ಮಂಗಳೂರಿನಲ್ಲಿ ಭಾರತೀಯ ಮದ್ದೂರ್ ಸಂಘದ ಬೃಹತ್ ಪ್ರತಿಭಟನೆ

0
31

ದ ಕ ಜಿಲ್ಲಾ ಭಾ.ಮ. ಸಂಘದ ವತಿಯಿಂದ ಆಗಸ್ಟ್ 18ರಂದು ಮಂಗಳೂರು ಟೌನ್ ಹಾಲ್ ಎದುರು ಬೃಹತ್ ಪ್ರತಿಭಟನೆ ನಡೆಯಲಿದೆ. ಕಾರ್ಮಿಕರಿಗೆ ಸೂಕ್ತ ವೇತನ, ಉದ್ಯೋಗ ಭದ್ರತೆ, ಪಿಂಚಣಿ, ಆರೋಗ್ಯ ರಕ್ಷಣೆ, ಸುರಕ್ಷಿತ ಕೆಲಸದ ವಾತಾವರಣವನ್ನು ಒದಗಿಸಬೇಕೆಂದು ನ್ಯಾಯಯುತ ಹಕ್ಕುಗಳಿಗಾಗಿ ಕಾರ್ಮಿಕರು ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿರುತ್ತಾರೆ.

ಇಎಸ್ಐ ವೇತನ ಮಿತಿಯನ್ನು ನೂರು ಶೇಕಡಾ ಹೆಚ್ಚಿಸಬೇಕು. ಮಾಸಿಕ ಪಿಂಚಣಿಯನ್ನು ಏಳುವರೆ ಸಾವಿರಕ್ಕೆ, ಇಪಿಎಫ್ ವೇತನ ಮಿತಿಯನ್ನು ನೂರು ಶೇಕಡ, ಬೋನಸ್ 18,000ಕ್ಕೆ, ಹೆಚ್ಚಿಸಬೇಕು.

ಗ್ರಾಚುಟಿ ಗರಿಷ್ಠ ಮಿತಿಯನ್ನು 40 ಲಕ್ಷಕ್ಕೆ, ರಾಷ್ಟ್ರೀಯ ಕನಿಷ್ಠ ಮಾಸಿಕ ವೇತನವನ್ನು ಮೂವತ್ತು ಸಾವಿರಕ್ಕೆ, ಶ್ರಮಸಂಹಿತೆಯಲ್ಲಿ ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿಗೊಳಿಸುವ ಕಾನೂನುಗಳನ್ನು ಖಚಿತಪಡಿಸಬೇಕೆಂದು ಒತ್ತಾಯಿಸುವ ಬೇಡಿಕೆಯ ಪತ್ರವನ್ನು ದ ಕ ಜಿಲ್ಲಾ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಹಾಗೂ ಕೇಂದ್ರ ಸರಕಾರಕ್ಕೆ ನೀಡಲಾಗುವುದು.

MRPL, NMPA (NMPT), KIOCL- ಸಂಸ್ಥೆಗಳಲ್ಲಿ ಖಾಲಿ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಿ, ಅರ್ಹ ಯುವಕರಿಗೆ ವೇತನ ಮತ್ತು ಭದ್ರತೆ ನೀಡಿ ನೇರ ಹಾಗೂ ಗುತ್ತಿಗೆ ಕಾರ್ಮಿಕರಿಗೆ ನ್ಯಾಯಯುತ ವೇತನ, ಕಾಲಕಾಲಕ್ಕೆ ವೇತನ ಪರಿಷ್ಕರಣೆ, ಮತ್ತು ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಕಾರ್ಮಿಕರಿಗೆ PF, ESI, ಗ್ರಾಚ್ಯುಟಿ, ಬೋನಸ್, ರಜೆ ಸೌಲಭ್ಯ ಹಾಗೂ ಪಿಂಚಣಿ ಸೌಲಭ್ಯಗಳನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು.

ಕಾರ್ಮಿಕರಿಗೆ ಸುರಕ್ಷತಾ ಸಾಧನಗಳು (PPE) ಮತ್ತು ಸುರಕ್ಷಿತ ಕೆಲಸದ ವಾತಾವರಣ ಒದಗಿಸಬೇಕು. ಕೆಲಸದ ಸ್ಥಳದಲ್ಲಿ ಅಪಘಾತ ಅಥವಾ ಮರಣ ಸಂಭವಿಸಿದರೆ ತ್ವರಿತ ಪರಿಹಾರ ಮತ್ತು ಕುಟುಂಬಕ್ಕೆ ಸಾಮಾಜಿಕ ಭದ್ರತೆ ನೀಡಬೇಕು. ನಿಯಮಿತ ಆರೋಗ್ಯ ತಪಾಸಣೆ ಮತ್ತು ವೈದ್ಯಕೀಯ ಸೌಲಭ್ಯ ಒದಗಿಸಬೇಕು. ರಾತ್ರಿ ಪಾಳಿ ಹಾಗೂ ಅಪಾಯಕಾರಿ ಕೆಲಸ ಮಾಡುವವರಿಗೆ ಶಿಫ್ಟ್ ಸೌಲಭ್ಯ, OT (Overtime) ಪಾವತಿ ಮತ್ತು ಭತ್ಯೆಗಳನ್ನು ಖಚಿತಪಡಿಸಬೇಕು. ಕೆಲಸದ ಒತ್ತಡವನ್ನು ಕಡಿಮೆ ಮಾಡಬೇಕು. ಕಾರ್ಮಿಕರಿಗೆ ಕೌಶಲ್ಯಾಭಿವೃದ್ಧಿ, ತಾಂತ್ರಿಕ ತರಬೇತಿ ಹಾಗೂ ಅಪ್ರೆಂಟಿಸ್‌ಶಿಪ್, ಉದ್ಯೋಗಾವಕಾಶ ನೀಡಬೇಕು. ಮಹಿಳಾ ಕಾರ್ಮಿಕರಿಗೆ ಸುರಕ್ಷಿತ ಕೆಲಸದ ಸ್ಥಳ, ಆರೋಗ್ಯ ಸೌಲಭ್ಯ ಹಾಗೂ ಅಗತ್ಯ ಸುರಕ್ಷತಾ ವ್ಯವಸ್ಥೆ ನೀಡಬೇಕು. ಸೂಕ್ತ ಸಾರಿಗೆ ಮತ್ತು ವಸತಿ ಸೌಲಭ್ಯ ಕಲ್ಪಿಸಬೇಕು. ವೇತನವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಪಾವತಿಸಿ, ವೇತನ ಸ್ಲಿಪ್ ನೀಡಬೇಕು.

ದೂರುಗಳಿಗೆ ಕಾಲಮಿತಿಯೊಳಗೆ ಪರಿಹಾರ ನೀಡುವ ವ್ಯವಸ್ಥೆ ಹಾಗೂ ನಿಯಮಿತ ದ್ವಿಪಕ್ಷೀಯ ಸಭೆಗಳನ್ನು ನಡೆಸಬೇಕು ಎಂಬ ಹಲವಾರು ಬೇಡಿಕೆಗಳನ್ನು ಒತ್ತಾಯಿಸಿ ದ ಕ ಜಿಲ್ಲೆಯಲ್ಲಿ ಆಗಸ್ಟ್ 18ರಂದು ಮಂಗಳೂರಿನ ಪುರ ಭವನದ ಎದುರು ಬೃಹತ್ ಸಂಖ್ಯೆಯಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಪತ್ರಿಕಾಗೋಷ್ಠಿಯಲ್ಲಿ ಭಾರತೀಯ ಮಜದೂರ್ ಸಂಘದ ನಿಕಟ ಪೂರ್ವ ರಾಜ್ಯ ಉಪಾಧ್ಯಕ್ಷ ಭಗವಾನ್ ದಾಸ್, ಕುದುರೆಮುಖ ಮಜದೂರ್ ಸಂಘದ ಪ್ರಧಾನ ಕಾರ್ಯದರ್ಶಿ, ಉದಯಕುಮಾರ್ ಬಿ ಸಿ, ಮೂಡುಬಿದರೆ ತಾಲೂಕು ಅಧ್ಯಕ್ಷ ರಾಜೇಶ್ ಸುವರ್ಣ, ಉಪಾಧ್ಯಕ್ಷ ಪದ್ಮನಾಭ ಇರುವೈಲು, ಕೋಶಾಧಿಕಾರಿ ರಾಜೇಶ್ ಶೆಟ್ಟಿ, ಆಟೋರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ದೀಪಕ್ ರಾಜ್ ತಿಳಿಸಿದ್ದಾರೆ.

ಕಟ್ಟಡ ಕಾರ್ಮಿಕರಿಗೆ ಮಂಡಳಿ ಇರುವಂತೆ ರಿಕ್ಷಾ ಚಾಲಕ ಮಾಲಕರಿಗೂ ಮಂಡಳಿಯನ್ನು ರಚಿಸಿ, ನಿಧಿಯನ್ನು ಇರಿಸಿ ಅವರ ಅಭಿವೃದ್ಧಿಗೂ ಪ್ರಯತ್ನಿಸಬೇಕೆಂದು ಅಧ್ಯಕ್ಷ ದೀಪಕ್ ರಾಜ್ ಒತ್ತಾಯಿಸಿದ್ದಾರೆ.

ವರದಿ ರಾಯಿ ರಾಜ ಕುಮಾರ್