ಜಿಲ್ಲಾ ಮಟ್ಟದ “ಉತ್ತಮ ಸೇವಾ ಸಂಸ್ಥೆ” ಪ್ರಶಸ್ತಿಗೆ ಭಟ್ಕಳದ ನಿನಾದ ಕಲ್ಚರಲ್ ಅಕಾಡೆಮಿ ಆಯ್ಕೆ

0
20

ಭಟ್ಕಳ : ಸಾಂಸ್ಕೃತಿಕ, ಸಾಹಿತ್ಯಿಕ ಹಾಗೂ ಸಂಗೀತ ಕ್ಷೇತ್ರದಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಭಟ್ಕಳದ ನಿನಾದ ಕಲ್ಚರಲ್ ಅಕಾಡೆಮಿಯನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಸ್ಕೃತಿ ಮತ್ತು ಸಾಹಿತ್ಯ ಪರಿಷತ್ತು (ರಿ.), ಬೆಂಗಳೂರು ಹಾಗೂ ಉತ್ತರ ಕನ್ನಡ ಜಿಲ್ಲಾ ಘಟಕದ ಸಹಯೋಗದಲ್ಲಿ ನೀಡಲಾಗುವ ಜಿಲ್ಲಾ ಮಟ್ಟದ “ಉತ್ತಮ ಸೇವಾ ಸಂಸ್ಥೆ” ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಸ್ಕೃತಿ ಮತ್ತು ಸಾಹಿತ್ಯ ಪರಿಷತ್ತಿನ ವತಿಯಿಂದ ನಡೆಯಲಿರುವ “ಸಾಂಸ್ಕೃತಿಕ ವೈಭವ, ಉತ್ತಮ ಸೇವಾ ಸಂಸ್ಥೆ ಹಾಗೂ ಕಾಯಕ ರತ್ನ ಪ್ರಶಸ್ತಿ ಪ್ರದಾನ ಮತ್ತು ಪದಗ್ರಹಣ ಸಮಾರಂಭ”ದಲ್ಲಿ ನಿನಾದ ಕಲ್ಚರಲ್ ಅಕಾಡೆಮಿಗೆ ಈ ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಗಾಯಕ, ಕವಿ ಹಾಗೂ ಸಂಘಟಕರಾದ ಉಮೇಶ ಮುಂಡಳ್ಳಿ ಅವರು ಹಾಗೂ ನಿನಾದ ಸಂಸ್ಥೆಯ ಪ್ರಧಾನ ಸಂಚಾಲಕರಾದ ರೇಷ್ಮಾ ಉಮೇಶ ನೇತೃತ್ವದಲ್ಲಿ ತಮ್ಮ ಸ್ವತಃ ಖರ್ಚಿನಲ್ಲಿ ಮುನ್ನಡೆಯುತ್ತಿರುವ ನಿನಾದ ಕಲ್ಚರಲ್ ಅಕಾಡೆಮಿ ಸಾಹಿತ್ಯ, ಸಂಗೀತ, ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ಸಾಮಾಜಿಕ ಜಾಗೃತಿಯ ಕ್ಷೇತ್ರಗಳಲ್ಲಿ ಹಲವು ವರ್ಷಗಳಿಂದ ನಿರಂತರವಾಗಿ ಸೇವೆ ಸಲ್ಲಿಸುತ್ತಿದೆ. ಸಂಸ್ಥೆಯು ತನ್ನ ದಶಮಾನೋತ್ಸವದ ಸಂಭ್ರಮದ ಸಂದರ್ಭದಲ್ಲಿ ಜಿಲ್ಲಾ ಮಟ್ಟದಲ್ಲಿ ಗುರುತಿಸಿಕೊಂಡು “ಉತ್ತಮ ಸಾಂಸ್ಕೃತಿಕ ಸೇವಾ ಸಂಸ್ಥೆ” ಪ್ರಶಸ್ತಿಗೆ ಭಾಜನವಾಗುತ್ತಿರುವುದು ಭಟ್ಕಳಕ್ಕೆ ಹೆಮ್ಮೆಯ ಸಂಗತಿಯಾಗಿದೆ.

ನಿನಾದ ಸಂಸ್ಥೆಯ ಸಾಂಸ್ಕೃತಿಕ ಪಯಣಕ್ಕೆ ದೊರೆತಿರುವ ಈ ಗೌರವವು ಸಂಸ್ಥೆಯೊಂದಿಗೆ ನಿರಂತರವಾಗಿ ಕೈಜೋಡಿಸಿದ ಕಲಾವಿದರು, ಸಾಹಿತಿಗಳು, ಗಾಯಕರು, ಸಂಘಟಕರು ಹಾಗೂ ಅಭಿಮಾನಿಗಳೆಲ್ಲರಿಗೂ ಸಲ್ಲುವ ಗೌರವವಾಗಿದೆ.

ಇದೇ ಸೆಪ್ಟೆಂಬರ್ 6 ರವಿವಾರದಂದು ಯಲ್ಲಾಪುರದ ಅಡಿಕೆ ಭವನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಸ್ಕೃತಿ ಮತ್ತು ಸಾಹಿತ್ಯ ಪರಿಷತ್ತಿನ ಉತ್ತರ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷರಾದ ಸಂತೋಷಕುಮಾರ ಪಾಟೀಲ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಕೆನರಾ ವೃತ್ತ ಶಿರಸಿಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ. ಹಿರಾಲಾಲ್, ಶಿರಸಿ ಉಪವಿಭಾಗಾಧಿಕಾರಿ ಚೇತನಕುಮಾರ್ ಆರ್.ಜಿ., ಶಿರಸಿ ಜಿಲ್ಲೆಯ ಉಪನಿರ್ದೇಶಕ ಡಿ.ಆರ್. ನಾಯ್ಕ, ಡಿಡಿಪಿಐ ಗೀತಾ ಪಾಟೀಲ, ಯಲ್ಲಾಪುರ ತಹಶೀಲ್ದಾರ ಮಧುಸೂಧನ ಕುಲಕರ್ಣಿ, ಶಿರಸಿ ತಹಶೀಲ್ದಾರ ಪುಟ್ಟರಾಜು ಗೌಡ, ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್. ವಾಸರೆ, ಶಿರಸಿ ಸ.ನೌ.ಸಂ. ಅಧ್ಯಕ್ಷ ಕಿರಣ ನಾಯ್ಕ ಜಿಲ್ಲಾ ಕಾರ್ಯಾಧ್ಯಕ್ಷೆ ಸಂಧ್ಯಾ ನಾಯ್ಕ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ನಿನಾದ ಕಲ್ಚರಲ್ ಅಕಾಡೆಮಿಗೆ ದೊರೆತಿರುವ ಈ ಜಿಲ್ಲಾ ಮಟ್ಟದ ಗೌರವವು ಭಟ್ಕಳದ ಸಾಹಿತ್ಯ–ಸಂಗೀತ–ಸಾಂಸ್ಕೃತಿಕ ಕ್ಷೇತ್ರದ ಸೇವೆಗೆ ಸಂದಿರುವ ಮಹತ್ವದ ಮಾನ್ಯತೆಯಾಗಿದ್ದು, ಸಂಸ್ಥೆಯ ದಶಮಾನೋತ್ಸವದ ಸಂಭ್ರಮಕ್ಕೆ ಮತ್ತಷ್ಟು ಮೆರುಗು ತಂದಿದೆ.