ಕರ್ನಾಟಕ ಸರ್ಕಾರಕ್ಕೆ ಆಲ್ ಅಮೆರಿಕ ತುಳು ಅಸೋಸಿಯೇಷನ್ ವತಿಯಿಂದ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಕೃತಜ್ಞತೆಗಳು

0
5

ತುಳು ಭಾಷೆಗೆ ಅಧಿಕೃತ ಮಾನ್ಯತೆ: ದಶಕಗಳ ಹೋರಾಟಕ್ಕೆ ಸಂದ ಗೌರವ, ಅಮೆರಿಕದ ತುಳುವರಲ್ಲಿ ಸಂಭ್ರಮ!

ತುಳುನಾಡಿನ ಜನರ ಬಹುದಶಕಗಳ ಕನಸು ನನಸಾಗಿದೆ. ಸೆಪ್ಟೆಂಬರ್ 18, 2026ರಂದು ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತುಳು ಭಾಷೆಯನ್ನು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಅನ್ವಯವಾಗುವಂತೆ ಕರ್ನಾಟಕದ ಎರಡನೇ ಹೆಚ್ಚುವರಿ ಆಡಳಿತ ಭಾಷೆಯಾಗಿ ಘೋಷಿಸುವ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಈ ನಿರ್ಧಾರವು ತುಳು ಭಾಷೆಯ ಅಸ್ಮಿತೆ, ಶ್ರೀಮಂತ ಸಂಸ್ಕೃತಿ ಹಾಗೂ ಪರಂಪರೆಗೆ ದೊರೆತ ಮಹತ್ವದ ಗೌರವವಾಗಿದೆ.

ಈ ಸಂದರ್ಭದಲ್ಲಿ ಆಲ್ ಅಮೆರಿಕ ತುಳು ಅಸೋಸಿಯೇಷನ್ (All America Tulu Association – AATA) ವತಿಯಿಂದ ಕರ್ನಾಟಕದ ಮಾನ್ಯ ಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಹಾಗೂ ರಾಜ್ಯ ಸರ್ಕಾರಕ್ಕೆ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ.

ತುಳು ಭಾಷೆಯ ಅಧಿಕೃತ ಮಾನ್ಯತೆಯ ಬೇಡಿಕೆಯನ್ನು ನಿರಂತರವಾಗಿ ಪ್ರಸ್ತಾಪಿಸಿದ ಪುತ್ತೂರು ಶಾಸಕರಾದ ಶ್ರೀ ಅಶೋಕ್ ಕುಮಾರ್ ರೈ, ಸಚಿವರಾದ ಶ್ರೀ ಯು.ಟಿ. ಖಾದರ್, ಮಾಜಿ ಸಚಿವರಾದ ಶ್ರೀ ಬಿ. ರಮಾನಾಥ ರೈ ಹಾಗೂ ಈ ಕಾರ್ಯಕ್ಕೆ ಬೆಂಬಲ ನೀಡಿದ ಎಲ್ಲ ಜನಪ್ರತಿನಿಧಿಗಳ ಕೊಡುಗೆಯನ್ನು ಈ ಸಂದರ್ಭದಲ್ಲಿ ಗೌರವಪೂರ್ವಕವಾಗಿ ಸ್ಮರಿಸುತ್ತೇವೆ.

ಬೋಸ್ಟನ್‌ನಲ್ಲಿ ಕರ್ನಾಟಕದ ಜನಪ್ರತಿನಿಧಿಗಳಿಗೆ AATA ಸಲ್ಲಿಸಿದ್ದ ಮನವಿ: ಹೆಮ್ಮೆಯ ನೆನಪು

ಈ ಸಂಭ್ರಮದ ಸಂದರ್ಭದಲ್ಲಿ ಆಲ್ ಅಮೆರಿಕ ತುಳು ಅಸೋಸಿಯೇಷನ್ ವತಿಯಿಂದ 2025ರ ಆಗಸ್ಟ್ 5ರಂದು ಅಮೆರಿಕದ ಬೋಸ್ಟನ್‌ನಲ್ಲಿ ಕೈಗೊಂಡ ಮಹತ್ವದ ಪ್ರಯತ್ನವನ್ನು ಹೆಮ್ಮೆಯಿಂದ ಸ್ಮರಿಸುತ್ತೇವೆ.

23 ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ಹಾಗೂ ದೆಹಲಿ ಮತ್ತು ಉತ್ತರ ಪ್ರದೇಶದ ಇಬ್ಬರು ಶಾಸಕರುಕರ್ನಾಟಕದಿಂದಬೋಸ್ಟನ್‌ಗೆ ಆಗಮಿಸಿದ್ದ ಸಂದರ್ಭದಲ್ಲಿAATA ಅಧ್ಯಕ್ಷೆ ಶ್ರೀವಲ್ಲಿ ರೈ ಮಾರ್ಟೆಲ್, ಸಂಸ್ಥಾಪಕ ಅಧ್ಯಕ್ಷ ಶ್ರೀ ಭಾಸ್ಕರ್ ಶೇರಿಗಾರ್, ಪ್ರಧಾನ ಕಾರ್ಯದರ್ಶಿ ಪೂಜಾ ಶೆಟ್ಟಿ, ಜಂಟಿ ಕಾರ್ಯದರ್ಶಿ ರಂಜನಿ ಅಸೈಗೋಳಿ, ನಿರ್ದೇಶಕ ಫ್ರೆಡ್ರಿಕ್ ಫೆರ್ನಾಂಡಿಸ್ ಹಾಗೂ AATA ರಾಯಭಾರಿ ಮತ್ತು ನ್ಯೂ ಇಂಗ್ಲೆಂಡ್ ತುಳು ಕೂಟದ ಅಧ್ಯಕ್ಷ ಮೊಹೈರ್ ಶೆಟ್ಟಿ ಅವರನ್ನೊಳಗೊಂಡ ನಿಯೋಗವು ಕರ್ನಾಟಕದ ಜನಪ್ರತಿನಿಧಿಗಳಿಗೆ ಮನವಿಪತ್ರ ಸಲ್ಲಿಸಿತ್ತು.

ಅಂದಿನ ವಿಧಾನಸಭಾಧ್ಯಕ್ಷರಾಗಿದ್ದ ಶ್ರೀ ಯು.ಟಿ. ಖಾದರ್ ಹಾಗೂ ವಿಧಾನ ಪರಿಷತ್ ಸಭಾಪತಿಗಳಾದ ಶ್ರೀ ಬಸವರಾಜ ಹೊರಟ್ಟಿ ಅವರ ಮೂಲಕ ಕರ್ನಾಟಕ ಸರ್ಕಾರಕ್ಕೆ ಸಲ್ಲಿಸಿದ ಮನವಿಯಲ್ಲಿ ಎರಡು ಪ್ರಮುಖ ಬೇಡಿಕೆಗಳನ್ನು ಮುಂದಿಡಲಾಗಿತ್ತು.

  • ತುಳು ಭಾಷೆಯನ್ನು ಕರ್ನಾಟಕದ ಎರಡನೇ ಅಧಿಕೃತ ಭಾಷೆಯಾಗಿ ಘೋಷಿಸುವುದು.
  • ದಕ್ಷಿಣ ಕನ್ನಡ ಜಿಲ್ಲೆಯನ್ನು ತುಳುನಾಡು ಎಂದು ಮರುನಾಮಕರಣ ಮಾಡುವುದು.

ಈ ಮನವಿಗೆ ಗ್ಲೋಬಲ್ ಅಲಯನ್ಸ್ ಆಫ್ ತುಳು ಅಸೋಸಿಯೇಷನ್ಸ್ (Global Tuluvas), ಟೀಮ್ ಇಲೇಸ ಸೇರಿದಂತೆ ವಿವಿಧ ತುಳುಪರ ಸಂಘಟನೆಗಳ ಬೆಂಬಲವೂ ದೊರೆತಿತ್ತು.

ಇಂದು ತುಳು ಭಾಷೆಗೆ ಅಧಿಕೃತ ಮಾನ್ಯತೆ ನೀಡುವ ನಿರ್ಧಾರ ಹೊರಬಿದ್ದಿರುವ ಸಂದರ್ಭದಲ್ಲಿ ಅಂದು ಬೋಸ್ಟನ್‌ನಲ್ಲಿ ನಡೆದ ಆ ಸಭೆ ಮತ್ತು ಸಲ್ಲಿಸಿದ ಮನವಿಪತ್ರ ನಮ್ಮೆಲ್ಲರ ನೆನಪಿನಲ್ಲಿ ವಿಶೇಷ ಸ್ಥಾನ ಪಡೆದಿದೆ.

ಈ ಮಹತ್ತರ ಸಾಧನೆಯ ಹಿಂದೆ ಅನೇಕ ದಶಕಗಳ ಸಾಮೂಹಿಕ ಹೋರಾಟವಿದೆ. ಆ ಹೋರಾಟದಲ್ಲಿ ಉತ್ತರ ಅಮೆರಿಕದ ತುಳುವರ ಧ್ವನಿಯನ್ನು ಕರ್ನಾಟಕದ ಜನಪ್ರತಿನಿಧಿಗಳ ಮುಂದೆ ತಲುಪಿಸುವ ಅವಕಾಶ AATAಗೆ ದೊರೆತಿರುವುದು ನಮಗೆ ಸಂತೋಷ ಮತ್ತು ಹೆಮ್ಮೆಯ ವಿಷಯವಾಗಿದೆ.

ತಳಮಟ್ಟದ ಹೋರಾಟಗಾರರಿಗೆ ಗೌರವಪೂರ್ವಕ ನಮನ

ತುಳು ಭಾಷೆಯ ಅಧಿಕೃತ ಮಾನ್ಯತೆಗಾಗಿ ದಶಕಗಳಿಂದ ಶ್ರಮಿಸಿದ ಸಾಹಿತಿಗಳು, ಸಂಶೋಧಕರು, ಭಾಷಾ ಹೋರಾಟಗಾರರು, ಕಲಾವಿದರು, ಶಿಕ್ಷಕರು ಹಾಗೂ ವಿವಿಧ ತುಳುಪರ ಸಂಘಟನೆಗಳ ಸೇವೆಯನ್ನು ಈ ಸಂದರ್ಭದಲ್ಲಿ ಕೃತಜ್ಞತೆಯಿಂದ ಸ್ಮರಿಸುತ್ತೇವೆ.

ವಿಶೇಷವಾಗಿ ತುಳು ಭಾಷೆ ಮತ್ತು ತುಳು ಲಿಪಿಯ ಅಭಿವೃದ್ಧಿಗಾಗಿ ತಳಮಟ್ಟದಲ್ಲಿ ಶ್ರಮಿಸಿರುವ ಶ್ರೀ ಜಿ.ವಿ.ಎಸ್. ಉಳ್ಳಾಲ್ ಅವರ ಕೊಡುಗೆಯನ್ನು ಗೌರವಪೂರ್ವಕವಾಗಿ ನೆನಪಿಸಿಕೊಳ್ಳುತ್ತೇವೆ.

ಅದೇ ರೀತಿ ತುಳು ಸಾಹಿತ್ಯ ಅಕಾಡೆಮಿ, ಜೈ ತುಳುನಾಡ್, ಟೀಮ್ ಇಲೇಸ, ಗ್ಲೋಬಲ್ ತುಳುವಾಸ್ ಹಾಗೂ ದೇಶವಿದೇಶಗಳ ವಿವಿಧ ತುಳು ಸಂಘಟನೆಗಳ ಪರಿಶ್ರಮವನ್ನು ಅಭಿನಂದಿಸುತ್ತೇವೆ.

ಇದು ಒಬ್ಬ ವ್ಯಕ್ತಿಯ ಅಥವಾ ಒಂದು ಸಂಘಟನೆಯ ಸಾಧನೆಯಲ್ಲ. ಹಲವು ತಲೆಮಾರುಗಳ ತುಳುವರ ನಿರಂತರ ಪರಿಶ್ರಮ, ಒಗ್ಗಟ್ಟು ಮತ್ತು ಮಾತೃಭಾಷೆಯ ಮೇಲಿನ ಪ್ರೀತಿಯ ಫಲವಾಗಿದೆ.

ಅದೇ ರೀತಿ, ಸೆಪ್ಟೆಂಬರ್ 18ನ್ನುವಿಶ್ವ ತುಳು ದಿನ (World Tulu Day) ಎಂದು ಘೋಷಿಸಿ, ಪ್ರತಿವರ್ಷ ತುಳು ಭಾಷೆ, ಸಾಹಿತ್ಯ, ಲಿಪಿ ಮತ್ತು ಸಂಸ್ಕೃತಿಯ ಸಂಭ್ರಮಾಚರಣೆಗೆ ಮೀಸಲಿಡಬೇಕೆಂದು ಕರ್ನಾಟಕ ಸರ್ಕಾರವನ್ನು ವಿನಂತಿಸುತ್ತೇವೆ.