ಮಣಿಪಾಲ ಬಬ್ಬುಸ್ವಾಮಿ ದೈವಸ್ಥಾನದಲ್ಲಿ 105 ಬಗೆ ಆಟಿ ಖಾದ್ಯ

0
26

ಉಡುಪಿ : ಮಣಿಪಾಲದ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ಗುರುವಾರ ಆಟಿ ತಿಂಗಳಿನ ತುಳು ಸಾಂಪ್ರದಾಯಿಕ ಅಡುಗೆಗಳ ಆಹಾರೋತ್ಸವದಲ್ಲಿ 105 ಬಗೆಯ ಸಾಂಪ್ರದಾಯಿಕ ಆಟಿದ ತಿನಿಸು ಸವಿಯಲು ಜನಜಂಗುಳಿ ನೆರೆದಿದೆ.

ಒಟ್ಟು ಆರು ಬಫೆ ಕೌಂಟರ್​ಗಳಲ್ಲಿ 18 ಸಾವಿರಕ್ಕೂ ಅಧಿಕ ಮಂದಿ ಭೋಜನ ಸ್ವೀಕರಿಸಿದರು. ಪ್ರತಿಯೊಂದು ಖಾದ್ಯವೂ ಕರಾವಳಿಯ ಮನೆಮಾತಾದ ಸಾಂಪ್ರದಾಯಿಕ ಅಡುಗೆ ವಿಧಾನದಲ್ಲೇ ತಯಾರಾಗಿತ್ತು.

ಭೋಜನದಲ್ಲಿ ಚಿತ್ರಾನ್ನ, ಪುಳಿಯೋಗರೆ, ಇಂದ್ರಾಣಿ ರೈಸ್​, ಗೀ ರೈಸ್​, ಬಟಾಣಿ ಗಸಿ, ಕೂಮಾರ್, ಕೊಚ್ಚಿಗೆ ಅನ್ನ, ಟೊಮಾಟೊ ರೈಸ್​ ಬಾತ್​, ಪುದಿನ ರೈಸ್​, ವಿವಿಧ ಬಗೆಯ ಪೋಡಿಗಳು, ಹಲಸಿನ ಬೀಜ ಚಟ್ನಿ, ಕೆಸುವಿನ ಎಲೆ ಚಟ್ನಿ, ಮಾವಿನಕಾಯಿ ಚಟ್ನಿ, ಮೊಳಕೆ ಹೆಸರು-ಬಟಾಟೆ ಗಸಿ, ಕಣಿಲೆ ಗಸಿ, ಪೆಜಕಾಯಿ ಗಸಿ, ಕುಡುತ ಸಾರ್​, ಕುಂಬಳಕಾಯಿ ಮೊಸರು ಹುಳಿ, ಬೆಂಡೆ ಪುಳಿಮುಂಚಿ, ತೇವು ಗಸಿ, ತೊಜಂಕ್​-ಅಂಬಡೆ ಸುಕ್ಕ, ಸೂರನ್​ ಕಡ್ಲೆ ಗಸಿ, ಬೂದಿಕುಂಬಳ ಮೊಸರು ಹುಳಿ ಸೇರಿದಂತೆ ನಾನಾ ಬಗೆಯ ಸಾಂಪ್ರದಾಯಿಕ ಖಾದ್ಯಗಳಿದ್ದವು.

ಇದರ ಜೊತೆಗೆ ಮೂಡೆ, ಬಾಳೆ ಎಲೆ ಗಟ್ಟಿ, ಅರಿಶಿನ ಎಲೆ ಗಟ್ಟಿ, ಹಲಸಿನ ಹಣ್ಣಿನ ಗಟ್ಟಿ, ಪತ್ರೋಡೆ, ಅಕ್ಕಿ ರೊಟ್ಟಿ, ಪರಡಿ ಪಾಯಸ, ಕಡ್ಲೆಬೇಳೆ ಪಾಯಸ, ಮಣ್ಣಿ, ಮುಳ್ಕ ಸೇರಿದಂತೆ ಹಲವು ಅಪರೂಪದ ಆಟಿದ ವಿಶೇಷ ತಿನಿಸುಗಳು ಗಮನಸೆಳೆದವು.

ಬೆಳಗ್ಗಿನಿಂದಲೇ ದೈವಸ್ಥಾನದ ಆವರಣ ಹಾಗೂ ಸುತ್ತಮುತ್ತಲಿನ ರಸ್ತೆಯಲ್ಲಿ ಜನರು ಸಾಲುಗಟ್ಟಿ ನಿಂತ ದೃಶ್ಯ ಕಂಡುಬಂತು. ಭೋಜನ ಸವಿಯಲು 1 ಕಿಮೀವರೆಗೆ ಸರತಿ ಸಾಲು ನಿಮಾರ್ಣವಾಗಿತ್ತು. ಜನಸಂದಣಿಯನ್ನು ನಿಯಂತ್ರಿಸಲು ಸ್ವಯಂಸೇವಕರು ಹಾಗೂ ದೇವಸ್ಥಾನದ ಸಿಬ್ಬಂದಿ ನಿರಂತರವಾಗಿ ಕಾರ್ಯನಿರ್ವಹಿಸಿದರು. ಭೋಜನದಲ್ಲಿ ಭಾಗವಹಿಸಿದ್ದ ಅನೇಕರು ಇಂತಹ ಅಪರೂಪದ ತಿನಿಸುಗಳನ್ನು ಒಂದೇ ಕಡೆ ಉಚಿತವಾಗಿ ಸವಿಯುವ ಅವಕಾಶ ದೊರೆತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.