ಅಳದಂಗಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ಸೆ.15ರಂದು ತಾಲೂಕು ಮಟ್ಟದ ಖೋ-ಖೋ ಪಂದ್ಯಾಟ : ಸುವರ್ಣ ಮಹೋತ್ಸವ ಸಂಭ್ರಮ

0
18

ಅಳದಂಗಡಿ : ಬೆಳ್ತಂಗಡಿ ತಾಲೂಕಿನ ಸರ್ಕಾರಿ ಪ್ರೌಢಶಾಲೆ ಅಳದಂಗಡಿ ತನ್ನ ಸುವರ್ಣ ಮಹೋತ್ಸವದ ಸಂಭ್ರಮದತ್ತ ಹೆಜ್ಜೆ ಇಡುತ್ತಿರುವ ಸಂದರ್ಭದಲ್ಲಿ, ಸೆಪ್ಟೆಂಬರ್ 15ರಂದು ಶಾಲಾ ಮೈದಾನದಲ್ಲಿ ತಾಲೂಕು ಮಟ್ಟದ ಖೋ-ಖೋ ಪಂದ್ಯಾಟವನ್ನು ಆಯೋಜಿಸಲಾಗಿದೆ.

ಶಾಲೆಯು ತನ್ನ 50 ವರ್ಷಗಳ ಪಯಣದಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ನೀಡಿದ್ದು, ಅನೇಕ ವಿದ್ಯಾರ್ಥಿಗಳು ಇಂದು ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ, ಸ್ವಉದ್ಯೋಗ ಸೇರಿದಂತೆ ಜವಾಬ್ದಾರಿಯುತ ಜೀವನ ರೂಪಿಸಿಕೊಂಡಿದ್ದಾರೆ. ಶಿಕ್ಷಣದ ಜೊತೆಗೆ ಕ್ರೀಡಾ ಕ್ಷೇತ್ರದಲ್ಲಿಯೂ ಶಾಲೆ ವಿಶೇಷ ಸಾಧನೆ ಮಾಡಿದ್ದು, ಅದರಲ್ಲೂ ಖೋ-ಖೋ ಪಂದ್ಯಾಟದಲ್ಲಿ ಹಲವು ವಿದ್ಯಾರ್ಥಿಗಳು ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ.

ಹಿಂದೆ ಶಾಲೆಯ ಮೈದಾನದಲ್ಲಿ ಖೋ-ಖೋ ಆಟವಾಡಿ ಶಾಲೆಗೆ ಹೆಸರು ತಂದುಕೊಟ್ಟ ಹಿರಿಯ ವಿದ್ಯಾರ್ಥಿಗಳ ಸಿಹಿ ನೆನಪುಗಳನ್ನು ಮೆಲುಕು ಹಾಕುವ ಸಂದರ್ಭ ಇದೀಗ ಮತ್ತೊಮ್ಮೆ ಬಂದಿದೆ. ಇದೇ ಶಾಲೆಯ ಮೈದಾನದಲ್ಲಿ ತಾಲೂಕು ಮಟ್ಟದ ಖೋ-ಖೋ ಪಂದ್ಯಾಟ ನಡೆಯುತ್ತಿರುವುದು ಹಳೆಯ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಕ್ರೀಡಾಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.

ಸುವರ್ಣ ಮಹೋತ್ಸವದ ಸಂಭ್ರಮದ ಅಂಗವಾಗಿ ನಡೆಯಲಿರುವ ಈ ಕ್ರೀಡಾಕೂಟಕ್ಕೆ ಶಾಲೆಯ ಹಳೆಯ ವಿದ್ಯಾರ್ಥಿಗಳು, ಪೋಷಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶಾಲೆಯ ಸಾಧನೆಯ ಪಯಣಕ್ಕೆ ಸಾಕ್ಷಿಯಾಗುವಂತೆ ಶಾಲೆಯ ವತಿಯಿಂದ ಆಹ್ವಾನಿಸಲಾಗಿದೆ.

ಹಿರಿಯ ವಿದ್ಯಾರ್ಥಿ ಮನೋಹರ್ ಕುಮಾರ್ ಅವರು ಶಾಲೆಯ ಸುವರ್ಣ ಮಹೋತ್ಸವದ ಹಿನ್ನೆಲೆಯಲ್ಲಿ ಹಳೆಯ ವಿದ್ಯಾರ್ಥಿಗಳು ಮತ್ತೊಮ್ಮೆ ಶಾಲೆಗೆ ಆಗಮಿಸಿ ತಮ್ಮ ಸಿಹಿ ನೆನಪುಗಳನ್ನು ಹಂಚಿಕೊಳ್ಳುವಂತೆ ಮನವಿ ಮಾಡಿದ್ದಾರೆ.