ಭಾರತೀಯತೆಯೇ ಯುವಶಕ್ತಿಯ ದಿಕ್ಕು, ನವಭಾರತದ ನಿರ್ಮಾಣವೇ ಗುರಿಯಾಗಲಿ: ಚಕ್ರವರ್ತಿ ಸೂಲಿಬೆಲೆ

0
5

ಪುತ್ತೂರು : ಪ್ರಪಂಚವನ್ನು ಗೆಲ್ಲಲು ವಿವಿಧ ಮಾರ್ಗಗಳಿದ್ದು, ಅವುಗಳಲ್ಲಿ ಬಹುತೇಕ ಹಿಂಸಾತ್ಮಕ ಹಾಗೂ ದುರಾಸೆಯ ಮಾರ್ಗಗಳಾಗಿವೆ. ಆದರೆ ಜ್ಞಾನ ಮತ್ತು ಆಧ್ಯಾತ್ಮಿಕ ಶಕ್ತಿಯ ಮೂಲಕ ಜಗತ್ತಿನ ಮನಸ್ಸುಗಳನ್ನು ಗೆದ್ದ ಏಕೈಕ ರಾಷ್ಟ್ರ ಭಾರತ. ಅಂತಹ ಶ್ರೀಮಂತ ಜ್ಞಾನ ಪರಂಪರೆಯನ್ನು ಹೊಂದಿರುವ ಭಾರತೀಯ ನೆಲದ ಸಂಸ್ಕೃತಿ ಮತ್ತು ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಜವಾಬ್ದಾರಿ ಇಂದಿನ ಯುವಜನತೆಯ ಮೇಲಿದೆ ಎಂದು ಚಿಂತಕರು ಹಾಗೂ ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ಸೆ. 11ರಂದು ವಿವೇಕಾನಂದ ಪದವಿಪೂರ್ವ ವಿದ್ಯಾಲಯದಲ್ಲಿ ಸ್ವಾಮಿ ವಿವೇಕಾನಂದರ ಚಿಕಾಗೋ ಉಪನ್ಯಾಸದ 133ನೇ ವರ್ಷಾಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ ‘ವಿವೇಕವಿಜಯ’ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

‘ಭಾರತೀಯತೆ ಮತ್ತು ಯುವಜನತೆ’ ಎಂಬ ವಿಷಯದಡಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಸ್ವಾಮಿ ವಿವೇಕಾನಂದರು ಭಾರತದ ವಿಶಿಷ್ಟ ಜ್ಞಾನ ಪರಂಪರೆಯ ಆಧ್ಯಾತ್ಮಿಕ ಶಕ್ತಿಯ ರೂವಾರಿಯಾಗಿದ್ದರು. ಅವರ ಚಿಂತನೆಗಳು ಹಾಗೂ ಸಂದೇಶಗಳು ಇಂದಿಗೂ ಯುವಜನತೆಗೆ ದಾರಿದೀಪವಾಗಿವೆ ಎಂದರು.

ಯುವಕರು ತಮ್ಮ ವೈಯಕ್ತಿಕ ಬೆಳವಣಿಗೆಯನ್ನಷ್ಟೇ ಗುರಿಯಾಗಿಸಿಕೊಳ್ಳದೆ, ಸಮಾಜದ ಹಾಗೂ ದೇಶದ ಪ್ರಗತಿಯನ್ನೂ ತಮ್ಮ ಬದುಕಿನ ಉದ್ದೇಶವನ್ನಾಗಿಸಿಕೊಳ್ಳಬೇಕು. ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಆತ್ಮವಿಶ್ವಾಸ, ಜ್ಞಾನ, ಶಿಸ್ತು ಮತ್ತು ಸೇವಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ಭಾರತೀಯತೆ ಎನ್ನುವುದು ಕೇವಲ ಒಂದು ಗುರುತು ಅಥವಾ ಹೆಮ್ಮೆಯ ವಿಚಾರವಾಗಿ ಉಳಿಯಬಾರದು. ಅದು ಮಾನವೀಯತೆ, ಸಹಬಾಳ್ವೆ ಮತ್ತು ವಿಶ್ವಭ್ರಾತೃತ್ವದ ಜೀವನಮೌಲ್ಯವಾಗಿ ರೂಪುಗೊಳ್ಳಬೇಕು. ಭಾರತೀಯತೆಯ ಮೌಲ್ಯಗಳನ್ನು ಪೋಷಿಸುವ ಇಂದಿನ ಯುವಜನತೆಯೇ ನವಭಾರತದ ನಿರ್ಮಾತೃಗಳು ಎಂದು ಅವರು ಹೇಳಿದರು.

ಯುವಶಕ್ತಿ ರಾಷ್ಟ್ರನಿರ್ಮಾಣಕ್ಕೆ ಬಳಕೆಯಾಗಲಿ

ಕಾರ್ಯಕ್ರಮವನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ವಿಜಯನಾರಾಯಣ ಕೆ.ಎಂ. ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಿ ಮಾತನಾಡಿ, ಸ್ವಾಮಿ ವಿವೇಕಾನಂದರ ಚಿಂತನೆಗಳಿಂದ ಪ್ರೇರಣೆ ಪಡೆದು ಯುವಕರು ತಮ್ಮ ಶಕ್ತಿಯನ್ನು ಆತ್ಮವಿಶ್ವಾಸ, ಜ್ಞಾನ, ಶಿಸ್ತು ಹಾಗೂ ರಾಷ್ಟ್ರನಿರ್ಮಾಣದ ಕಾರ್ಯಗಳಲ್ಲಿ ಬಳಸಬೇಕು ಎಂದರು.

ತರುಣ ಶಕ್ತಿ ಸಾಧನೆಯ ಬಲವಾದರೆ, ವೈಚಾರಿಕತೆ ದಿಕ್ಕು ಮತ್ತು ವಿವೇಕತೆ ವಿಜಯದ ಮಾರ್ಗವಾಗಿದೆ ಎಂದು ಅವರು ಹೇಳಿದರು.

ಮುಖ್ಯ ಅತಿಥಿ ಹಾಗೂ ಎಸ್.ಆರ್.ಕೆ. ಲ್ಯಾಡರ್ಸ್, ಪುತ್ತೂರು ಸಂಸ್ಥೆಯ ಮಾಲಕ ಕೇಶವ ಅಮೈ ಮಾತನಾಡಿ, ಹದಿಹರೆಯದ ಮನಸ್ಸಿನಲ್ಲಿ ಭಾರತೀಯತೆಯ ಬೀಜವನ್ನು ಬಿತ್ತುವುದು ಇಂದಿನ ಅಗತ್ಯವಾಗಿದೆ. ನಮ್ಮ ಸಂಸ್ಕೃತಿ, ಪರಂಪರೆ, ಜೀವನಮೌಲ್ಯಗಳು ಹಾಗೂ ರಾಷ್ಟ್ರದ ಬಗ್ಗೆ ಯುವಜನರಲ್ಲಿ ಹೆಮ್ಮೆಯ ಭಾವನೆಯನ್ನು ಬೆಳೆಸಬೇಕು ಎಂದರು.

ವೇದಿಕೆಯಲ್ಲಿ ವಿವೇಕಾನಂದ ಪದವಿಪೂರ್ವ ವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಹಾಗೂ ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕ ರವೀಂದ್ರ ಪಿ., ಪ್ರಾಂಶುಪಾಲ ಎಂ. ದೇವಿಚರಣ್ ರೈ ಉಪಸ್ಥಿತರಿದ್ದರು. ಆಡಳಿತ ಮಂಡಳಿ ನಿರ್ದೇಶಕರಾದ ಡಾ. ಕೆ.ಎನ್. ಸುಬ್ರಹ್ಮಣ್ಯ, ಡಾ. ಕೃಷ್ಣಪ್ರಸನ್ನ ಕೆ., ಉಪನ್ಯಾಸಕರು, ಉಪನ್ಯಾಸಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ವಿದ್ಯಾರ್ಥಿನಿಯರು ಪ್ರೇರಣಾ ಗೀತೆ ಹಾಗೂ ವಿವೇಕ ಗೀತಾ ನಮನವನ್ನು ಹಾಡಿದರು. ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಹಂಸಿನಿ ಪ್ರಾರ್ಥಿಸಿದರು. ಆಡಳಿತ ಮಂಡಳಿ ಅಧ್ಯಕ್ಷ ಹಾಗೂ ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕ ರವೀಂದ್ರ ಪಿ. ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ಉಪನ್ಯಾಸಕಿ ಡಾ. ಸ್ನೇಹಾ ಬಿ.ಎಸ್. ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಆಸಕ್ತ ಸಾರ್ವಜನಿಕರಿಗಾಗಿ ವಿವಿಧ ವಿಷಯಗಳಡಿ ಮೂರು ಪ್ರತ್ಯೇಕ ಅವಧಿಗಳಲ್ಲಿ ಉಪನ್ಯಾಸ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ‘ವಿವೇಕವಿಜಯ’ ಕಾರ್ಯಕ್ರಮವು ಯುವಜನರಲ್ಲಿ ರಾಷ್ಟ್ರಪ್ರೇಮ, ಭಾರತೀಯ ಮೌಲ್ಯಗಳು ಹಾಗೂ ಸ್ವಾಮಿ ವಿವೇಕಾನಂದರ ಚಿಂತನೆಗಳ ಕುರಿತು ಹೊಸ ಚಿಂತನೆ ಮೂಡಿಸುವಲ್ಲಿ ಗಮನಸೆಳೆಯಿತು.