ನಕಲಿ ಸಹಿ, ಸೀಲು ಬಳಸಿ ₹33.50 ಲಕ್ಷ ದುರುಪಯೋಗ : ಮುಖ್ಯ ಬರಹಗಾರ್ತಿ ವಿರುದ್ಧ ಪ್ರಕರಣ

0
34

ತೆಕ್ಕಟ್ಟೆ, : ಹಾರ್ದಳ್ಳಿ-ಮಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿದ್ಕಲ್‌ಕಟ್ಟೆಯ ಎನ್‌ಆರ್‌ಎಲ್‌ಎಂ ಸಮೃದ್ಧಿ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದಲ್ಲಿ ಸುಮಾರು ₹33.50 ಲಕ್ಷ ಹಣ ದುರುಪಯೋಗಪಡಿಸಿಕೊಂಡಿರುವ ಆರೋಪದಡಿ ಮುಖ್ಯ ಬರಹಗಾರ್ತಿ ಅಶ್ವಿನಿ (33) ವಿರುದ್ಧ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

2022ರಿಂದ ಸಮೃದ್ಧಿ ಸಂಜೀವಿನಿ ಒಕ್ಕೂಟದ ಮುಖ್ಯ ಬರಹಗಾರ್ತಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅಶ್ವಿನಿ, ಒಕ್ಕೂಟದ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಕೋಶಾಧಿಕಾರಿಗಳ ಸಹಿ ಮತ್ತು ಸೀಲುಗಳನ್ನು ನಕಲು ಮಾಡಿ, ವಿವಿಧ ಸ್ವಸಹಾಯ ಸಂಘಗಳ ಸದಸ್ಯರ ನಕಲಿ ಸಹಿಗಳನ್ನು ಬಳಸಿಕೊಂಡು ಹಣವನ್ನು ಪಡೆಯಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಈ ಒಕ್ಕೂಟದಲ್ಲಿ ಒಟ್ಟು 54 ಸ್ವಸಹಾಯ ಸಂಘಗಳು ಇದ್ದು, 2022ರಿಂದ ಸರಕಾರದಿಂದ ಸುಮಾರು ₹52.50 ಲಕ್ಷ ಹಣ ಬಿಡುಗಡೆಯಾಗಿದೆ. ಹಣಕಾಸಿನ ವ್ಯವಹಾರಗಳು ಬಿದ್ಕಲ್‌ಕಟ್ಟೆ ಕೆನರಾ ಬ್ಯಾಂಕ್ ಶಾಖೆಯ ಮೂಲಕ ನಡೆಯುತ್ತಿದ್ದು, ಅಗತ್ಯಕ್ಕೆ ಅನುಗುಣವಾಗಿ ವಿವಿಧ ಸ್ವಸಹಾಯ ಸಂಘಗಳಿಗೆ ಹಣ ಹಂಚಿಕೆ ಮಾಡುವ ಜವಾಬ್ದಾರಿ ಮುಖ್ಯ ಬರಹಗಾರ್ತಿಯದ್ದಾಗಿತ್ತು.

ಆದರೆ ಸರಕಾರದಿಂದ ಬಿಡುಗಡೆಯಾದ ಹಣವನ್ನು ಸಂಬಂಧಪಟ್ಟ ಸ್ವಸಹಾಯ ಸಂಘಗಳಿಗೆ ಹಂಚಿಕೆ ಮಾಡದೆ, ಆರೋಪಿ ಅಶ್ವಿನಿ ತಾನು ಅಧ್ಯಕ್ಷೆಯಾಗಿರುವ ಮಂದಾರ ಸ್ವಸಹಾಯ ಸಂಘ ಸೇರಿದಂತೆ ಕೆಲವು ಸಂಘಗಳ ಸದಸ್ಯರ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಒಟ್ಟು ₹33.50 ಲಕ್ಷ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

ಮೊಬೈಲ್ ಸಂದೇಶ ಬಾರದಿದ್ದರಿಂದ ಪ್ರಕರಣ ಬೆಳಕಿಗೆ

ಒಕ್ಕೂಟದ ಬ್ಯಾಂಕ್ ಖಾತೆಯಲ್ಲಿ ನಡೆಯುತ್ತಿದ್ದ ಹಣಕಾಸಿನ ವ್ಯವಹಾರಗಳ ಕುರಿತು ಅಧ್ಯಕ್ಷರ ಮೊಬೈಲ್‌ಗೆ ನಿಯಮಿತವಾಗಿ ಸಂದೇಶಗಳು ಬರುತ್ತಿದ್ದವು. ಆದರೆ ಹಲವು ದಿನಗಳಿಂದ ಯಾವುದೇ ಸಂದೇಶ ಬಾರದ ಹಿನ್ನೆಲೆಯಲ್ಲಿ ಅಧ್ಯಕ್ಷರು ಬ್ಯಾಂಕ್ ಶಾಖೆಯಲ್ಲಿ ವಿಚಾರಿಸಿದಾಗ, ಒಕ್ಕೂಟದ ಹಣಕಾಸಿನ ವ್ಯವಹಾರಗಳ ಸಂದೇಶಗಳು ಮುಖ್ಯ ಬರಹಗಾರ್ತಿಯ ತಾಯಿಯ ಮೊಬೈಲ್ ಸಂಖ್ಯೆಗೆ ಹೋಗುತ್ತಿರುವುದು ಬೆಳಕಿಗೆ ಬಂದಿದೆ.

ಈ ವಿಚಾರವನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದ ಬಳಿಕ, ಅಧಿಕಾರಿಗಳು ಒಕ್ಕೂಟದ ಲೆಕ್ಕಪತ್ರಗಳು ಮತ್ತು ಬ್ಯಾಂಕ್ ವ್ಯವಹಾರಗಳನ್ನು ಪರಿಶೀಲನೆಗೆ ಒಳಪಡಿಸಿದ್ದಾರೆ. ಈ ವೇಳೆ ಹಣಕಾಸಿನ ಅವ್ಯವಹಾರದ ಆರೋಪಗಳು ಬೆಳಕಿಗೆ ಬಂದಿವೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಟ ಪೊಲೀಸರು ದೂರು ದಾಖಲಿಸಿಕೊಂಡು ಹಣಕಾಸಿನ ವ್ಯವಹಾರಗಳು, ನಕಲಿ ಸಹಿ-ಸೀಲು ಹಾಗೂ ಬ್ಯಾಂಕ್ ದಾಖಲೆಗಳ ಕುರಿತು ತನಿಖೆ ಮುಂದುವರಿಸಿದ್ದಾರೆ. ಆರೋಪಗಳ ಸತ್ಯಾಸತ್ಯತೆ ತನಿಖೆಯಿಂದ ತಿಳಿದುಬರಬೇಕಿದೆ.