ಶಿಕ್ಷಕರ ದಿನಾಚರಣೆ

0
6

ಬಂಟ್ವಾಳ : ಜೀವನದಲ್ಲಿ ಸನ್ಮಾರ್ಗವನ್ನು ತೋರಿಸುವವನೇ ನಿಜವಾದ ಗುರು. ವಿದ್ಯಾರ್ಥಿಗಳ ಜೀವನ ರೂಪಿಸುವಲ್ಲಿ ಶಿಕ್ಷಕರು ಸಲ್ಲಿಸುವ ಸೇವೆ ಹಾಗೂ ತ್ಯಾಗವನ್ನು ಎಂದಿಗೂ ಮರೆಯಬಾರದು. ಭಾರತದ ಮಾಜಿ ರಾಷ್ಟ್ರಪತಿ, ತತ್ವಜ್ಞಾನಿ ಡಾ. ಸರ್ವಪಳ್ಳಿ ರಾಧಾಕೃಷ್ಣನ್ ಅವರು ಶಿಕ್ಷಕರಿಗೆ ಸದಾ ಆದರ್ಶಪ್ರಾಯರಾಗಿದ್ದಾರೆ ಎಂದು ಶ್ರೀ ವೆಂಕಟರಮಣಸ್ವಾಮಿ ಪದವಿ ಕಾಲೇಜಿನ ಪ್ರಾಂಶುಪಾಲ ಎಂ.ಡಿ. ಮಂಚಿ ಹೇಳಿದರು.

ಅವರು ಶ್ರೀ ವೆಂಕಟರಮಣಸ್ವಾಮಿ ಪದವಿ ಹಾಗೂ ಪದವಿ ಪೂರ್ವ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ವಿದ್ಯಾಗಿರಿಯಲ್ಲಿ ನಡೆದ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿದ್ಯಾರ್ಥಿಗಳ ವ್ಯಕ್ತಿತ್ವ ಹಾಗೂ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಶಿಕ್ಷಕರು ನೀಡುವ ಜ್ಞಾನ, ಮಾರ್ಗದರ್ಶನ ಮತ್ತು ಮೌಲ್ಯಗಳು ವಿದ್ಯಾರ್ಥಿಗಳ ಜೀವನದ ಮೇಲೆ ಶಾಶ್ವತವಾದ ಪರಿಣಾಮ ಬೀರುತ್ತವೆ ಎಂದು ಅವರು ಹೇಳಿದರು.

ಶ್ರೀ ವೆಂಕಟರಮಣಸ್ವಾಮಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸುದರ್ಶನ್ ಬಿ. ಮಾತನಾಡಿ, ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ದೊಡ್ಡದು. ಗುರುಗಳು ತೋರಿದ ಸನ್ಮಾರ್ಗದಲ್ಲಿ ವಿದ್ಯಾರ್ಥಿಗಳು ಮುನ್ನಡೆದರೆ ಅವರ ಭವಿಷ್ಯ ಉಜ್ವಲವಾಗುತ್ತದೆ. ಶಿಕ್ಷಕರ ಮಾರ್ಗದರ್ಶನವನ್ನು ಗೌರವಿಸಿ, ಅವರಿಂದ ದೊರೆಯುವ ಜ್ಞಾನವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಅಖಿಲಾ ಪೈ, ಶ್ರೀ ಶಶಿಧರ್ ಹಾಗೂ ಡಾ. ಕಾಶೀನಾಥ ಶಾಸ್ತ್ರಿ ಹೆಚ್.ವಿ. ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ತೃಪ್ತಿ ಸ್ವಾಗತಿಸಿದರು. ಚರಣ್ಯ ಹಾಗೂ ತಂಡದವರು ಪ್ರಾರ್ಥನೆ ನೆರವೇರಿಸಿದರು. ಸ್ಫೂರ್ತಿ ಎಂ. ಕಾರ್ಯಕ್ರಮ ನಿರೂಪಿಸಿದರು. ಪನ್ನಗ ಶ್ರೀ ವಂದನಾರ್ಪಣೆ ಸಲ್ಲಿಸಿದರು.

ಕಾರ್ಯಕ್ರಮದ ಕೊನೆಯಲ್ಲಿ ಪ್ರಾಜ್ಞವಿ ಹಾಗೂ ತಂಡದವರು ಶಿಕ್ಷಕರಿಗಾಗಿ ವಿವಿಧ ಮನರಂಜನಾ ಸ್ಪರ್ಧೆಗಳನ್ನು ಆಯೋಜಿಸಿದರು. ಶಿಕ್ಷಕರು ಉತ್ಸಾಹದಿಂದ ಸ್ಪರ್ಧೆಗಳಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದರು. ಶಿಕ್ಷಕರ ದಿನಾಚರಣೆಯು ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ನಡುವಿನ ಆತ್ಮೀಯತೆಯನ್ನು ಮತ್ತಷ್ಟು ಗಟ್ಟಿಗೊಳಿಸುವ ಮೂಲಕ ಸಂಭ್ರಮದಿಂದ ನಡೆಯಿತು.