ಕುದುರೆಮುಖದಲ್ಲಿ ಆಫ್-ರೋಡ್ ಸಾಹಸಕ್ಕೆ ಸರ್ಕಾರದ ಬ್ರೇಕ್ : ಕಠಿಣ ಕ್ರಮದ ಎಚ್ಚರಿಕೆ

0
36

ಚಿಕ್ಕಮಗಳೂರು : ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಕುದುರೆಮುಖದಲ್ಲಿ ಆಯೋಜಿಸಲಾಗಿರುವ ‘ಆಫ್-ರೋಡ್ ಅಡ್ವೆಂಚರ್ ಡ್ರೈವ್’ ಸಾಹಸಯಾತ್ರೆಗೆ ರಾಜ್ಯ ಸರ್ಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಸಾಹಸಯಾತ್ರೆಯ ವೇಳೆ ಗ್ರಾಮೀಣ ರಸ್ತೆಗಳು ಹಾನಿಗೊಳಗಾದರೆ ಅಥವಾ ನದಿ, ತೊರೆ ಸೇರಿದಂತೆ ಜಲಮೂಲಗಳು ಕಲುಷಿತಗೊಂಡರೆ ಆಯೋಜಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಪರಿಸರ ಸಚಿವ ಈಶ್ವರ್ ಖಂಡ್ರೆ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರು ಮೂಲದ ಸಾಹಸ ಹವ್ಯಾಸಿಗಳ ಗುಂಪೊಂದು ಕುದುರೆಮುಖ ಭಾಗದಲ್ಲಿ ಈ ಆಫ್-ರೋಡ್ ಚಾಲನಾ ಕಾರ್ಯಕ್ರಮ ಆಯೋಜಿಸಿದೆ ಎನ್ನಲಾಗಿದ್ದು, ಮಳೆಯಿಂದಾಗಿ ಈಗಾಗಲೇ ಕೆಸರಿನಿಂದ ಕೂಡಿರುವ ಗುಡ್ಡಗಾಡು ಪ್ರದೇಶಗಳು, ನದಿ ಹಾಗೂ ತೊರೆಗಳನ್ನು ವಾಹನಗಳ ಮೂಲಕ ದಾಟುವ ಸಾಹಸ ಚಟುವಟಿಕೆಗಳು ನಡೆಯಲಿವೆ ಎಂದು ತಿಳಿದುಬಂದಿದೆ.

ಈ ಹಿನ್ನೆಲೆಯಲ್ಲಿ ಸಚಿವ ಈಶ್ವರ್ ಖಂಡ್ರೆ ಅವರು ಚಿಕ್ಕಮಗಳೂರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಲಿಖಿತ ನಿರ್ದೇಶನ ನೀಡಿದ್ದಾರೆ. ಯಾವುದೇ ಕಾರಣಕ್ಕೂ ಸಾಹಸ ಚಟುವಟಿಕೆಯಿಂದ ಪರಿಸರಕ್ಕೆ ಹಾನಿಯಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ವಿಶೇಷವಾಗಿ ಕುಡಿಯುವ ನೀರಿನ ಪ್ರಮುಖ ಮೂಲಗಳಾಗಿರುವ ನದಿಗಳು, ತೊರೆಗಳು ಹಾಗೂ ನಾಲೆಗಳಿಗೆ ಆಫ್-ರೋಡ್ ವಾಹನಗಳು ಪ್ರವೇಶಿಸದಂತೆ ತಡೆಯಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.

ಮಾರ್ಪಾಡು ಮಾಡಲಾದ ಹಾಗೂ ದೊಡ್ಡ ಗಾತ್ರದ ಆಫ್-ರೋಡ್ ಟೈರ್‌ಗಳನ್ನು ಹೊಂದಿರುವ ವಾಹನಗಳನ್ನು ಮಳೆಯಿಂದ ತೇವಗೊಂಡ ಗ್ರಾಮೀಣ ರಸ್ತೆಗಳಲ್ಲಿ ಅತಿ ವೇಗವಾಗಿ ಮತ್ತು ಆಕ್ರಮಣಕಾರಿಯಾಗಿ ಚಲಾಯಿಸುವುದರಿಂದ ರಸ್ತೆಗಳಿಗೆ ಹಾನಿಯಾಗುವುದರ ಜೊತೆಗೆ ಮಣ್ಣಿನ ಸವೆತವೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಸಚಿವರು ಆತಂಕ ವ್ಯಕ್ತಪಡಿಸಿದ್ದಾರೆ.

ಇಂತಹ ಚಟುವಟಿಕೆಗಳಿಂದ ಉಂಟಾಗುವ ಶಬ್ದ ಮತ್ತು ವಾಯು ಮಾಲಿನ್ಯದಿಂದ ಸ್ಥಳೀಯ ವನ್ಯಜೀವಿಗಳಿಗೂ ತೊಂದರೆಯಾಗುವ ಸಾಧ್ಯತೆ ಇದೆ. ನೈಸರ್ಗಿಕ ಪರಿಸರ, ಅರಣ್ಯ, ನದಿ, ಸರೋವರ ಹಾಗೂ ವನ್ಯಜೀವಿಗಳನ್ನು ಸಂರಕ್ಷಿಸುವುದು ಪ್ರತಿಯೊಬ್ಬ ನಾಗರಿಕನ ಮೂಲಭೂತ ಕರ್ತವ್ಯವಾಗಿದೆ ಎಂದು ಸಂವಿಧಾನದ ವಿಧಿ 51A(g) ಅನ್ನು ಸಚಿವರು ಉಲ್ಲೇಖಿಸಿದ್ದಾರೆ.

ಈ ಹಿಂದೆ ಹಾಸನ ಜಿಲ್ಲೆಯ ಸಕಲೇಶಪುರ ಹಾಗೂ ಚಿಕ್ಕಮಗಳೂರಿನ ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿ ನಡೆದಿದ್ದ ಆಫ್-ರೋಡಿಂಗ್ ಚಟುವಟಿಕೆಗಳ ವಿರುದ್ಧ ಅರಣ್ಯ ಇಲಾಖೆ ಕಠಿಣ ಕ್ರಮ ಕೈಗೊಂಡು 40ಕ್ಕೂ ಹೆಚ್ಚು ವಾಹನಗಳನ್ನು ಜಪ್ತಿ ಮಾಡಿತ್ತು.

ಕುದುರೆಮುಖದ ಸೂಕ್ಷ್ಮ ಪರಿಸರ ವ್ಯವಸ್ಥೆಯನ್ನು ಗಮನದಲ್ಲಿಟ್ಟುಕೊಂಡು ಸಾಹಸ ಚಟುವಟಿಕೆಗಳು ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ನಡೆಯುವಂತೆ ಸಂಬಂಧಪಟ್ಟ ಅಧಿಕಾರಿಗಳು ನಿಗಾ ವಹಿಸಬೇಕು ಎಂದು ಸಚಿವರು ಸೂಚಿಸಿದ್ದಾರೆ. ಪರಿಸರ ನಿಯಮಗಳನ್ನು ಉಲ್ಲಂಘಿಸಿ ರಸ್ತೆ, ಜಲಮೂಲ ಅಥವಾ ಅರಣ್ಯ ಪ್ರದೇಶಗಳಿಗೆ ಹಾನಿ ಉಂಟುಮಾಡಿದರೆ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ತೋರದೆ ಕಾನೂನು ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದಾರೆ.