ಉಡುಪಿ: ರಾಮ ರಾಜನಾದಾಗ ರಾಜಪ್ರಭುತ್ವವಿತ್ತು. ಆತನಿಂದ ರಾಮರಾಜ್ಯ ಸಾಧ್ಯವಾಯಿತು. ಈಗ ಪ್ರಜಾರಾಜ್ಯವಿದೆ. ಪ್ರತಿ ಪ್ರಜೆಯೂ ರಾಮನಾದರೆ ರಾಮರಾಜ್ಯ ಈಗಲೂ ಸಾಧ್ಯ. ಪ್ರತಿಯೊಬ್ಬರ ಸುಖದಲ್ಲಿ ಸಂತೋಷ ಕಾಣುತ್ತಾ, ದುಃಖವನ್ನು ತನ್ನದೆಂದು ತಿಳಿದು ಅದರ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನಿಸುವ ಮನಸ್ಥಿತಿ ಬೆಳೆಸಿಕೊಂಡರೆ ಅನೇಕ ಸಮಸ್ಯೆಗಳಿಗೆ ಸುಲಭ ಪರಿಹಾರವಿದೆ. ರಾಷ್ಟ್ರಸೇವೆಯೇ ರಾಮ ಸೇವೆ ಎಂಬುದಾಗಿ ಭಾವಿಸಬೇಕು ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಬುಧವಾರ ಭಾರತೀಯ ಜನತಾಪಕ್ಷದ ಕೇಂದ್ರ ಕಚೇರಿಗೆ ಭೇಟಿ ನೀಡಿ ಅಶೀರ್ವಚನ ನೀಡಿದರು. ಪಕ್ಷದ ರಾಷ್ಟ್ರೀಯ ಕಾರ್ಯಾಲಯ ಕಾರ್ಯದರ್ಶಿ ಮಹೇಂದ್ರ ಪಾಂಡೆ, ಕಾರ್ಯದರ್ಶಿ ಬೋಲಾ ಸಿಂಗ್ ಮತ್ತು ಡಾ.ಸ್ವದೇಶ್ ಸಿಂಗ್, ದೆಹಲಿ ರಾಜ್ಯ ಬಿಜೆಪಿ ಕಾರ್ಯದರ್ಶಿ ಅಭಿಷೇಕ್ ಟಂಡನ್ ಸ್ವಾಮೀಜಿಯವರನ್ನು ಆದರದಿಂದ ಬರಮಾಡಿಕೊಂಡು ಗೌರವಿಸಿದರು. ಬಳಿಕ ಕಾರ್ಯಾಲಯದ ಆವರಣದಲ್ಲಿ ಪ್ರತಿಷ್ಠಾಪಿಸಲಾದ ಶ್ರೀಗಣಪತಿ ಮಂಟಪಕ್ಕೆ ತೆರಳಿ ಗಣೇಶನಿಗೆ ಮಂಗಳಾರತಿ ಬೆಳಗಿದರು.

