ಮಲ್ಪೆ ಬಂದರಿನಲ್ಲಿ ಬೋಟಿನಿಂದ ನೀರಿಗೆ ಬಿದ್ದು ಮೀನುಗಾರ ಸಾವು

0
41

ಮಲ್ಪೆ: ಬೋಟಿನಿಂದ ಆಕಸ್ಮಿಕವಾಗಿ ಧಕ್ಕೆಗೆ ಬಿದ್ದು ನೀರಿಗೆ ಬಿದ್ದು ಮೀನುಗಾರರೊಬ್ಬರು ಮೃತಪಟ್ಟ ಘಟನೆ ಮಲ್ಪೆ ಬಂದರಿನಲ್ಲಿ ನಡೆದಿದೆ. ಮೃತರನ್ನು ದಯಾನಂದ ಕೋಡಾರಕರ (59) ಎಂದು ಗುರುತಿಸಲಾಗಿದೆ.

ದಯಾನಂದ ಅವರು ಕಳೆದ ಸುಮಾರು 20 ವರ್ಷಗಳಿಂದ ಮಲ್ಪೆ ಬಂದರಿನಲ್ಲಿ ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದರು. ಸೆಪ್ಟೆಂಬರ್ 9ರಂದು ಬೆಳಿಗ್ಗೆ 5 ಗಂಟೆಗೆ ‘ಶ್ರೀ ಕೃಷ್ಣ ತೀರ್ಥ’ ಹೆಸರಿನ ಬೋಟಿನಲ್ಲಿ ಮೀನುಗಾರಿಕೆಗೆ ತೆರಳಿದ್ದ ಅವರು ರಾತ್ರಿ ಸುಮಾರು 8 ಗಂಟೆಗೆ ಮಲ್ಪೆ ಬಂದರಿಗೆ ವಾಪಸ್ಸಾಗಿದ್ದರು.

ಮೀನುಗಳನ್ನು ಬೋಟಿನಿಂದ ಖಾಲಿ ಮಾಡಿ ಬೋಟನ್ನು ಬಂದರಿನಲ್ಲಿ ನಿಲ್ಲಿಸಲಾಗಿತ್ತು. ಬಳಿಕ ಇತರ ಮೀನುಗಾರರು ತಮ್ಮ ಕೊಠಡಿಗಳಿಗೆ ತೆರಳಿದ್ದರು. ದಯಾನಂದ ಅವರು ಮತ್ತೆ ಮೀನುಗಾರಿಕೆ ಕೆಲಸಕ್ಕೆ ತೆರಳುವ ಸಲುವಾಗಿ ಬಲೆಯನ್ನು ಸಿದ್ಧಪಡಿಸಿಕೊಳ್ಳುತ್ತಿದ್ದ ವೇಳೆ ಆಕಸ್ಮಿಕವಾಗಿ ಬೋಟಿನಿಂದ ಧಕ್ಕೆಗೆ ಬಿದ್ದು ನೀರಿಗೆ ಬಿದ್ದಿದ್ದಾರೆ. ಬಳಿಕ ಅವರು ನೀರಿನಲ್ಲಿ ಕಾಣೆಯಾಗಿದ್ದರು.

ಘಟನೆ ತಿಳಿದು ಬಂದ ಕೂಡಲೇ ಅವರಿಗಾಗಿ ಹುಡುಕಾಟ ನಡೆಸಲಾಯಿತು. ಸತತ ಹುಡುಕಾಟದ ಬಳಿಕ ಸೆಪ್ಟೆಂಬರ್ 10ರಂದು ಬೆಳಿಗ್ಗೆ ಸುಮಾರು 10.10ರ ವೇಳೆಗೆ ದಯಾನಂದ ಅವರ ಮೃತದೇಹ ಪತ್ತೆಯಾಗಿದೆ.

ಘಟನೆಗೆ ಸಂಬಂಧಿಸಿದಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.