ಮಹಾಕವಿ ಮಂದಾರರ “ಮಾಯಕದ ಬಿನ್ನೆದಿ” ಯಕ್ಷಗಾನ ಪ್ರಸಂಗ ಯಶಸ್ವಿ ಪ್ರದರ್ಶನ

0
25

​ಶ್ರೀ ಕೃಷ್ಣ ವಿದ್ಯಾಸಂಸ್ಥೆಯಲ್ಲಿ ಅರಳಿ ನಿಂತ ಯಕ್ಷಗಾನ ಸಂಭ್ರಮ

ಎರಡು ಭಾಷೆಯಲ್ಲಿ ರಾಮಾಯಣ ಬರೆದ ​ಮಹಾಕವಿ ಹಾಗೂ ‘ತುಳು ವಾಲ್ಮೀಕಿ’ ಎಂದೇ ಸಾಹಿತ್ಯ ಲೋಕದಲ್ಲಿ ಖ್ಯಾತರಾದ ಮಂದಾರ ಕೇಶವ ಭಟ್ ರಚಿಸಿದ ಸುಂದರ ಯಕ್ಷಗಾನ ಪ್ರಸಂಗ “ಮಾಯಕದ ಬಿನ್ನೆದಿ”ಯು ತುಳುವೇಶ್ವರಿ ಆಟ ಕೂಟ ತಂಡದ ವತಿಯಿಂದ, ಪ್ರಶಾಂತ ರೈ ಪುತ್ತೂರು ಇವರ ಸಂಯೋಜನೆಯಲ್ಲಿ ಅತ್ಯಂತ ವಿಜೃಂಭಣೆಯಿಂದ ಸಂಪನ್ನಗೊಂಡಿತು.

ಪ್ರಸಿದ್ಧ ಕಲಾವಿದರ ನಿಪುಣ ಹಿಮ್ಮೇಳ ಹಾಗೂ ಮುಮ್ಮೇಳದಲ್ಲಿ ಉತ್ತಮವಾಗಿ ಮೂಡಿಬಂದ ಈ ಪ್ರದರ್ಶನವು ಶ್ರೀ ಕೃಷ್ಣ ವಿದ್ಯಾಸಂಸ್ಥೆಯ ಆವರಣದಲ್ಲಿ ತುಳು ವರ್ಲ್ಡ್ ಫೌಂಡೇಶನ್ ಸಹಕಾರದೊಂದಿಗೆ ಕಲಾಪ್ರೇಮಿಗಳ ಮನಸೂರೆಗೊಂಡಿತು. ತುಳು ವರ್ಲ್ಡ್ ಸಂಸ್ಥೆಯ ಕೇಂದ್ರ ಘಟಕ ಮತ್ತು ವಲಯ ಘಟಕದ ಹಲವು ಪದಾಧಿಕಾರಿಗಳು ಉಪಸ್ಥಿತರಿದ್ದರು

​ಶಿಕ್ಷಣದೊಂದಿಗೆ ಸಂಸ್ಕೃತಿಯ ಅನಾವರಣ

​ಸಂಸ್ಕೃತಿ ಮತ್ತು ಗುಣಮಟ್ಟದ ಶಿಕ್ಷಣಕ್ಕೆ ಸದಾ ಪ್ರಾತಿನಿಧ್ಯ ನೀಡುವ ಶ್ರೀ ಕೃಷ್ಣ ವಿದ್ಯಾಸಂಸ್ಥೆಯು ದ್ವಾರಕ ಸಮೂಹ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಗೋಪಾಲಕೃಷ್ಣ ಭಟ್ ಅವರ ಆಡಳಿತಕ್ಕೆ ಒಳಪಟ್ಟಿದೆ.

ಇಲ್ಲಿ ಕೇವಲ ಅಕ್ಷರಾಭ್ಯಾಸ ಮಾತ್ರವಲ್ಲದೆ, ಯಕ್ಷಗಾನದಂತಹ ಪರಂಪರೆಯ ಕಲೆಯ ತರಬೇತಿಯನ್ನು ಮಕ್ಕಳಿಗೆ ಧಾರೆ ಎರೆಯಲಾಗುತ್ತಿದೆ.

ಈಗಾಗಲೇ ಇಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು ಹಲವು ಯಶಸ್ವಿ ಯಕ್ಷಗಾನ ಪ್ರದರ್ಶನಗಳನ್ನು ನೀಡಿರುವುದು ಸಂಸ್ಥೆಯ ಕಲಾಪರ ಕಾಳಜಿಗೆ ಹಿಡಿದ ಕನ್ನಡಿಯಾಗಿದೆ.

ಯಕ್ಷಗಾನ ಸಂಯೋಜಕರಾದ ಪ್ರಶಾಂತ ರೈ ಪುತ್ತೂರು ಮತ್ತು ತಂಡವು ಈಗಾಗಲೇ ಮಹಾಕವಿ ಮಂದಾರ ಕೇಶವ ಭಟ್ಟರ ‘ಮಂದಾರ ರಾಮಾಯಣ’, ‘ಬೀರದ ಬೊಲ್ಪು’ ಮುಂತಾದ ಕೃತಿಗಳ ವಾಚನ-ವ್ಯಾಖ್ಯಾನ ಕಾರ್ಯಕ್ರಮಗಳ ಮೂಲಕ ಅಪಾರ ಯಶಸ್ಸು ಗಳಿಸಿದ್ದು, ಇಂದಿನ ಯಕ್ಷಗಾನ ಪ್ರಸಂಗವು ಇವರ ಅವಿರತ ಸಾಧನೆಗೆ ಸಾಕ್ಷಿಯಾಗಿದೆ.

ವಿದ್ಯುಕ್ತ ಉದ್ಘಾಟನೆ ಮತ್ತು ಗಣ್ಯರ ಉಪಸ್ಥಿತಿ

​ಕಾರ್ಯಕ್ರಮಕ್ಕೂ ಮುನ್ನ ವಿಶಿಷ್ಟವಾದ ‘ಸೋಣದ ಸುಗಿಪು’ ಸಭಾ ಕಾರ್ಯಕ್ರಮವು ಜರುಗಿತು. ಶ್ರೀ ಕೃಷ್ಣ ದೇವರಿಗೆ ಹೂ ಸಮರ್ಪಿಸುವುದರ ಮೂಲಕ ಹಾಗೂ ಶ್ರೀಮತಿ ಭಾನುಮತಿ ಶೆಟ್ಟಿ ಅವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸುಸಂದರ್ಭದಲ್ಲಿ ವೇದಿಕೆಯಲ್ಲಿ ಗಣ್ಯರಾದ ಗೋಪಾಲಕೃಷ್ಣ ಭಟ್, ಅಶ್ವಿನಿ ಗೋಪಾಲಕೃಷ್ಣ ಭಟ್, ಮನೋಹರ ರೈ ಮನವಳಿಕೆ, ವೇದಾವತಿ ರಾಜೇಶ್, ಹೇಮನಾಥ ಶೆಟ್ಟಿ, ರಾಜೇಶ್ ಆಳ್ವ ಹಾಗೂ ಪರಮೇಶ್ವರ ಭಟ್ ಸೇರಿದಂತೆ ಹಲವರು ಉಪಸ್ಥಿತರಿದ್ದರು

ವಿಶೇಷ ಆಹ್ವಾನಿತರಾಗಿ ​ಕಾರ್ಯಕ್ರಮದ ಮೆರುಗನ್ನು ಇಮ್ಮಡಿಗೊಳಿಸಲು ಮಹಾಕವಿ ಮಂದಾರ ಕೇಶವ ಭಟ್ಟರ ಪುತ್ರಿ ಶಾರದಾಮಣಿ ಹಾಗೂ ಮಂದಾರರ ಮೊಮ್ಮಗ ಹಾಗೂ ಮಂದಾರ ಪ್ರತಿಷ್ಠಾನದ ಕಾರ್ಯದರ್ಶಿ ಪ್ರಮೋದ್ ಸಪ್ರೆ ಉಪಸ್ಥಿತರಿದ್ದರು.

ಕವಿಯ ರಕ್ತಸಂಬಂಧಿಗಳು ಮತ್ತು ಅವರ ಸಾಹಿತ್ಯ ವಾರಸುದಾರರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿರುವುದು ಮಂದಾರರ ಕಾವ್ಯಲೋಕ ಮತ್ತೊಮ್ಮೆ ಜೀವಂತಗೊಂಡ ಹರ್ಷವನ್ನು ಕಲಾಪ್ರೇಮಿಗಳಿಗೆ ನೀಡಿತು. ಇವರ ಉಪಸ್ಥಿತಿಯು ಇಡೀ ಸಮಾರಂಭಕ್ಕೆ ಒಂದು ಭಾವನಾತ್ಮಕ, ಸಾಂಸ್ಕೃತಿಕ ಗರಿಮೆಯನ್ನು ತಂದುಕೊಟ್ಟಿತು.

​ಇಂದಿನ ಆಧುನಿಕತೆಯ ಭರಾಟೆಯಲ್ಲಿ ನಮ್ಮ ಬೇರುಗಳನ್ನು, ಮಾತೃಭಾಷೆಯನ್ನು ಮತ್ತು ಸಾಂಪ್ರದಾಯಿಕ ಕಲೆಯನ್ನು ಮರೆಯುತ್ತಿರುವ ಸಮಾಜಕ್ಕೆ ‘ಮಂದಾರ ಕೇಶವ ಭಟ್’ ಅವರ ಬದುಕು ಮತ್ತು ಬರಹ ದೊಡ್ಡ ದಾರಿದೀಪವಾಗಿದೆ.

ಮಹಾಕವಿ ಮಂದಾರ ಕೇಶವ ಭಟ್ಟರು ತಮ್ಮ ಸಾಹಿತ್ಯದ ಮೂಲಕ ತುಳುನಾಡಿನ ಸಂಸ್ಕೃತಿಯನ್ನು ಹೇಗೆ ಅಜರಾಮರಗೊಳಿಸಿದರೋ, ಅದೇ ರೀತಿಯಲ್ಲಿ ಶ್ರೀ ಕೃಷ್ಣ ವಿದ್ಯಾಸಂಸ್ಥೆ ಮತ್ತು ಪ್ರಶಾಂತ ರೈ ಪುತ್ತೂರು ಅವರ ತಂಡವು ಯುವ ಪೀಳಿಗೆಗೆ ಪ್ರೋತ್ಸಾಹಿಸುವ ಮೂಲಕ ಸಮಾಜಮುಖಿ ಕೆಲಸ ಮಾಡುತ್ತಿದೆ.

ಶಿಕ್ಷಣದೊಂದಿಗೆ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ಇಂದಿನ ತುರ್ತು ಅಗತ್ಯವಾಗಿದ್ದು, ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಯುವ ಪೀಳಿಗೆಯಲ್ಲಿ ನೈತಿಕತೆ, ಭಾಷಾಭಿಮಾನ ಹಾಗೂ ಪರಂಪರೆಯ ಬಗ್ಗೆ ಹೆಮ್ಮೆ ಮೂಡಿಸುವುದರಲ್ಲಿ ಯಾವುದೇ ಸಂಶಯವಿಲ್ಲ.

-ಮಂದಾರ ರಾಜೇಶ್ ಭಟ್