ಮಲೆನಾಡಿನ ಪ್ರಖ್ಯಾತ ಚಂಡೆ ವಾದಕ ನಾಗರಾಜ್ ಆಚಾರ್ಯ ಹೊದಲ ಇನ್ನಿಲ್ಲ : ತೀರ್ಥಹಳ್ಳಿ ವಿಶ್ವಕರ್ಮ ಸಮಾಜದಿಂದ ಶ್ರದ್ಧಾಂಜಲಿ

0
29

ತೀರ್ಥಹಳ್ಳಿ : ಮಲೆನಾಡಿನ ಹೆಸರಾಂತ ‘ಶ್ರೀ ವಿಶ್ವಕರ್ಮ ಚಂಡೆ ಬಳಗ, ಹೊದಲ’ ಇದರ ಅಧ್ಯಕ್ಷರು ಹಾಗೂ ಪ್ರಸಿದ್ಧ ಚಂಡೆ ವಾದಕರಾದ ಶ್ರೀ ನಾಗರಾಜ್ ಆಚಾರ್ಯ ಹೊದಲ ಅವರು ಆಗಸ್ಟ್ 8ರಂದು ಶನಿವಾರ ಬೆಳಗಿನ ಜಾವ ಸುಮಾರು 1.35ಕ್ಕೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ನಿಧನರಾದರು. ಅವರ ಅಗಲಿಕೆಗೆ ತೀರ್ಥಹಳ್ಳಿ ವಿಶ್ವಕರ್ಮ ಸಮಾಜವು ತೀವ್ರ ಸಂತಾಪ ವ್ಯಕ್ತಪಡಿಸಿದೆ.

ನಾಗರಾಜ್ ಆಚಾರ್ಯ ಅವರು ತಮ್ಮ ಚಂಡೆ ಬಳಗದ ಮೂಲಕ ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಧರ್ಮಸ್ಥಳ ಶ್ರೀ ಮಂಜುನಾಥಸ್ವಾಮಿ ದೇವಸ್ಥಾನ, ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಅರೇಮಾದನಹಳ್ಳಿಯ ಶ್ರೀ ವಿಶ್ವಕರ್ಮ ಜಗದ್ಗುರು ಶ್ರೀ ಶಿವಸುಜ್ಞಾನ ಮಠ ಸೇರಿದಂತೆ ರಾಜ್ಯದ ಹಲವು ಪ್ರಮುಖ ಮಠ–ಮಂದಿರಗಳಲ್ಲಿ ಚಂಡೆ ವಾದನದ ಮೂಲಕ ಅನನ್ಯ ಸೇವೆ ಸಲ್ಲಿಸಿದ್ದರು.

ಉತ್ಸವ ಹಾಗೂ ಚಂಡೆ ವಾದನ ಕ್ಷೇತ್ರದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ್ದ ನಾಗರಾಜ್ ಆಚಾರ್ಯ ಅವರ ನಿಧನವು ಅವರ ಕುಟುಂಬಕ್ಕೆ ಮಾತ್ರವಲ್ಲದೆ, ವಿಶ್ವಕರ್ಮ ಸಮಾಜ ಹಾಗೂ ಕಲಾ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ. ಭಗವಂತನು ಮೃತರ ಆತ್ಮಕ್ಕೆ ಚಿರಶಾಂತಿ ನೀಡಲಿ. ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಕುಟುಂಬಸ್ಥರಿಗೆ ಹಾಗೂ ವಿಶ್ವಕರ್ಮ ಸಮಾಜದ ಬಂಧುಗಳಿಗೆ ಕರುಣಿಸಲಿ. ಅವರ ಮಕ್ಕಳಿಗೆ ಉತ್ತಮ ಆರೋಗ್ಯ, ವಿದ್ಯಾಭ್ಯಾಸ ಹಾಗೂ ಉಜ್ವಲ ಭವಿಷ್ಯ ದೊರೆಯುವಂತೆ ಶ್ರೀ ದೇವರು ಅನುಗ್ರಹಿಸಲಿ ಎಂದು ತೀರ್ಥಹಳ್ಳಿ ವಿಶ್ವಕರ್ಮ ಸಮಾಜ ಪ್ರಾರ್ಥಿಸಿದೆ.

ತೀರ್ಥಹಳ್ಳಿ ವಿಶ್ವಕರ್ಮ ಸಮಾಜ,

ವರದಿ: ಅರುಣ ಕುಂದ