ಉಡುಪಿ: ಮಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಸಚಿವ ಸಂಪುಟ ಸಭೆಯಲ್ಲೇ ತುಳು ಭಾಷೆಗೆ ಕರ್ನಾಟಕದ ಹೆಚ್ಚುವರಿ ಅಧಿಕೃತ ಆಡಳಿತ ಭಾಷೆಯ ಸ್ಥಾನಮಾನ ನೀಡುವ ಕುರಿತು ಐತಿಹಾಸಿಕ ನಿರ್ಧಾರ ಕೈಗೊಳ್ಳಬೇಕು ಎಂದು ತುಳುನಾಡ ರಕ್ಷಣಾ ವೇದಿಕೆ ಜಿಲ್ಲಾ ಅಧ್ಯಕ್ಷ ಫ್ರಾಂಕಿ ಡಿಸೋಜ ಒತ್ತಾಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ಸಭೆ ತುಳುನಾಡಿನ ಜನರಿಗೆ ಸಾಮಾನ್ಯ ಅಡಳಿತಾತ್ಮಕ ಸಭೆಯಲ್ಲ. ಹಲವು ವರ್ಷಗಳಿಂದ ತುಳು ಭಾಷೆಯ ಅಧಿಕೃತ ಮಾನ್ಯತೆಗಾಗಿ ನಡೆಯುತ್ತಿರುವ ಹೋರಾಟಕ್ಕೆ ಸ್ಪಷ್ಟ ದಿಕ್ಕು ನೀಡಬಹುದಾದ ಮಹತ್ವದ ವೇದಿಕೆಯಾಗಿದೆ ಎಂದು ಹೇಳಿದರು.
ತುಳು ಕೇವಲ ಭಾಷೆಯಲ್ಲ, ತುಳುನಾಡಿನ ಅಸ್ಮಿತೆ ತುಳು. ತುಳು ಎಂದರೆ ಕೇವಲ ಸಂವಹನದ ಭಾಷೆಯಲ್ಲ. ಅದು ತುಳುನಾಡಿನ ಇತಿಹಾಸ, ಸಂಸತಿ, ಜನಪದ, ಸಾಹಿತ್ಯ, ಕಲೆ, ಆಚರಣೆ, ಭೂತಾರಾಧನೆ, ನಾಗಾರಾಧನೆ, ಯಕ್ಷಗಾನ, ಕಂಬಳ ಸೇರಿದಂತೆ ಹಲವು ಪರಂಪರೆಗಳ ಜೀವನಾಡಿಯಾಗಿದೆ. ಶತಮಾನಗಳ ಇತಿಹಾಸ ಹೊಂದಿರುವ ತುಳು ಭಾಷೆಯನ್ನು ಮಾತನಾಡುವ ಜನರು ಕರ್ನಾಟಕದ ಕರಾವಳಿ ಪ್ರದೇಶಗಳಲ್ಲಿ ಮಾತ್ರವಲ್ಲದೆ ದೇಶದ ವಿವಿಧ ಭಾಗಗಳು ಹಾಗೂ ವಿದೇಶಗಳಲ್ಲಿಯೂ ನೆಲೆಸಿದ್ದಾರೆ. ಇಂತಹ ಶ್ರೀಮಂತ ಭಾಷೆಗೆ ಆಡಳಿತಾತ್ಮಕವಾಗಿ ಸೂಕ್ತ ಸ್ಥಾನಮಾನ ದೊರೆಯದಿರುವುದು ತುಳುವರ ಪಾಲಿಗೆ ವಿಷಾದದ ಸಂಗತಿ. ಈ ಸಂಬಂಧ ಹಲವು ವರ್ಷ ಹೋರಾಟ ನಡೆಸಿದ್ದೇವೆ. ಈ ಬಾರಿ ಸರಕಾರ ಖಂಡಿತ ತಮ್ಮ ಬಹುಕಾಲದ ಬೇಡಿಕೆ ಈಡೇರಿಸುವ ಭರವಸೆ ಹೊಂದಿದ್ದೇವೆ. ಒಂದು ವೇಳೆ ಸರ್ಕಾರ ಮತ್ತೆ ನೆಪ ಹೇಳುತ್ತಾ ಕೂತರೆ ಮುಂದಿನ ದಿನಗಳಲ್ಲಿ ತುಳುನಾಡ ರಕ್ಷಣಾ ವೇದಿಕೆಯಿಂದ ಹೋರಾಟ ನಡೆಸುತ್ತೇವೆ ಎಂದವರು ಎಚ್ಚರಿಸಿದ್ದಾರೆ.
ಸ್ಥಾಪಕ ಅಧ್ಯಕ್ಷ ಯೋಗೀಶ್ ಶೆಟ್ಟಿ ಜೇಪ್ಪು , ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಪೂಜಾರಿ, ಜಿಲ್ಲಾ ಮಹಿಳಾ ಅಧ್ಯೆ ನಾಗಲಕ್ಷಿ$್ಮ ಸುಬ್ರಮಣ್ಯ ನಗರ, ಜಿಲ್ಲಾ ಕಾರ್ಮಿಕ ಘಟಕದ ಅಧ್ಯಕ್ಷ ಜಯ ಪೂಜಾರಿ, ಕಾಪು ತಾಲೂಕು ಅಧ್ಯಕ್ಷ ನಿತಿನ್ ಕುಮಾರ್ ಶೆಟ್ಟಿ, ಬ್ರಹ್ಮಾವರ ತಾಲೂಕು ಅಧ್ಯಕ್ಷ ಶರತ್ ರಾಜ್ ಆರೂರು, ಕಾಪು ತಾಲೂಕು ಮಹಿಳಾ ಅಧ್ಯೆ ಅನುಸೂಯಾ ಶೆಟ್ಟಿ ಮೊದಲಾದವರಿದ್ದರು.

