ಉಡುಪಿ : ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆಗೆ ಜಾತಿ ನಿಂದನೆ ಮಾಡಿ, ದೌರ್ಜನ್ಯ ಎಸಗಿದ ಹಾಗೂ ಕೊಲೆ ಬೆದರಿಕೆಯೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳು ತಪ್ಪಿತಸ್ಥರು ಎಂದು ತೀಮಾರ್ನಿಸಿರುವ ಉಡುಪಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.
ಅಲೆವೂರು ಗ್ರಾಮದ ಪ್ರಗತಿ ನಗರದ ನಿವಾಸಿಗಳಾದ ಶೋಭಾ, ಆಕೆಯ ಮಗಳು ಚೈತ್ರ, ಭಾಸ್ಕರ ಶೆಟ್ಟಿ ಹಾಗೂ ಭರತ್ ಗಾಣಿಗ ಶಿಕ್ಷೆಗೆ ಗುರಿಯಾದವರು.
ಅಲೆವೂರು ಪ್ರಗತಿ ನಗರದಲ್ಲಿ ಸರ್ಕಾರಿ ಜಮೀನಿನಲ್ಲಿ ಸಣ್ಣ ಮನೆ ಕಟ್ಟಿಕೊಂಡು ವಾಸವಿದ್ದ ಪರಿಶಿಷ್ಟ ಜಾತಿಗೆ ಸೇರಿದ ಪಂಜಿಮಾ ಎಂಬವರ ಮನೆಯ ಮುಂದೆ ಪಕ್ಕದ ಮನೆಯವರಾದ ಶೋಭಾ ಹಾಗೂ ಚೈತ್ರ ನಿರಂತರವಾಗಿ ತ್ಯಾಜ್ಯ, ಕೋಳಿ ಮಾಂಸದ ಮೂಳೆ ಹಾಗೂ ಮದ್ಯದ ಖಾಲಿ ಬಾಟಲಿಗಳನ್ನು ಎಸೆದು ಕಿರುಕುಳ ನೀಡುತ್ತಿದ್ದರು.
ಇದನ್ನು ಪ್ರಶ್ನಿಸಿದಾಗ ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡುತ್ತಿದ್ದರು. 2019ರಲ್ಲಿ ಆರೋಪಿಗಳು ಪಂಜಿಮಾ ಹಾಗೂ ಅವರ ಗಂಡನಿಗೆ ಕೊಲೆ ಬೆದರಿಕೆ ಹಾಕಿದ್ದರು. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಸುದೀರ್ಘ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಿರಣ್ ಎಸ್. ಗಂಗಣ್ಣವರ್ ಆರೋಪಿಗಳಾದ ಶೋಭಾ ಮತ್ತು ಚೈತ್ರ ಅವರಿಗೆ 6 ತಿಂಗಳ ಸಾದಾ ಶಿಕ್ಷೆ ಹಾಗೂ ದಂಡ ವಿಧಿಸಿದ್ದಾರೆ. ಭಾಸ್ಕರ ಶೆಟ್ಟಿ ಹಾಗೂ ಭರತ್ ಗಾಣಿಗ ಅವರಿಗೆ ಕೊಲೆ ಬೆದರಿಕೆ ಹಾಗೂ ದೌರ್ಜನ್ಯಕ್ಕಾಗಿ 9 ತಿಂಗಳ ಸಾದಾ ಶಿಕ್ಷೆ ಮತ್ತು 2 ಸಾವಿರ ರೂ. ದಂಡ ವಿಧಿಸಲಾಗಿದೆ.

