ವಿದ್ಯಾರ್ಥಿಗಳ ಕೌಶಲ್ಯಾಭಿವೃದ್ಧಿಗಾಗಿ ಸ್ಕಿಲ್ ಡೆವಲಪ್‌ಮೆಂಟ್ ಕ್ಲಬ್‌ಗಳ ಉದ್ಘಾಟನೆ

0
41

ಮಂಗಳೂರು : ಕೆನರಾ ಕಾಲೇಜು (ಸ್ವಾಯತ್ತ), ಮಂಗಳೂರಿನ ಸೆಂಟರ್ ಫಾರ್ ಪಿಜಿ ಸ್ಟಡೀಸ್ ಇನ್ ಕಾಮರ್ಸ್ ವತಿಯಿಂದ ವಿದ್ಯಾರ್ಥಿಗಳ ಕೌಶಲ್ಯಾಭಿವೃದ್ಧಿ ಹಾಗೂ ವೃತ್ತಿಪರ ಸಾಮರ್ಥ್ಯವರ್ಧನೆಯ ಉದ್ದೇಶದಿಂದ ವಿವಿಧ ಸ್ಕಿಲ್ ಡೆವಲಪ್‌ಮೆಂಟ್ ಕ್ಲಬ್‌ಗಳ ಉದ್ಘಾಟನಾ ಕಾರ್ಯಕ್ರಮ ಸೆ. 9ರಂದು ಕಾಲೇಜಿನಲ್ಲಿ ನಡೆಯಿತು. ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಕಾಕುಂಜೆ ಗ್ರೂಪ್ ಆಫ್ ಕಂಪನೀಸ್‌ನ ನಿರ್ದೇಶಕ ಮಿಥುನ್ ಭಟ್ ಕಾಕುಂಜೆ ಉಪಸ್ಥಿತರಿದ್ದು ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಸಮಯವನ್ನು ಸಾರ್ಥಕವಾಗಿ ಬಳಸಿಕೊಳ್ಳಬೇಕು. ಇಂತಹ ಕೌಶಲ್ಯಾಭಿವೃದ್ಧಿ ಕ್ಲಬ್‌ಗಳು ವಿದ್ಯಾರ್ಥಿಗಳ ಪ್ರತಿಭೆ ಹಾಗೂ ಸಾಮರ್ಥ್ಯವನ್ನು ಗುರುತಿಸಿ, ಅವರ ಭವಿಷ್ಯವನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಹೇಳಿದರು.

ಪಿಜಿ ಸಂಯೋಜಕಿ ಸ್ವಾತಿ ನಾಯಕ್ ಮಾತನಾಡಿ, ವಿದ್ಯಾರ್ಥಿಗಳ ಭವಿಷ್ಯವನ್ನು ಗಮನದಲ್ಲಿರಿಸಿಕೊಂಡು ವಿಭಾಗದ ವತಿಯಿಂದ ಕೈಗೊಳ್ಳಲಾಗುತ್ತಿರುವ ಈ ಹೊಸ ಪ್ರಯತ್ನದ ಕುರಿತು ವಿವರಿಸಿದರು. ವಿದ್ಯಾರ್ಥಿಗಳಲ್ಲಿ ವಿವಿಧ ಕ್ಷೇತ್ರಗಳ ಕೌಶಲ್ಯಗಳನ್ನು ಬೆಳೆಸುವ ಮೂಲಕ ಅವರನ್ನು ವೃತ್ತಿಪರವಾಗಿ ಸಬಲಗೊಳಿಸುವುದು ಕ್ಲಬ್‌ಗಳ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಂಶೋಧನಾ ಕ್ಲಬ್, ಹಣಕಾಸು ಕ್ಲಬ್, ಸಂವಹನ ಕ್ಲಬ್ ಹಾಗೂ ಭಾಷಾ ಕ್ಲಬ್ ಸೇರಿದಂತೆ ವಿವಿಧ ಕೌಶಲ್ಯಾಭಿವೃದ್ಧಿ ಕ್ಲಬ್‌ಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು. ಸಂಬಂಧಿತ ಕ್ಲಬ್‌ಗಳ ಉಸ್ತುವಾರಿಗಳಾದ ವಿಭಾಗದ ಉಪನ್ಯಾಸಕಿಯರಾದ ಸ್ನೇಹಾ ಪೈ ಹಾಗೂ ಶ್ವೇತಾ ಪೈ ಅವರು ತಮ್ಮ ತಮ್ಮ ಕ್ಲಬ್‌ಗಳ ಉದ್ದೇಶ, ಕಾರ್ಯಚಟುವಟಿಕೆಗಳು ಹಾಗೂ ವಿದ್ಯಾರ್ಥಿಗಳಿಗೆ ದೊರೆಯುವ ಪ್ರಯೋಜನಗಳ ಕುರಿತು ಸಂಕ್ಷಿಪ್ತವಾಗಿ ವಿವರಿಸಿದರು.

ಕ್ಲಬ್‌ಗಳಿಗೆ ಆಡಿಯೋ, ಫಿನ್, ಆಕ್ಟರ್‌ಸ್ ಮತ್ತು ಆಕ್ಟಿವಿಟಿ ಎಂಬ ಹೆಸರುಗಳನ್ನು ನಾಮಕರಣ ಮಾಡಲಾಗಿದ್ದು, ಮುಖ್ಯ ಅತಿಥಿ ಮಿಥುನ್ ಭಟ್ ಕಾಕುಂಜೆ ಅವರು ಕ್ಲಬ್‌ಗಳ ಹೆಸರುಗಳನ್ನು ಅನಾವರಣಗೊಳಿಸಿದರು.

ಅಧ್ಯಕ್ಷೀಯ ಮಾತುಗಳನ್ನಾಡಿದ ಕಾಲೇಜಿನ ಪ್ರಾಂಶುಪಾಲೆ ಡಾ. ಪ್ರೇಮಲತಾ ವಿ. ಅವರು, ಅಧ್ಯಾಪಕರ ಈ ವಿನೂತನ ಪ್ರಯತ್ನವನ್ನು ಶ್ಲಾಘಿಸಿದರು. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉತ್ತಮವಾಗಿ ಮುನ್ನಡೆಯಲು ವಿದ್ಯಾರ್ಥಿಗಳು ಶೈಕ್ಷಣಿಕ ಅರ್ಹತೆಯೊಂದಿಗೆ ಅಗತ್ಯ ವೃತ್ತಿಪರ ಕೌಶಲ್ಯಗಳನ್ನು ಬೆಳೆಸಿಕೊಳ್ಳುವುದು ಅತ್ಯಗತ್ಯ ಎಂದು ಹೇಳಿದರು.

ವಿದ್ಯಾರ್ಥಿಗಳ ಸಮಗ್ರ ಕೌಶಲ್ಯಾಭಿವೃದ್ಧಿಗೆ ಪೂರಕವಾಗಿ ರೂಪಿಸಲಾಗಿರುವ ಈ ಕ್ಲಬ್‌ಗಳ ಮೂಲಕ ವಿವಿಧ ಕ್ಷೇತ್ರಗಳಲ್ಲಿ ಪ್ರಾಯೋಗಿಕ ಜ್ಞಾನ, ನಾಯಕತ್ವ ಗುಣ, ಸಂವಹನ ಸಾಮರ್ಥ್ಯ, ಸೃಜನಶೀಲತೆ ಹಾಗೂ ವೃತ್ತಿಪರ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ದೊರೆಯಲಿದೆ. ವಿದ್ಯಾರ್ಥಿಗಳು ಸಕ್ರಿಯವಾಗಿ ಕ್ಲಬ್‌ಗಳ ಚಟುವಟಿಕೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಬೇಕು ಎಂದು ಪ್ರಾಂಶುಪಾಲೆ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಬೋಧಕ ಹಾಗೂ ವಿದ್ಯಾರ್ಥಿ ಸಮುದಾಯದವರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಸಾಕ್ಷಿ ಸ್ವಾಗತಿಸಿದರು. ಅಶ್ವಿನಿ ಕಾರ್ಯಕ್ರಮವನ್ನು ನಿರೂಪಿಸಿದರು. ಅಂಕಿತಾ ವಂದನಾರ್ಪಣೆ ಸಲ್ಲಿಸಿದರು.