ಬೆಂಗಳೂರು : ಹೋಟೆಲ್‌ಗಳ ಕಿಚನ್‌ಗಳ ಮೇಲೆ ತಪಾಸಣೆ ಹಾಗೂ ದಾಳಿ ನಡೆಸುತ್ತಿರುವ ಬೆನ್ನಲ್ಲೇ, ಇದೀಗ ರಾಜ್ಯದ ಹಾಸ್ಟೆಲ್‌ಗಳು ಮತ್ತು ಪಿಜಿಗಳಲ್ಲೂ ಆಹಾರದ ಗುಣಮಟ್ಟ ಪರಿಶೀಲನೆ ನಡೆಸಲು ಆರೋಗ್ಯ ಸಚಿವ ಯು.ಟಿ. ಖಾದರ್ ಸೂಚನೆ ನೀಡಿದ್ದಾರೆ.
ಆರೋಗ್ಯ ಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರಿ, ಖಾಸಗಿ ಹಾಗೂ ಸಹಕಾರಿ ಹಾಸ್ಟೆಲ್‌ಗಳಲ್ಲಿ ಆಹಾರ ತಪಾಸಣೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ತಪಾಸಣೆ ವೇಳೆ ಆಹಾರದ ಗುಣಮಟ್ಟ, ಅಡುಗೆಮನೆಯ ಸ್ವಚ್ಛತೆ ಹಾಗೂ ಆಹಾರ ಪದಾರ್ಥಗಳ ಸಂಗ್ರಹಣೆಯ ವಿಧಾನಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ ಎಂದು ಹೇಳಿದರು.
ಇದರೊಂದಿಗೆ ಪಿಜಿಗಳಲ್ಲಿಯೂ ಆಹಾರ ಪರೀಕ್ಷೆ ನಡೆಸಲಾಗುವುದು. ರಾಜ್ಯದ ವಿವಿಧೆಡೆ ಇರುವ ಹಾಸ್ಟೆಲ್‌ಗಳು ಮತ್ತು ಪಿಜಿಗಳಲ್ಲಿನ ಆಹಾರದ ಗುಣಮಟ್ಟವನ್ನು ಪರಿಶೀಲಿಸುವುದರ ಜೊತೆಗೆ ಕ್ಯಾಂಟೀನ್‌ಗಳಲ್ಲಿಯೂ ತಪಾಸಣೆ ನಡೆಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಬೆಂಗಳೂರು ಕೇಂದ್ರಿತವಾಗಿ ತಪಾಸಣೆ ನಡೆಯುತ್ತಿರುವಂತೆಯೇ ಜಿಲ್ಲಾ ಕೇಂದ್ರಗಳಲ್ಲಿಯೂ ಅಧಿಕಾರಿಗಳು ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ. ಯಾವುದೇ ಕಾರಣಕ್ಕೂ ಆಹಾರ ಗುಣಮಟ್ಟದ ತಪಾಸಣೆಯನ್ನು ನಿರ್ಲಕ್ಷಿಸಬಾರದು ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಹಾಸ್ಟೆಲ್, ಪಿಜಿ ಹಾಗೂ ಇತರ ಆಹಾರ ಸೇವಾ ಕೇಂದ್ರಗಳಿಗೆ ಬರುವವರಿಗೆ ಗುಣಮಟ್ಟದ ಮತ್ತು ಸುರಕ್ಷಿತ ಆಹಾರ ಒದಗಿಸಬೇಕು. ಗ್ರಾಹಕರು ಪಾವತಿಸುವ ಹಣಕ್ಕೆ ತಕ್ಕ ಗುಣಮಟ್ಟದ ಆಹಾರ ನೀಡಬೇಕು. ನಿಯಮಗಳನ್ನು ಉಲ್ಲಂಘಿಸುವ ಸಂಸ್ಥೆಗಳ ವಿರುದ್ಧ ತಪ್ಪಿಗೆ ಅನುಗುಣವಾಗಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಯು.ಟಿ. ಖಾದರ್ ಎಚ್ಚರಿಕೆ ನೀಡಿದ್ದಾರೆ.

