಂದಿದ್ದರು.

ಸ್ವಂತಕ್ಕೆ ಯಾವುದನ್ನೂ ಬಯಸದ ಸಂಸ್ಥೆಯ ನಾಯಕತ್ವ ಅದನ್ನು ಮುಂದೂಡುತ್ತಾ ಬಂದಿತ್ತು. ಕೊನೆಗೂ ಅವರ ಪ್ರೀತಿಗೆ ಮಣಿಯಲೇ ಬೇಕಾಯಿತು. ಆಗಸ್ಟ್ 2 ಸಂಕಷ್ಟಹರ ಚತುರ್ಥಿಯಂದು ಕಾಲ ಕೂಡಿ ಬಂದಿತು. ಸಂಸ್ಥೆಯ ಆಜೀವ ಸದಸ್ಯರು, ದಾನಿಗಳೂ ಆದ ವೇದಮೂರ್ತಿ ಕುಕ್ಕಿಕಟ್ಟೆ ರಾಮಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ಸಾಂಗವಾಗಿ ನೆರವೇರಿದ ಪೂಜೆಯಲ್ಲಿ ಪುರೋಹಿತರ ಸಂಘದ ಅಧ್ಯಕ್ಷರಾದ ರಾಧಾಕೃಷ್ಣ ಭಟ್, ಸಂಸ್ಥೆಯ ಸದಸ್ಯರಾದ ಶಶಿಕಾಂತ ಭಟ್, ನವೀನ ಐತಾಳ್, ಶ್ರೀಶ ಆಚಾರ್, ಕೃಷ್ಣಮೂರ್ತಿ ಆಚಾರ್ಯ, ಸತ್ಯನಾರಾಯಣ ಹೆಬ್ಬಾರ್, ಸತ್ಯನಾರಾಯಣ ಭಟ್ ಸಹಕರಿಸಿದರು.
ಅಧ್ಯಕ್ಷ ಎಂ. ಗಂಗಾಧರ ರಾವ್ ಉಪಸ್ಥಿತಿಯಲ್ಲಿ ವಿದ್ವಾನ್ ಪಂಜ ಭಾಸ್ಕರ ಭಟ್ಟರು ಸತ್ಯನಾರಾಯಣ ಕತೆಯ ಮಹತ್ತ್ವವನ್ನು ಸೊಗಸಾಗಿ ವಿವರಿಸಿ ಎಲ್ಲಾ ಕಾರ್ಯಕರ್ತರನ್ನು ಹರಸಿದರು. ಇದೇ ಸಂದರ್ಭದಲ್ಲಿ ವಿದ್ವಾನ್ ಭಾಸ್ಕರ ಭಟ್ಟರನ್ನು ಸೂರು ನೂರರ ಸಡಗರಲ್ಲಿ ಮನೆಯ ಪ್ರಾಯೋಜಕತ್ವ ವಹಿಸಿದವರಿಗೆ ಕೊಡಮಾಡಿದ ಶಾಲು, ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಸೀತಾರಾಮ ಭಟ್ಟರು ತುಂಬಾ ಭಾವುಕರಾಗಿ, ಸಮರ್ಥ ನಾಯಕತ್ವ, ಅರ್ಪಣಾಭಾವದ ಕಾರ್ಯಕರ್ತರ ಅನನ್ಯ ಸಾಧನೆಗೆ ಶುಭ ಹಾರೈಸಿ ಅಭಿನಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಮಾತನಾಡಿ ಸಂಸ್ಥೆ ಮಾಡುತ್ತಿರುವ ಕೆಲಸ ನೋಡಿ ಕೆಲವೊಮ್ಮೆ ನಮಗೇ ಆಶ್ಚರ್ಯವಾಗುತ್ತದೆ, ದಾನಿಗಳು ನಮ್ಮ ಮೇಲಿಟ್ಟಿರುವ ಪ್ರೀತಿ ವಿಶ್ವಾಸ ನೀಡುತ್ತಿರುವ ಸಹಕಾರಕ್ಕೆ ವಿಸ್ಮಿತರಾಗುತ್ತೇವೆ. ಅವರ ನಿರೀಕ್ಷೆ ಹುಸಿಗೊಳಿಸದಿರುವ ಹೊಣೆಗಾರಿಕೆ ನಮ್ಮ ಮೇಲಿದೆ.
ಆ ಕಾರಣದಿಂದಲೇ ಕೆಲವೊಮ್ಮೆ ಆತಂಕವೂ ಆಗುತ್ತದೆ. ಸಂಸ್ಥೆಯ ಕಾರ್ಯಕರ್ತರ ಶ್ರೇಯೋಭಿವೃದ್ಧಿಗೆ ಮೂರನೆಯ ವ್ಯಕ್ತಿಯೊಬ್ಬರು ಹರಕೆಹೊತ್ತ ಸಂದರ್ಭ ಇರಲಿಕ್ಕಿಲ್ಲ. ಕಲಾರಂಗದ ಹಲವು ಅನನ್ಯ ಘಟನೆಗಳಲ್ಲಿ ಇದೂ ದಾಖಲಾಗ ಬೇಕಾದುದು, ಸೀತಾರಾಮ ಭಟ್ಟರು ಶುಭ ಆಶೀರ್ವಾದದೊಂದಿಗೆ ಎಲ್ಲ ಕಾರ್ಯಕರ್ತರಿಗೆ ಉಡುಗೊರೆ ನೀಡಿ ಋಣಭಾರ ಹೆಚ್ಚಿಸಿದ್ದಾರೆ, ಅವರಿಗೆ ನಾವೆಲ್ಲ ಕೃತಜ್ಞರಾಗಿದ್ದೇವೆ ಎಂದರು.

