ಉಡುಪಿ : ನಗರದ ಸಿಟಿ ಬಸ್ ನಿಲ್ದಾಣದ ಪಕ್ಕದಲ್ಲಿರುವ ಸಾರ್ವಜನಿಕ ಶೌಚಾಲಯದಲ್ಲಿ ನಿಗದಿತ ದರಕ್ಕಿಂತ ಹೆಚ್ಚಿನ ಶುಲ್ಕವನ್ನು ಸಾರ್ವಜನಿಕರಿಂದ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಶೌಚಾಲಯದ ದರಪಟ್ಟಿಯಲ್ಲಿ ನಿಗದಿಪಡಿಸಿರುವ ಶುಲ್ಕಕ್ಕಿಂತ ಹೆಚ್ಚಿನ ಮೊತ್ತವನ್ನು ಕೇಳಲಾಗುತ್ತಿದ್ದು, ರೂ.10 ಪಾವತಿಸಬೇಕು ಎಂದು ಸಾರ್ವಜನಿಕರ ಮೇಲೆ ಒತ್ತಾಯಿಸಲಾಗುತ್ತಿದೆ ಎನ್ನಲಾಗಿದೆ. ನಿಗದಿತ ದರಪಟ್ಟಿ ಅಳವಡಿಸಲಾಗಿದ್ದರೂ ಅದಕ್ಕಿಂತ ಹೆಚ್ಚಿನ ಹಣವನ್ನು ಕೇಳುತ್ತಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ನಗರದ ಸಿಟಿ ಬಸ್ ನಿಲ್ದಾಣಕ್ಕೆ ಪ್ರತಿದಿನ ನೂರಾರು ಪ್ರಯಾಣಿಕರು ಹಾಗೂ ಸಾರ್ವಜನಿಕರು ಆಗಮಿಸುತ್ತಿದ್ದು, ಶೌಚಾಲಯದಂತಹ ಮೂಲಭೂತ ಸೌಲಭ್ಯಗಳನ್ನು ಬಳಸುವ ಸಂದರ್ಭದಲ್ಲಿ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತಿದೆ ಎಂಬ ದೂರುಗಳು ಕೇಳಿಬರುತ್ತದೆ.
ಇದರ ಜೊತೆಗೆ ಸರ್ವಿಸ್ ಬಸ್ ನಿಲ್ದಾಣದ ಸಾರ್ವಜನಿಕ ಶೌಚಾಲಯದ ಒಳಭಾಗದ ಗೋಡೆಗಳಲ್ಲಿ ವಿವಿಧ ರೀತಿಯ ಬರಹಗಳು ಕಂಡುಬರುತ್ತಿವೆ ಎನ್ನಲಾಗಿದ್ದು, ಶೌಚಾಲಯದ ಸ್ವಚ್ಛತೆ ಹಾಗೂ ನಿರ್ವಹಣೆಯ ಬಗ್ಗೆಯೂ ಸಂಶಯ ಮೂಡಿದೆ.
ಅದೇ ರೀತಿ ಸರ್ವಿಸ್ ಬಸ್ ನಿಲ್ದಾಣದ ಶೌಚಾಲಯದ ಒಳಭಾಗವನ್ನು ಪರಿಶೀಲಿಸಿ, ಗೋಡೆಗಳ ಮೇಲಿನ ಅನಗತ್ಯ ಬರಹಗಳನ್ನು ತೆರವುಗೊಳಿಸಿ ಸ್ವಚ್ಛತೆ ಕಾಪಾಡುವಂತೆ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯವೂ ಕೇಳಿಬಂದಿದೆ.

