-ಮಂದಾರ ರಾಜೇಶ್ ಭಟ್
ತುಳು ಮಾತನಾಡುವ ಜನರ ದಶಕಗಳ ಕನಸು ಕೊನೆಗೂ ನನಸಾಗಿದ್ದು, ಕರಾವಳಿಯ ಜೀವನಾಡಿಯಾದ ಪ್ರಾಚೀನ ಹಾಗೂ ಶ್ರೀಮಂತ ತುಳು ಭಾಷೆಗೆ ಎರಡನೇ ಅಧಿಕೃತ ಭಾಷೆಯ ಸ್ಥಾನಮಾನದೊಂದಿಗೆ ಸರ್ಕಾರದ ರಾಜಮುದ್ರೆಯ ಮಾನ್ಯತೆ ದೊರೆತಿದೆ.
ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಐತಿಹಾಸಿಕ ಘೋಷಣೆ ಹೊರಬಿದ್ದಿದ್ದು, ತುಳುನಾಡೆಲ್ಲೆಡೆ ಹಬ್ಬದ ವಾತಾವರಣ ನಿರ್ಮಾಣವಾಗಿದೆ.
ನಾಯಕರು ಹಾಗೂ ಜನಪ್ರತಿನಿಧಿಗಳಿಗೆ ಅಭಿನಂದನೆ
ಈ ಮಹತ್ವದ ನಿರ್ಧಾರದಿಂದ ಹರ್ಷಗೊಂಡಿರುವ ಕರಾವಳಿ ಭಾಗದ ವಿವಿಧ ಸಂಘ-ಸಂಸ್ಥೆಗಳು ಮತ್ತು ಸಾರ್ವಜನಿಕರು ಮುಖ್ಯಮಂತ್ರಿಗಳಿಗೆ ಹಾಗೂ ಸಚಿವ ಸಂಪುಟದ ಎಲ್ಲಾ ಸದಸ್ಯರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ವಿಶೇಷವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳಾದ ಅಶೋಕ್ ರೈ ಹಾಗೂ ಯು.ಟಿ. ಖಾದರ್, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪದ್ಮರಾಜ್ ಮತ್ತು ಮಿಥುನ್ ರೈ ಅವರನ್ನು ಸಾರ್ವಜನಿಕರು ಅಭಿನಂದಿಸಿದ್ದಾರೆ
ಈ ಸಂದರ್ಭದಲ್ಲಿ ಹಿರಿಯ ನಾಯಕರಾದ ಎ.ಸಿ. ಭಂಡಾರಿ ಮತ್ತು ಬಿ. ರಮಾನಾಥ ರೈ ಅವರ ಜನಪರ ಸೇವೆಯನ್ನು ಜನರು ಪ್ರೀತಿಯಿಂದ ಸ್ಮರಿಸಿದ್ದಾರೆ.
ಸಾರ್ವಜನಿಕರ ಸಂಭ್ರಮ ಹಾಗೂ ಪ್ರತಿಕ್ರಿಯೆ
ನಮ್ಮ ಪ್ರತಿನಿಧಿಗಳು ಕರಾವಳಿ ಭಾಗದ ಹಲವು ಸಾರ್ವಜನಿಕರನ್ನು ಸಂಪರ್ಕಿಸಿ ಮಾತನಾಡಿಸಿದಾಗ, ಜನರು ಆನಂದ ಬಾಷ್ಪದೊಂದಿಗೆ ತಮ್ಮ ಅಂತರಂಗದ ಸಂತಸವನ್ನು ಹಂಚಿಕೊಂಡಿದ್ದಾರೆ.
“ನಮ್ಮ ನಾಡು, ನಮ್ಮ ಭಾಷೆ, ನಮ್ಮ ಗೌರವ” ಎಂಬ ಹೆಮ್ಮೆಯೊಂದಿಗೆ ತುಳು ಭಾಷೆಗೆ ಸಿಕ್ಕಿರುವ ಈ ಸಾಂಸ್ಕೃತಿಕ ಮನ್ನಣೆಗೆ ತುಳುನಾಡಿನ ಜನತೆ ರಾಜ್ಯ ಸರ್ಕಾರಕ್ಕೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

