ತುಳು ಭಾಷೆಗೆ ಅಧಿಕೃತ ಮಾನ್ಯತೆ: ದಶಕಗಳ ಹೋರಾಟಕ್ಕೆ ಸಂದ ಗೌರವ, ವಿಶ್ವ ತುಳುವರ ಸಂಭ್ರಮ

0
11

ಗ್ಲೋಬಲ್ ಅಲಯನ್ಸ್ ಆಫ್ ತುಳು ಅಸೋಸಿಯೇಷನ್ಸ್ – ಗ್ಲೋಬಲ್ ತುಳುವಾಸ್, ವತಿಯಿಂದ ಕರ್ನಾಟಕ ಸರ್ಕಾರಕ್ಕೆ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಕೃತಜ್ಞತೆಗಳು.

ತುಳುನಾಡಿನ ಜನರ ಬಹುದಶಕಗಳ ಕನಸು ನನಸಾಗಿದೆ. ಸೆಪ್ಟೆಂಬರ್ 18, 2026ರಂದು ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತುಳು ಭಾಷೆಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಅನ್ವಯವಾಗುವಂತೆ ಕರ್ನಾಟಕದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯ ಸ್ಥಾನಮಾನ ನೀಡುವ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಈ ನಿರ್ಧಾರವು ತುಳು ಭಾಷೆಯ ಅಸ್ಮಿತೆ, ಸಂಸ್ಕೃತಿ ಮತ್ತು ಪರಂಪರೆಗೆ ದೊರೆತ ಮಹತ್ವದ ಗೌರವವಾಗಿದೆ.

ಈ ಸಂದರ್ಭದಲ್ಲಿ ಗ್ಲೋಬಲ್ ಅಲಯನ್ಸ್ ಆಫ್ ತುಳು ಅಸೋಸಿಯೇಷನ್ಸ್ (Global Alliance of Tulu Associations – Global Tuluvas) ವತಿಯಿಂದ ಕರ್ನಾಟಕದ ಮಾನ್ಯ ಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ.

ತುಳು ಭಾಷೆಯ ಅಧಿಕೃತ ಮಾನ್ಯತೆಯ ವಿಷಯವನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸಿ, ನಿರಂತರವಾಗಿ ಗಮನ ಸೆಳೆದ ಪುತ್ತೂರು ಶಾಸಕರಾದ ಶ್ರೀ ಅಶೋಕ್ ಕುಮಾರ್ ರೈ, ವಿಧಾನಸಭಾಧ್ಯಕ್ಷರಾದ ಶ್ರೀ ಯು.ಟಿ. ಖಾದರ್ ಹಾಗೂ ಈ ಬೇಡಿಕೆಗೆ ಸ್ಪಂದಿಸಿದ ಎಲ್ಲ ಜನಪ್ರತಿನಿಧಿಗಳ ಕೊಡುಗೆಯನ್ನು ಈ ಸಂದರ್ಭದಲ್ಲಿ ಸ್ಮರಿಸುತ್ತೇವೆ. ಶ್ರೀ ಅಶೋಕ್ ಕುಮಾರ್ ರೈ ಅವರು ಶಾಸಕರಾದ ಬಳಿಕ ವಿಧಾನಸಭೆಯಲ್ಲಿ ತಮ್ಮ ಮೊದಲ ಪ್ರಶ್ನೆಯನ್ನೇ ತುಳು ಭಾಷೆಯ ಕುರಿತು ಕೇಳಿದ್ದನ್ನು ಶ್ರೀ ಡಿ.ಕೆ. ಶಿವಕುಮಾರ್ ಅವರು ಸಚಿವ ಸಂಪುಟ ಸಭೆಯ ಬಳಿಕ ವಿಶೇಷವಾಗಿ ಸ್ಮರಿಸಿದ್ದಾರೆ.

ತಳಮಟ್ಟದ ಹೋರಾಟಗಾರರ ಸೇವೆಗೆ ಗೌರವ

ಈ ಸಾಧನೆಯ ಹಿಂದೆ ಅನೇಕ ದಶಕಗಳ ನಿರಂತರ ಹೋರಾಟ, ನಿಸ್ವಾರ್ಥ ಸೇವೆ ಮತ್ತು ಅಸಂಖ್ಯಾತ ತುಳು ಅಭಿಮಾನಿಗಳ ಪರಿಶ್ರಮ ಅಡಗಿದೆ.

ವಿಶೇಷವಾಗಿ ತುಳು ಭಾಷೆ ಮತ್ತು ತುಳು ಲಿಪಿಯ ಅಭಿವೃದ್ಧಿಗಾಗಿ ತಳಮಟ್ಟದಲ್ಲಿ ಶ್ರಮಿಸಿರುವ ಶ್ರೀ ಜಿ.ವಿ.ಎಸ್. ಉಳ್ಳಾಲ್ ಅವರ ಸೇವೆಯನ್ನು ಈ ಸಂದರ್ಭದಲ್ಲಿ ಗೌರವಪೂರ್ವಕವಾಗಿ ಸ್ಮರಿಸುತ್ತೇವೆ. ತುಳು ಲಿಪಿಯ ಕುರಿತು ಪುಸ್ತಕ ರಚಿಸಿ, ಭಾಷೆ ಮತ್ತು ಲಿಪಿಯ ಅರಿವು ಮೂಡಿಸುವಲ್ಲಿ ಅವರು ಸಲ್ಲಿಸಿರುವ ಕೊಡುಗೆ ಶ್ಲಾಘನೀಯವಾಗಿದೆ.

ಅದೇ ರೀತಿ, ತುಳು ಭಾಷೆಯ ಮಾನ್ಯತೆಗಾಗಿ ಹಲವು ವರ್ಷಗಳಿಂದ ಶ್ರಮಿಸಿದ ಸಾಹಿತಿಗಳು, ಸಂಶೋಧಕರು, ತುಳು ಅಕಾಡೆಮಿ, ಟೀಮ್ ಇಲೇಸ (Teem ilesa)ಜೈ ತುಳುನಾಡ್, ಆಲ್ ಅಮೆರಿಕ ತುಳು ಅಸೋಸಿಯೇಷನ್ಸೇರಿದಂತೆ ವಿವಿಧ ತುಳುಪರ ಸಂಘಟನೆಗಳು, ಕಲಾವಿದರು, ಶಿಕ್ಷಕರು, ಸಾಮಾಜಿಕ ಕಾರ್ಯಕರ್ತರು ಮತ್ತು ವಿಶ್ವದಾದ್ಯಂತ ನೆಲೆಸಿರುವ ತುಳು ಅಭಿಮಾನಿಗಳ ಸೇವೆಯನ್ನು ಕೃತಜ್ಞತೆಯಿಂದ ಸ್ಮರಿಸುತ್ತೇವೆ.

ಇದು ಒಬ್ಬ ವ್ಯಕ್ತಿಯ ಅಥವಾ ಒಂದು ಸಂಘಟನೆಯ ಸಾಧನೆಯಲ್ಲ. ಇದು ಹಲವು ತಲೆಮಾರುಗಳ ತುಳುವರ ಸಾಮೂಹಿಕ ಪ್ರಯತ್ನದ ಫಲವಾಗಿದೆ.

ಜಾಗತಿಕ ತುಳುವರ ಧ್ವನಿಯಾಗಿ ಗ್ಲೋಬಲ್ ತುಳುವಾಸ್

ವಿಶ್ವದ ವಿವಿಧ ದೇಶಗಳ ತುಳು ಸಂಘಟನೆಗಳು ಮತ್ತು ತುಳು ನಾಯಕರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಉದ್ದೇಶದಿಂದ ಸ್ಥಾಪಿತವಾದ ಗ್ಲೋಬಲ್ ಅಲಯನ್ಸ್ ಆಫ್ ತುಳು ಅಸೋಸಿಯೇಷನ್ಸ್, ತುಳು ಭಾಷೆಯ ಸಂರಕ್ಷಣೆ, ಪ್ರಚಾರ ಮತ್ತು ಅಧಿಕೃತ ಮಾನ್ಯತೆಯನ್ನು ತನ್ನ ಪ್ರಮುಖ ಉದ್ದೇಶಗಳಲ್ಲಿ ಒಂದಾಗಿ ಹೊಂದಿದೆ.

ತುಳು ಭಾಷೆಯನ್ನು ಕರ್ನಾಟಕದ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಘೋಷಿಸಬೇಕು ಹಾಗೂ ಭಾರತೀಯ ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟುಕೊಂಡು ನಮ್ಮ ಸಂಘಟನೆಯ ವತಿಯಿಂದ ಮನವಿಪತ್ರವನ್ನು ಸಲ್ಲಿಸಲಾಗಿತ್ತು.

ವಿಶ್ವದ 23 ದೇಶಗಳ ತುಳು ನಾಯಕರನ್ನು ಒಗ್ಗೂಡಿಸಿರುವ ನಮ್ಮ ವೇದಿಕೆಯ ಮೂಲಕ ತುಳು ಭಾಷೆಯ ಬೇಡಿಕೆಗೆ ಜಾಗತಿಕ ಮಟ್ಟದಲ್ಲಿ ಧ್ವನಿಯಾಗುವ ಸಣ್ಣ ಪ್ರಯತ್ನವನ್ನು ನಾವು ಮಾಡಿದ್ದೇವೆ ಎಂಬುದು ನಮಗೆ ಸಂತೋಷ ಮತ್ತು ಹೆಮ್ಮೆಯ ವಿಷಯವಾಗಿದೆ.

ಈ ಐತಿಹಾಸಿಕ ಸಂದರ್ಭದಲ್ಲಿ ನಮ್ಮ ಸಂಘಟನೆಯ ಎಲ್ಲ ಸದಸ್ಯರು, ದೇಶ ಪ್ರತಿನಿಧಿಗಳು ಹಾಗೂ ನಮ್ಮ ಪ್ರಯತ್ನಗಳಿಗೆ ಬೆಂಬಲ ನೀಡಿದ ಪ್ರತಿಯೊಬ್ಬರಿಗೂ ಹೃತ್ಪೂರ್ವಕ ಅಭಿನಂದನೆಗಳು.

ಮುಂದಿನ ಹೆಜ್ಜೆ: ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ತುಳುವಿಗೆ ಸ್ಥಾನ

ಕರ್ನಾಟಕ ಸರ್ಕಾರದ ಈ ನಿರ್ಧಾರವು ತುಳು ಭಾಷೆಯ ಅಭಿವೃದ್ಧಿಯ ಹೊಸ ಅಧ್ಯಾಯಕ್ಕೆ ನಾಂದಿಯಾಗಲಿ ಎಂಬುದು ನಮ್ಮ ಆಶಯ.

ಇದರೊಂದಿಗೆ ತುಳು ಭಾಷೆಯನ್ನು ಭಾರತೀಯ ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸುವ ಬಹುಕಾಲದ ಬೇಡಿಕೆಯೂ ಈಡೇರಬೇಕಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಗ್ಲೋಬಲ್ ತುಳುವಾಸ್ ವತಿಯಿಂದ ವಿನಂತಿಸುತ್ತೇವೆ.

ಇದೇ ಸಂದರ್ಭದಲ್ಲಿ ಸೆಪ್ಟೆಂಬರ್ 18ನ್ನುವಿಶ್ವ ತುಳು ದಿನ (World Tulu Day) ಎಂದು ಘೋಷಿಸಿ, ಪ್ರತಿವರ್ಷ ತುಳು ಭಾಷೆ, ಸಾಹಿತ್ಯ, ಲಿಪಿ ಮತ್ತು ಸಂಸ್ಕೃತಿಯ ಸಂಭ್ರಮಾಚರಣೆಗೆ ಮೀಸಲಿಡಬೇಕೆಂದು ಕರ್ನಾಟಕ ಸರ್ಕಾರವನ್ನು ವಿನಂತಿಸುತ್ತೇವೆ.

ತುಳು ಭಾಷೆಯ ಅಧಿಕೃತ ಮಾನ್ಯತೆಗಾಗಿ ಶ್ರಮಿಸಿದ ಎಲ್ಲರಿಗೂ ಮತ್ತೊಮ್ಮೆ ಅಭಿನಂದನೆಗಳು.

Kannadaಜೈ ತುಳುನಾಡ್! ಜೈ ತುಳು!

ಶ್ರೀವಲ್ಲಿ ರೈ ಮಾರ್ಟೆಲ್

ಸಂಸ್ಥಾಪಕರು

ಗ್ಲೋಬಲ್ ಅಲಯನ್ಸ್ ಆಫ್ ತುಳು ಅಸೋಸಿಯೇಷನ್ಸ್

(Global Alliance of Tulu Associations – Global Tuluvas)