ಅ.4ರಂದು ಬನ್ನಡ್ಕದಲ್ಲಿ ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾ ಟನಾ ಕಾರ್ಯಕ್ರಮ

0
30

ಮೂಡುಬಿದಿರೆ : ಶ್ರೀ ಕ್ಷೇತ್ರ ಬನ್ನಡ್ಕದ ಸಾರ್ವಜನಿಕ ಶ್ರೀ ಶಾರದೋತ್ಸವ ಟ್ರಸ್ಟ್‌ (ರಿ.) ವತಿಯಿಂದ ಈ ಬಾರಿಯ ಶಾರದೋತ್ಸವದ ಅಂಗವಾಗಿ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಅ.4ರಂದು ಬೆಳಗ್ಗೆ 9 ಗಂಟೆಯಿಂದ ಶ್ರೀ ಗುರು ರಾಘವೇಂದ್ರ ಮಠದ ನಳಿನಾಕ್ಷಿ ಸಭಾಭವನದಲ್ಲಿ ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.

ಉದ್ಘಾಟನಾ ಕಾರ್ಯಕ್ರಮದಲ್ಲಿ ಶ್ರೀ ಗುರು ರಾಘವೇಂದ್ರ ಮಠದ ಮುರಂತಕೋಡಿ ಗೋವಿಂದ ಭಟ್, ಸಾರ್ವಜನಿಕ ಶ್ರೀ ಶಾರದೋತ್ಸವ ಟ್ರಸ್ಟ್‌ನ ಅಧ್ಯಕ್ಷ ದಯಾನಂದ ಪೈ, ಶ್ರೀ ಕ್ಷೇತ್ರ ಬನ್ನಡ್ಕದ ಆಡಳಿತ ಮೊಕ್ತೇಸರ ಸುಕುಮಾರ್ ಬಲ್ಲಾಳ್ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು, ಉದ್ಯಮಿಗಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಭಕ್ತಾಭಿಮಾನಿಗಳು ಭಾಗವಹಿಸಲಿದ್ದಾರೆ.

ವಿವಿಧ ವಿಭಾಗಗಳಲ್ಲಿ ಚಿತ್ರಕಲಾ ಸ್ಪರ್ಧೆ

ಅ.4ರಂದು ಬೆಳಗ್ಗೆ 9 ಗಂಟೆಯಿಂದ ಚಿತ್ರಕಲಾ ಸ್ಪರ್ಧೆ ನಡೆಯಲಿದ್ದು, ಪ್ರತಿ ವಿಭಾಗಕ್ಕೆ ಎರಡು ಗಂಟೆಗಳ ಕಾಲಾವಕಾಶ ನೀಡಲಾಗಿದೆ.

ಎಲ್‌ಕೆಜಿಯಿಂದ 1ನೇ ತರಗತಿವರೆಗೆ ‘ಪರಿಸರ’, 2ರಿಂದ 4ನೇ ತರಗತಿವರೆಗೆ ‘ಪ್ರಕೃತಿಯೊಂದಿಗೆ ನವಿಲಿನ ಚಿತ್ರ’, 5ರಿಂದ 7ನೇ ತರಗತಿವರೆಗೆ ‘ಪ್ರಕೃತಿ ಉಳಿಸಿ’, 8ರಿಂದ 10ನೇ ತರಗತಿ ವಿಭಾಗಕ್ಕೆ ‘ಕರಾವಳಿ ಜೀವನ ಶೈಲಿ’, ಕಾಲೇಜು ವಿಭಾಗಕ್ಕೆ ‘ಕರಾವಳಿಯ ಸಾಂಸ್ಕೃತಿಕ ವೇಷಗಳು’ ವಿಷಯಗಳನ್ನು ನೀಡಲಾಗಿದೆ.

ಚಿತ್ರಕಲೆಗೆ ಬೇಕಾದ ಹಾಳೆಯನ್ನು ಹೊರತುಪಡಿಸಿ ಇತರ ಪರಿಕರಗಳನ್ನು ಸ್ಪರ್ಧಾಳುಗಳೇ ತರಬೇಕು ಎಂದು ಆಯೋಜಕರು ತಿಳಿಸಿದ್ದಾರೆ.

ಭಕ್ತಿಗೀತೆ, ಜಾನಪದ ಹಾಗೂ ಭಾವಗೀತೆ ಸ್ಪರ್ಧೆ

ಯುಕೆಜಿಯಿಂದ 4ನೇ ತರಗತಿವರೆಗೆ ಹಾಗೂ 5ರಿಂದ 7ನೇ ತರಗತಿವರೆಗೆ ಭಕ್ತಿಗೀತೆ, 8ರಿಂದ 10ನೇ ತರಗತಿಗೆ ಜಾನಪದಗೀತೆ, ಕಾಲೇಜು ವಿಭಾಗಕ್ಕೆ ಭಾವಗೀತೆ, ಸಾರ್ವಜನಿಕ ವಿಭಾಗದಲ್ಲಿ ಭಕ್ತಿಗೀತೆ ಮತ್ತು ಜಾನಪದಗೀತೆ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

ಭಗವದ್ಗೀತೆ ಶ್ಲೋಕ ಕಂಠಪಾಠ

ವಿದ್ಯಾರ್ಥಿಗಳಲ್ಲಿ ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಅರಿವು ಬೆಳೆಸುವ ಉದ್ದೇಶದಿಂದ ಭಗವದ್ಗೀತೆ ಶ್ಲೋಕ ಕಂಠಪಾಠ ಸ್ಪರ್ಧೆಯನ್ನೂ ಏರ್ಪಡಿಸಲಾಗಿದೆ. 1ರಿಂದ 4ನೇ ತರಗತಿಯವರಿಗೆ ಪ್ರಥಮ ಅಧ್ಯಾಯದ 2 ಶ್ಲೋಕಗಳು, 5ರಿಂದ 7ನೇ ತರಗತಿಯವರಿಗೆ 1ರಿಂದ 5 ಶ್ಲೋಕಗಳು, 8ರಿಂದ 10ನೇ ತರಗತಿಯವರಿಗೆ 1ರಿಂದ 10 ಶ್ಲೋಕಗಳು ಹಾಗೂ ಪಿಯುಸಿ, ಕಾಲೇಜು ಮತ್ತು ಸಾರ್ವಜನಿಕ ವಿಭಾಗಕ್ಕೆ ಪ್ರಥಮ ಅಧ್ಯಾಯದ 1ರಿಂದ 15 ಶ್ಲೋಕಗಳನ್ನು ಕಂಠಪಾಠ ಮಾಡಬೇಕಾಗಿದೆ.

ರಂಗೋಲಿ, ಮುದ್ದು ಶಾರದೆ ಸ್ಪರ್ಧೆ

ರಂಗೋಲಿ ಸ್ಪರ್ಧೆಯು ಪ್ರೌಢಶಾಲಾ, ಕಾಲೇಜು ಹಾಗೂ ಸಾರ್ವಜನಿಕ ವಿಭಾಗಗಳಲ್ಲಿ ನಡೆಯಲಿದೆ. ಸ್ಪರ್ಧೆಗೆ ಎರಡು ಗಂಟೆಗಳ ಕಾಲಾವಕಾಶ ನೀಡಲಾಗಿದೆ.

ಅ.20ರಂದು ಮಧ್ಯಾಹ್ನ 1 ಗಂಟೆಯಿಂದ ಶ್ರೀ ಕ್ಷೇತ್ರ ಬನ್ನಡ್ಕದಲ್ಲಿ ‘ಮುದ್ದು ಶಾರದೆ’ ಸ್ಪರ್ಧೆ ನಡೆಯಲಿದೆ. 3 ವರ್ಷದೊಳಗಿನ ಮಕ್ಕಳು, 4ರಿಂದ 6 ವರ್ಷದ ಮಕ್ಕಳು ಹಾಗೂ 7ರಿಂದ 10 ವರ್ಷದ ಮಕ್ಕಳಿಗಾಗಿ ಪ್ರತ್ಯೇಕ ವಿಭಾಗಗಳನ್ನು ಮಾಡಲಾಗಿದೆ. ಈ ಸ್ಪರ್ಧೆಯಲ್ಲಿ ನೃತ್ಯಕ್ಕೆ ಅವಕಾಶವಿರುವುದಿಲ್ಲ ಎಂದು ಆಯೋಜಕರು ತಿಳಿಸಿದ್ದಾರೆ.

ಅ.21ರಂದು ಹೂ ಕಟ್ಟುವ ಸ್ಪರ್ಧೆ

ಅ.21ರಂದು ಬೆಳಗ್ಗೆ 9 ಗಂಟೆಯಿಂದ ಶ್ರೀ ಕ್ಷೇತ್ರ ಬನ್ನಡ್ಕದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು, ಬೆಳಗ್ಗೆ 9.30ರಿಂದ ಮಧ್ಯಾಹ್ನ 12.30ರವರೆಗೆ ಸಾರ್ವಜನಿಕರಿಗೆ ಹೂ ಕಟ್ಟುವ ಸ್ಪರ್ಧೆ ಆಯೋಜಿಸಲಾಗಿದೆ. ಸ್ಪರ್ಧೆಗೆ ಅಗತ್ಯವಿರುವ ಹೂಗಳನ್ನು ಸ್ಪರ್ಧಾಳುಗಳೇ ತರಬೇಕು.

ಶಾರದೋತ್ಸವದ ಅಂಗವಾಗಿ ನಡೆಯಲಿರುವ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು, ಮಕ್ಕಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಸಾರ್ವಜನಿಕ ಶ್ರೀ ಶಾರದೋತ್ಸವ ಟ್ರಸ್ಟ್‌ (ರಿ.) ಬನ್ನಡ್ಕದ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕಾರಿಣಿ ಸದಸ್ಯರು ಹಾಗೂ ಸಮಿತಿಯ ಸದಸ್ಯರು ಮನವಿ ಮಾಡಿದ್ದಾರೆ.