ಮಂಗಳೂರು: ವಿಮಾನ ಪ್ರಯಾಣಿಕರಿಗೆ ಹೆಚ್ಚಿನ ಸೌಲಭ್ಯ ಮತ್ತು ಆಕರ್ಷಕ ಕೊಡುಗೆಗಳನ್ನು ಒದಗಿಸುವ ಉದ್ದೇಶದಿಂದ ಅದಾನಿ ಏರ್ಪೋರ್ಟ್ ಹೋಲ್ಡಿಂಗ್ಸ್ ಲಿಮಿಟೆಡ್ (AAHL) ತನ್ನ ಎಂಟು ವಿಮಾನ ನಿಲ್ದಾಣಗಳಲ್ಲಿ ಮುಂದಿನ ಪೀಳಿಗೆಯ ‘ಅದಾನಿ ರಿವಾರ್ಡ್ಸ್’ ಸದಸ್ಯತ್ವ ಕಾರ್ಯಕ್ರಮವನ್ನು ಪರಿಚಯಿಸಿದೆ. ಈ ಯೋಜನೆಯಡಿ ಸದಸ್ಯರು ವಾರ್ಷಿಕ ₹65,000 ವರೆಗಿನ ವಿವಿಧ ಪ್ರಯೋಜನಗಳನ್ನು ಪಡೆಯಬಹುದಾಗಿದೆ.
ಮುಂಬೈ, ನವಿ ಮುಂಬೈ, ಅಹಮದಾಬಾದ್, ಲಕ್ನೋ, ಜೈಪುರ, ಗುವಾಹಟಿ, ಮಂಗಳೂರು ಮತ್ತು ತಿರುವನಂತಪುರಂ ವಿಮಾನ ನಿಲ್ದಾಣಗಳಲ್ಲಿ ಈ ಸದಸ್ಯತ್ವ ಯೋಜನೆ ಲಭ್ಯವಿರಲಿದೆ. ಅದಾನಿ ಒನ್ ಆ್ಯಪ್ನೊಂದಿಗೆ ಸಂಯೋಜಿತವಾಗಿರುವ ಈ ಕಾರ್ಯಕ್ರಮವು ಪ್ರಯಾಣ, ಊಟ, ಶಾಪಿಂಗ್, ಲೌಂಜ್ ಪ್ರವೇಶ ಸೇರಿದಂತೆ ವಿವಿಧ ವಿಮಾನ ನಿಲ್ದಾಣ ಸೇವೆಗಳನ್ನು ಒಂದೇ ವೇದಿಕೆಯಡಿ ಒದಗಿಸಲಿದೆ.
ಈ ಹಿಂದೆ ಜಾರಿಯಲ್ಲಿದ್ದ ಅದಾನಿ ರಿವಾರ್ಡ್ಸ್ 1.0 ಯೋಜನೆಯಡಿ 70 ಲಕ್ಷಕ್ಕೂ ಅಧಿಕ ಸದಸ್ಯರನ್ನು ಹೊಂದಿರುವ ಸಂಸ್ಥೆಯು ಇದೀಗ ಹೊಸ ಸೌಲಭ್ಯಗಳೊಂದಿಗೆ ಸದಸ್ಯತ್ವವನ್ನು ವಿಸ್ತರಿಸಿದೆ. ಪ್ರಯಾಣಿಕರ ಅಗತ್ಯತೆ ಮತ್ತು ಖರ್ಚಿನ ಆದ್ಯತೆಗಳಿಗೆ ಅನುಗುಣವಾಗಿ ವಿವಿಧ ಶ್ರೇಣಿಗಳ ಸದಸ್ಯತ್ವವನ್ನು ಪರಿಚಯಿಸಲಾಗಿದೆ.
ಊಟ, ಶಾಪಿಂಗ್ನಿಂದ ಲೌಂಜ್ ಪ್ರವೇಶದವರೆಗೆ ಹಲವು ಸೌಲಭ್ಯ
ಹೊಸ ಸದಸ್ಯತ್ವ ಯೋಜನೆಯಡಿ ಆಯ್ದ ಆಹಾರ ಮತ್ತು ಪಾನೀಯ ಮಳಿಗೆಗಳು ಹಾಗೂ ಚಿಲ್ಲರೆ ಅಂಗಡಿಗಳಲ್ಲಿ ರಿಯಾಯಿತಿ, ವಿಶೇಷ ಕೊಡುಗೆಗಳು ಮತ್ತು ಉಡುಗೊರೆ ವೋಚರ್ಗಳನ್ನು ಪಡೆಯಬಹುದು. ಸುಂಕ ರಹಿತ ಮಳಿಗೆಗಳಲ್ಲಿ ವಿಶೇಷ ರಿಯಾಯಿತಿಗಳ ಜೊತೆಗೆ ಸದಸ್ಯತ್ವದ ಅರ್ಹತೆಗೆ ಅನುಗುಣವಾಗಿ ಉಚಿತ ಲೌಂಜ್ ಪ್ರವೇಶ ಸೌಲಭ್ಯವೂ ಲಭ್ಯವಿದೆ.
ಇದರೊಂದಿಗೆ ಆದ್ಯತೆಯ ಭದ್ರತಾ ತಪಾಸಣೆ, ಮೀಸಲಾದ ಪ್ರವೇಶ ದ್ವಾರಗಳು, ಆದ್ಯತೆಯ ಗ್ರಾಹಕ ಸೇವೆ, ಪಾರ್ಕಿಂಗ್, ವ್ಯಾಲೆಟ್ ಸೇವೆ ಹಾಗೂ ವಿಮಾನ ನಿಲ್ದಾಣದೊಳಗಿನ ಸಂಚಾರ ಸಹಾಯ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಅಲ್ಲದೆ, ಪ್ರಣಾಮ್ ಮೀಟ್ ಆ್ಯಂಡ್ ಗ್ರೀಟ್ ಸೇವೆಯ ಮೂಲಕ ಪ್ರಯಾಣಿಕರಿಗೆ ವೈಯಕ್ತಿಕ ನೆರವು ನೀಡಲಾಗುತ್ತದೆ.
ಅದಾನಿ ಒನ್ ಆ್ಯಪ್ ಮೂಲಕ ಸೇವೆಗಳ ಬುಕ್ಕಿಂಗ್
ಪ್ರಯಾಣಿಕರು ಅದಾನಿ ಒನ್ ಆ್ಯಪ್ ಮೂಲಕ ತಮ್ಮ ಸದಸ್ಯತ್ವದ ಶ್ರೇಣಿ, ಲಭ್ಯವಿರುವ ಬಹುಮಾನಗಳು ಹಾಗೂ ವಿಶೇಷ ಕೊಡುಗೆಗಳನ್ನು ಪರಿಶೀಲಿಸಬಹುದು. ವಿಮಾನ ನಿಲ್ದಾಣಕ್ಕೆ ಆಗಮಿಸುವ ಮೊದಲೇ ಆಯ್ದ ಆಹಾರ, ಶಾಪಿಂಗ್, ಲೌಂಜ್, ಪಾರ್ಕಿಂಗ್ ಸೇರಿದಂತೆ ವಿವಿಧ ಸೇವೆಗಳನ್ನು ಬುಕ್ ಮಾಡುವ ಅವಕಾಶವೂ ಇದೆ.
ಅದಾನಿ ಏರ್ಪೋರ್ಟ್ ಹೋಲ್ಡಿಂಗ್ಸ್ ಲಿಮಿಟೆಡ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಅರುಣ್ ಬನ್ಸಾಲ್ ಮಾತನಾಡಿ, ಅದಾನಿ ರಿವಾರ್ಡ್ಸ್ನ ಮೊದಲ ಆವೃತ್ತಿಗೆ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, 70 ಲಕ್ಷಕ್ಕೂ ಅಧಿಕ ಮಂದಿ ನೋಂದಾಯಿಸಿಕೊಂಡಿದ್ದಾರೆ. ಹೊಸ ಸದಸ್ಯತ್ವ ಕಾರ್ಯಕ್ರಮವು ಪ್ರಯಾಣ, ಚಿಲ್ಲರೆ ವ್ಯಾಪಾರ, ಆಹಾರ ಮತ್ತು ಆತಿಥ್ಯ ಸೇವೆಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಮೂಲಕ ಪ್ರಯಾಣಿಕರ ಅನುಭವವನ್ನು ಮತ್ತಷ್ಟು ಉತ್ತಮಗೊಳಿಸಲಿದೆ ಎಂದು ತಿಳಿಸಿದ್ದಾರೆ.
ವಿಮಾನ ನಿಲ್ದಾಣದ ವಿವಿಧ ವಾಣಿಜ್ಯ ಸೇವೆಗಳಲ್ಲಿ ಪ್ರಯಾಣಿಕರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವುದು, ಡಿಜಿಟಲ್ ವಹಿವಾಟುಗಳಿಗೆ ಉತ್ತೇಜನ ನೀಡುವುದು ಹಾಗೂ ಗ್ರಾಹಕರೊಂದಿಗೆ ಉತ್ತಮ ಸಂಪರ್ಕ ಬೆಳೆಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.
ಪ್ರಸ್ತುತ ಅದಾನಿ ವಿಮಾನ ನಿಲ್ದಾಣಗಳ ವೈಮಾನಿಕೇತರ ಮಾರಾಟದಲ್ಲಿ ಡಿಜಿಟಲ್ ವಹಿವಾಟುಗಳು ಸುಮಾರು ಶೇ.25ರಷ್ಟು ಪಾಲು ಹೊಂದಿದ್ದು, ಹೊಸ ಸದಸ್ಯತ್ವ ಯೋಜನೆಯಿಂದ ಡಿಜಿಟಲ್ ಸೇವೆಗಳ ಬಳಕೆ ಮತ್ತಷ್ಟು ಹೆಚ್ಚುವ ನಿರೀಕ್ಷೆಯಿದೆ.
ಮಂಗಳೂರು ವಿಮಾನ ನಿಲ್ದಾಣವೂ ಈ ಯೋಜನೆಯ ಭಾಗವಾಗಿರುವುದರಿಂದ ಕರಾವಳಿ ಭಾಗದ ವಿಮಾನ ಪ್ರಯಾಣಿಕರಿಗೆ ಊಟ, ಶಾಪಿಂಗ್, ಲೌಂಜ್ ಹಾಗೂ ಇತರ ವಿಮಾನ ನಿಲ್ದಾಣದ ಸೇವೆಗಳಲ್ಲಿ ವಿಶೇಷ ಪ್ರಯೋಜನಗಳನ್ನು ಪಡೆಯಲು ಅವಕಾಶ ದೊರೆಯಲಿದೆ.

