ಕೆನರಾ ಕಾಲೇಜಿನಲ್ಲಿ ಎಂ.ಕಾಂ. ವಿದ್ಯಾರ್ಥಿಗಳಿಗೆ ಓರಿಯಂಟೇಶನ್ ಕಾರ್ಯಕ್ರಮ

0
7

ಮಂಗಳೂರಿನ ಕೆನರಾ ಕಾಲೇಜು (ಸ್ವಾಯತ್ತ)ದ ಸೆಮಿನಾರ್ ಹಾಲ್‌ನಲ್ಲಿ ಇತ್ತೀಚೆಗೆ ಎಂ.ಕಾಂ. ವಿಭಾಗದ ನೂತನ ವಿದ್ಯಾರ್ಥಿಗಳಿಗಾಗಿ ಓರಿಯಂಟೇಶನ್ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಸ್ವಾಗತಿಸುವುದರ ಜೊತೆಗೆ, ಅವರ ಶೈಕ್ಷಣಿಕ ಪಯಣಕ್ಕೆ ಸೂಕ್ತ ಮಾರ್ಗದರ್ಶನ ನೀಡುವುದು ಕಾರ್ಯಕ್ರಮದ ಉದ್ದೇಶವಾಗಿತ್ತು.

ಕಾರ್ಯಕ್ರಮವು ಸಾಂಪ್ರದಾಯಿಕವಾಗಿ ದೀಪ ಬೆಳಗಿಸುವ ಮೂಲಕ ಶುಭಾರಂಭಗೊಂಡಿತು. ವಾಣಿಜ್ಯ ಸ್ನಾತಕೋತ್ತರ ವಿಭಾಗದ ಸಂಯೋಜಕಿ ಸ್ವಾತಿ ನಾಯಕ್ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಕಾಲೇಜಿನಲ್ಲಿ ದೊರೆಯುವ ವಿವಿಧ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಕಲಿಕೆಯತ್ತ ಆಸಕ್ತಿ ಮತ್ತು ಉತ್ಸಾಹದಿಂದ ಮುನ್ನಡೆಯುವಂತೆ ಪ್ರೇರೇಪಿಸಿದರು.

ಎರಡು ವರ್ಷಗಳ ಎಂ.ಕಾಂ. ಕಲಿಕೆಯ ಅವಧಿಯನ್ನು ಕೇವಲ ವಿದ್ಯಾಭ್ಯಾಸಕ್ಕೆ ಸೀಮಿತಗೊಳಿಸದೆ, ಹೊಸ ವಿಷಯಗಳನ್ನು ಕಲಿಯುವುದರ ಜೊತೆಗೆ ವಿವಿಧ ಕೌಶಲ್ಯಗಳನ್ನು ಬೆಳೆಸಿಕೊಂಡು, ಕಾಲೇಜು ಜೀವನವನ್ನು ಸಂತೋಷದಿಂದ ಅನುಭವಿಸುವಂತೆ ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ನೂತನ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು. ಕಾಲೇಜಿನ ಪ್ರಾಂಶುಪಾಲೆ ಡಾ. ಪ್ರೇಮಲತಾ ವಿ. ಅವರು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ, ತಮ್ಮ ಗುರಿಯತ್ತ ಏಕಾಗ್ರತೆಯಿಂದ ಗಮನಹರಿಸಿ ಉತ್ತಮ ಸಾಧನೆ ಮಾಡುವಂತೆ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷೀಯ ನುಡಿಗಳಲ್ಲಿ ಕಾಲೇಜಿನ ಸಂಚಾಲಕರಾದ ಸಿಎ. ಜಗನ್ನಾಥ್ ಕಾಮತ್ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಎರಡು ವರ್ಷಗಳ ಅಧ್ಯಯನದ ಅವಧಿಯಲ್ಲಿ ದೊರೆಯುವ ಪ್ರತಿಯೊಂದು ಅವಕಾಶವನ್ನೂ ಸಮಯೋಚಿತವಾಗಿ ಬಳಸಿಕೊಳ್ಳುವಂತೆ ಕರೆ ನೀಡಿದರು. ಎಂ.ಕಾಂ. ಪದವಿ ಪೂರ್ಣಗೊಳಿಸಿದ ಬಳಿಕ ಸಂಸ್ಥೆ ಹಾಗೂ ಸಮಾಜಕ್ಕೆ ಅಮೂಲ್ಯ ಆಸ್ತಿಯಾಗುವಂತೆ ತಮ್ಮ ಸಾಮರ್ಥ್ಯ ಮತ್ತು ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು ಎಂದು ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕಿ ಶ್ವೇತಾ ಪೈ ಹಾಗೂ ಇತರ ಉಪನ್ಯಾಸಕರು ಉಪಸ್ಥಿತರಿದ್ದರು. ಉಪನ್ಯಾಸಕಿ ಸ್ನೇಹಾ ಪೈ ಅವರು ಕಾರ್ಯಕ್ರಮ ನಿರೂಪಿಸಿದರು.