ಅಜೆಕಾರು ಕಲಾಭಿಮಾನಿ ಬಳಗ ರಜತಪರ್ವ – ಮುಂಬಯಿ ಯಕ್ಷಗಾನ ಸಮ್ಮೇಳನ : ‘ಯಕ್ಷಗಾನ ಮುಂಬೆಳಗು’ ಸವಿ ಸಂಪುಟ ಬಿಡುಗಡೆ

0
24

ಇತರ ಪುಸ್ತಕಗಳ ಬಿಡುಗಡೆಗೆ ಅವಕಾಶ

ಮುಂಬಯಿ : ಅಜೆಕಾರು ಕಲಾಭಿಮಾನಿ ಬಳಗದ 25ನೇ ವರ್ಷದ ಸಂಭ್ರಮ ರಜತ ಪರ್ವಾಚರಣೆ ಅಂಗವಾಗಿ ಇದೇ ಅಕ್ಟೋಬರ್ 3 ಮತ್ತು 4ರಂದು ಮುಂಬೈ ಕುರ್ಲಾದ ಬಂಟರ ಭವನದಲ್ಲಿ ‘ಮುಂಬಯಿ ಯಕ್ಷಗಾನ ಸಮ್ಮೇಳನ – 2026’ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ 2 ದಿನ ಜರಗಲಿದೆ. ಯಕ್ಷಗಾನ ರಂಗದ ವಿವಿಧ ವಿಭಾಗಗಳಲ್ಲಿ ತಜ್ಞರಾದ ನಾಡು – ಹೊರನಾಡಿನ ಹಿರಿಯ ವಿದ್ವಾಂಸರು, ಸಂಶೋಧಕರು ಮತ್ತು ಲೇಖಕರ 50ಕ್ಕೂ ಮಿಕ್ಕಿದ ಅಧ್ಯಯನಾತ್ಮಕ ಬರಹಗಳನ್ನೊಳಗೊಂಡ ‘ಯಕ್ಷಗಾನ ಮುಂಬೆಳಗು’ ಎಂಬ ಸಂಗ್ರಹ ಯೋಗ್ಯವಾದ ಸವಿ ಸಂಪುಟವನ್ನು ಸಮಾರಂಭದಲ್ಲಿ ಬಿಡುಗಡೆಗೊಳಿಸಲಾಗುವುದು ಎಂದು ಸಮ್ಮೇಳನದ ಕಾರ್ಯಾಧ್ಯಕ್ಷ ಹಾಗೂ ಅಜೆಕಾರು ಕಲಾಭಿಮಾನಿ ಬಳಗದ ಅಧ್ಯಕ್ಷ ಅಜೆಕಾರು ಬಾಲಕೃಷ್ಣ ಶೆಟ್ಟಿ ತಿಳಿಸಿದ್ದಾರೆ.

ಕರ್ನಾಟಕ ಜಾನಪದ, ಯಕ್ಷಗಾನ ಮತ್ತು ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ, ಯಕ್ಷಗಾನ ಅರ್ಥಧಾರಿ ಪ್ರೊ|ಭಾಸ್ಕರ ರೈ ಕುಕ್ಕುವಳ್ಳಿ ಅವರು ಗ್ರಂಥದ ಪ್ರಧಾನ ಸಂಪಾದಕರಾಗಿರುವರು. ಕರ್ನಾಟಕ ರಾಜ್ಯದ ಪ್ರಥಮ ಸಮಗ್ರ ಯಕ್ಷಗಾನ ಸಮ್ಮೇಳನದ ಅಧ್ಯಕ್ಷರಾಗಿದ್ದ ಪಾರ್ತಿಸುಬ್ಬ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ವಿದ್ವಾಂಸ ಹಾಗೂ ಹಿರಿಯ ಅರ್ಥಧಾರಿ ಡಾ| ಎಂ.ಪ್ರಭಾಕರ ಜೋಶಿ ಮತ್ತು ಯಕ್ಷಗಾನ ಶಿಕ್ಷಕ ದೀವಿತ್ ಎಸ್.ಕೋಟ್ಯಾನ್ ಪೆರಾಡಿ ಸಂಪಾದನ ಸಲಹಾ ಮಂಡಳಿಯಲ್ಲಿದ್ದಾರೆ.

ಯಕ್ಷಗಾನ ಕೃತಿಗಳ ಬಿಡುಗಡೆ

ಸಮ್ಮೇಳನದಲ್ಲಿ ಅಜೆಕಾರು ಕಲಾಭಿಮಾನಿ ಬಳಗದ ‘ಯಕ್ಷ ರಜತಯಾನ’ ಸಮ್ಮೇಳನ ಸ್ಮರಣ ಸಂಚಿಕೆ, ಪ್ರಾ| ಭಾಸ್ಕರ ರೈ ಕುಕ್ಕುವಳ್ಳಿಯವರ ‘ಯಕ್ಷಾಲೋಕ’ ಯಕ್ಷಗಾನ ಸಂಪ್ರಬಂಧಗಳ ಸಂಕಲನ ಮತ್ತು ಭಾಗವತ ಹರೀಶ ಶೆಟ್ಟಿ ಸೂಡ ಅವರ ‘ಯಕ್ಷ ಪಂಚೋಲಿ’ ಐದು ಅರ್ಥ ಸಹಿತ ತುಳು ಪ್ರಸಂಗಗಳ ಸಂಚಯ ಬಿಡುಗಡೆಗೆ ಸಿದ್ಧವಾಗಿವೆ.
ಇದೇ ಸಂದರ್ಭದಲ್ಲಿ ಯಕ್ಷಗಾನಕ್ಕೆ ಸಂಬಂಧಿಸಿ ಇತರರು ಬರೆದ ನೂತನ ಕೃತಿಗಳನ್ನು ಬಿಡುಗಡೆ ಮಾಡಲು ಅವಕಾಶವಿದೆ.

ಲೇಖಕರು ತಮ್ಮ ಹೆಸರು, ವಿಳಾಸ; ಪುಸ್ತಕದ ಹೆಸರು ಮತ್ತು ಪ್ರಕಾಶನ ಸಂಸ್ಥೆಯ ವಿವರಗಳನ್ನು ಇದೇ ಸೆಪ್ಟೆಂಬರ್ 20ರ ಒಳಗೆ ತಿಳಿಸಬೇಕೆಂದು ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ ಸಮ್ಮೇಳನದ ಕಾರ್ಯಾಧ್ಯಕ್ಷ ಅಜೆಕಾರು ಬಾಲಕೃಷ್ಣ ಶೆಟ್ಟಿ (ಮೊಬೈಲ್: 9821880089) ಅಥವಾ ಪ್ರಧಾನ ಸಂಚಾಲಕ ಭಾಸ್ಕರ ರೈ ಕುಕ್ಕುವಳ್ಳಿ (ಮೊ.944 91616) ಅವರನ್ನು ಸಂಪರ್ಕಿಸಬಹುದೆಂದು ಅಜೆಕಾರು ಕಲಾಭಿಮಾನಿ ಬಳಗದ ಪ್ರಕಟಣೆ ತಿಳಿಸಿದೆ.