ತುಳುವಿಗೆ ಅಧಿಕೃತ ಸ್ಥಾನಮಾನ : ಸರ್ಕಾರದ ನಿರ್ಧಾರಕ್ಕೆ ತುಳುನಾಡ ರಕ್ಷಣಾ ವೇದಿಕೆ ( ರಿ ) ಕಾಪು ತಾಲೂಕು ಅಧ್ಯಕ್ಷ ನಿತೀನ್ ಕುಮಾರ್ ಶೆಟ್ಟಿ ಅಭಿನಂದನೆ

0
38

ತುಳು ಭಾಷೆಗೆ ಅಧಿಕೃತ ಮಾನ್ಯತೆ ಹಾಗೂ ದ.ಕ. ಜಿಲ್ಲೆಯನ್ನು ಮಂಗಳೂರು ಜಿಲ್ಲೆ ಎಂದು ಮರುನಾಮಕರಣಕ್ಕೆ ಮುಂದಾದ ಸರ್ಕಾರಕ್ಕೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದ ತುಳುನಾಡ ರಕ್ಷಣಾ ವೇದಿಕೆ ( ರಿ ) ಕಾಪು ತಾಲೂಕು ಅಧ್ಯಕ್ಷ ನಿತೀನ್ ಕುಮಾರ್ ಶೆಟ್ಟಿ

ಕಾಪು : ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾದ ಅತಿ ಪುರಾತನ ಭಾಷೆಯಾದ ಶ್ರೀಮಂತ ಸಂಸ್ಕೃತಿಯನ್ನು ಹೊಂದಿರುವ ತುಳು ಭಾಷೆಗೆ ಅಧಿಕೃತ ಮಾನ್ಯತೆ ನೀಡಿದ ಕರ್ನಾಟಕ ಸರ್ಕಾರದ ಗೌರವಾನ್ವಿತ ಮುಖ್ಯಮಂತ್ರಿಗಳಾದ ಸನ್ಮಾನ್ಯ ಡಿ.ಕೆ. ಶಿವಕುಮಾರ್ ಅವರಿಗೆ ತುಳುನಾಡಿನ ಜನತೆಯ ಪರವಾಗಿ ಹಾಗೂ ತುಳುನಾಡ ರಕ್ಷಣಾ ವೇದಿಕೆ (ರಿ) ಉಡುಪಿ ಜಿಲ್ಲೆ ವತಿಯಿಂದ ಹೃತ್ಪೂರ್ವಕ ಅಭಿನಂದನೆಗಳು.

ದಿನಾಂಕ: 18-09-2026 ರಂದು ಮಂಗಳೂರಿನ ಪ್ರಜಾ ಸೌಧದಲ್ಲಿ ನಡೆದ ಐತಿಹಾಸಿಕ ವಿಶೇಷ ಸಚಿವ ಸಂಪುಟ ಸಭೆಯಲ್ಲಿ, ಕರಾವಳಿ ಕರ್ನಾಟಕದ ಜನರ ನೂರಾರು ವರ್ಷಗಳ ನಿರಂತರ ಹೋರಾಟ ಯೋಗಿಶ್ ಶೆಟ್ಟಿ ಜಪ್ಪು ನೇತೃತ್ವದ ತುಳುನಾಡ ರಕ್ಷಣಾ ವೇದಿಕೆ ಕಳೆದ 17 ವರ್ಷಗಳ ನಿರಂತರ ಹೋರಾಟ ಫಲವಾಗಿ ನಮ್ಮ ತಾಯ್ನುಡಿ ತುಳು ಭಾಷೆಯನ್ನು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಎರಡನೇ ಹೆಚ್ಚುವರಿ ಆಡಳಿತ ಭಾಷೆಯಾಗಿ ಘೋಷಿಸಿದ ಹಾಗೂ ನಮ್ಮ ಬಹುದಿನಗಳ ಬೇಡಿಕೆಯಾದ ದಕ್ಷಿಣ ಕನ್ನಡ ಜಿಲ್ಲೆಯನ್ನು “ಮಂಗಳೂರು ಜಿಲ್ಲೆ” ಎಂದು ಮರುನಾಮಕರಣ ಮಾಡುವ ಪ್ರಕ್ರಿಯೆಯನ್ನು ಆರಂಭಿಸಿದ ರಾಜ್ಯದ ಜನಪ್ರಿಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಡಿ.ಕೆ. ಶಿವಕುಮಾರ್ ಅವರಿಗೆ, ಇಡೀ ಸಚಿವ ಸಂಪುಟಕ್ಕೆ ಹಾಗೂ ತುಳು ಭಾಷೆಯನ್ನು ರಾಜ್ಯದ ಎರಡನೇ ಭಾಷೆಯನ್ನಾಗಿ ಮಾಡಲು ಹಲವು ವರ್ಷಗಳ ಕಾಲ ಹೋರಾಟ ಮಾಡಿದ ತುಳುನಾಡಿನ ಎಲ್ಲಾ ಸಂಘ ಸಂಸ್ಥೆಗಳಿಗೆ, ತುಳು ಹೋರಾಟಗಾರರಿಗೆ, ತುಳುನಾಡಿನ ಎಲ್ಲಾ ಗೌರವಾನ್ವಿತ ರಾಜಕಾರಣಿಗಳಿಗೇ ಸಾಹಿತಿಗಳಿಗೇ ಮತ್ತು ಮಾಧ್ಯಮದವರಿಗೆ ತುಳುನಾಡ ರಕ್ಷಣಾ ವೇದಿಕೆ (ರಿ.), ಉಡುಪಿ ಜಿಲ್ಲೆ ಹಾಗೂ ಕಾಪು ತಾಲೂಕು ಘಟಕದ ವತಿಯಿಂದ ಸಮಸ್ತ ತುಳುವರ ಪರವಾಗಿ ಅನಂತಾನಂತ ಅಭಿನಂದನೆಗಳನ್ನು ಸಲ್ಲಿಸುತ್ತೇವೆ.

2000 ವರ್ಷಗಳಿಗೂ ಮಿಕ್ಕಿದ ಶ್ರೀಮಂತ ಇತಿಹಾಸ, ತನ್ನದೇ ಆದ ಲಿಪಿ, ಸಾಹಿತ್ಯ, ಸಂಸ್ಕೃತಿ ಹೊಂದಿರುವ, ಸುಮಾರು 1 ಕೋಟಿಗೂ ಅಧಿಕ ಜನರು ಮಾತನಾಡುವ ತುಳು ಭಾಷೆಗೆ ಈ ಮಾನ್ಯತೆ ಸಿಗಬೇಕೆಂಬುದು ತುಳುನಾಡಿನ ಪ್ರತಿಯೊಬ್ಬರ ಕನಸಾಗಿತ್ತು. ನಿಮ್ಮ ಸರ್ಕಾರ ಆ ಕನಸನ್ನು ನನಸು ಮಾಡಿದೆ. ಜೊತೆಗೆ ಭಾಷಾ ಬಳಕೆ, ಅನುವಾದ, ತರಬೇತಿಗಾಗಿ ವಾರ್ಷಿಕ ರೂ. 82 ಲಕ್ಷ ಅನುದಾನ ಘೋಷಿಸಿರುವುದು ನಿಮ್ಮ ಬದ್ಧತೆಯನ್ನು ತೋರಿಸುತ್ತದೆ.

ಈ ನಿರ್ಧಾರದಿಂದ ಇನ್ನು ಮುಂದೆ ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಸಭೆಗಳಲ್ಲಿ ತುಳುವಿನಲ್ಲಿ ಮಾತನಾಡುವ ಹಕ್ಕು, ಸರ್ಕಾರಿ ಕಚೇರಿಗಳಲ್ಲಿ ತುಳುವಿನಲ್ಲಿ ಅರ್ಜಿ ಸಲ್ಲಿಸುವ ಹಕ್ಕು ನಮ್ಮ ಜನರಿಗೆ ಸಿಕ್ಕಂತಾಗಿದೆ. ಇದು ಭಾಷೆಯ ಜೊತೆಗೆ ತುಳುನಾಡಿನ ಜ್ಞಾನ ಪರಂಪರೆಯನ್ನು ಉಳಿಸಿದಂತಾಗಿದೆ.

ಕರಾವಳಿಯ ಅಭಿವೃದ್ಧಿಗೆ ರೂ. 32,611 ಕೋಟಿ ಯೋಜನೆಗಳನ್ನು ಘೋಷಿಸಿ, ಮಂಗಳೂರಿನಲ್ಲೇ ಸಂಪುಟ ಸಭೆ ನಡೆಸಿ ತುಳುನಾಡಿಗೆ ಗೌರವ ನೀಡಿದ ತಮಗೆ ಮತ್ತೊಮ್ಮೆ ಧನ್ಯವಾದಗಳು ಎಂದು ತುಳುನಾಡ ರಕ್ಷಣಾ ವೇದಿಕೆ ( ರಿ ) ಕಾಪು ತಾಲೂಕು ಅಧ್ಯಕ್ಷ ನಿತೀನ್ ಕುಮಾರ್ ಶೆಟ್ಟಿ ತಿಳಿಸಿದರು.