ಅಪಾಯದ ತಿರುವುಗಳಲ್ಲಿ ಮತ್ತೆ ಬಿರುಕು : ಆಗುಂಬೆ ಘಾಟಿ ರಸ್ತೆಗೆ ಕಂಟಕ

0
139

ಆಗುಂಬೆ : ಆಗುಂಬೆ ಸೂರ್ಯಾಸ್ತ ವೀಕ್ಷಣಾ ಸ್ಥಳದ ಸಮೀಪ ಕೆಲವು ತಿಂಗಳ ಹಿಂದೆ ಮುಖ್ಯರಸ್ತೆ ಕುಸಿದಿದ್ದ ಸ್ಥಳದಲ್ಲೇ ಎರಡು ದಿನಗಳ ಹಿಂದೆ ಮತ್ತೆ ಮಣ್ಣು ಕುಸಿತ ಸಂಭವಿಸಿದೆ. ಇದರಿಂದ ಘಾಟಿ ರಸ್ತೆಯ ಸುರಕ್ಷತೆ ಕುರಿತು ಆತಂಕ ಹೆಚ್ಚಾಗಿದೆ.

ಕೆಲ ವರ್ಷಗಳ ಹಿಂದೆ ಇದೇ ಪ್ರದೇಶದಲ್ಲಿ ಭಾರಿ ಪ್ರಮಾಣದಲ್ಲಿ ಗುಡ್ಡ ಕುಸಿತ ಸಂಭವಿಸಿ ಸುಮಾರು ಮೂರು ತಿಂಗಳ ಕಾಲ ಸಂಚಾರ ಸ್ಥಗಿತಗೊಂಡಿತ್ತು. ಇದೀಗ ಅದೇ ಭಾಗದಲ್ಲಿ ಮತ್ತೆ ಮಣ್ಣು ಕುಸಿದಿರುವುದರಿಂದ ಮಳೆ ಮುಂದುವರಿದರೆ ಮತ್ತಷ್ಟು ಕುಸಿತ ಸಂಭವಿಸುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ರಸ್ತೆ ಮಧ್ಯೆ ಬಿರುಕು

ಆಗುಂಬೆ ಘಾಟಿಯಲ್ಲಿ ಒಟ್ಟು 14 ಕಡಿದಾದ ತಿರುವುಗಳಿದ್ದು, ಮೇಲ್ಭಾಗದ ಏಳು ತಿರುವುಗಳು ಶಿವಮೊಗ್ಗ ಜಿಲ್ಲೆ ವ್ಯಾಪ್ತಿಗೆ ಹಾಗೂ ಕೆಳಭಾಗದ ಏಳು ತಿರುವುಗಳು ಉಡುಪಿ ಜಿಲ್ಲೆ ವ್ಯಾಪ್ತಿಗೆ ಸೇರಿವೆ. ಪ್ರಸ್ತುತ 5, 7, 3 ಮತ್ತು 4ನೇ ತಿರುವುಗಳಲ್ಲದೆ ಆನೆಕಲ್ಲು ರಸ್ತೆಯ ಮಧ್ಯಭಾಗದಲ್ಲಿಯೂ ಬಿರುಕು ಕಾಣಿಸಿಕೊಂಡಿದೆ.

ಪ್ರವಾಸಿಗರ ವಾಹನ ದಟ್ಟಣೆ

ಸೂರ್ಯಾಸ್ತದ ಸಮಯ ಸಮೀಪಿಸುತ್ತಿದ್ದಂತೆ ಆಗುಂಬೆಯತ್ತ ಪ್ರವಾಸಿಗರ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದೆ. ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸಿ ಸೂರ್ಯಾಸ್ತ ವೀಕ್ಷಿಸುವುದು, ಛಾಯಾಚಿತ್ರ ತೆಗೆಯುವುದು ಹಾಗೂ ಕಿರಿದಾದ ಘಾಟಿ ರಸ್ತೆಯಲ್ಲಿ ಎದುರುಬದುರಾಗಿ ವಾಹನಗಳು ಸಾಗುವುದರಿಂದ ಸಂಚಾರದ ಒತ್ತಡ ಹೆಚ್ಚುತ್ತಿದೆ. ವಾರಾಂತ್ಯದಲ್ಲಿ ಈ ಸಮಸ್ಯೆ ಮತ್ತಷ್ಟು ತೀವ್ರವಾಗುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಕುಸಿದಿರುವ ರಸ್ತೆ ಅಂಚಿನಲ್ಲಿ ವಾಹನ ನಿಲ್ಲಿಸುವುದು ಹಾಗೂ ನಿಂತು ಛಾಯಾಚಿತ್ರ ತೆಗೆಯುವುದನ್ನು ತಪ್ಪಿಸಿ, ಸಂಚಾರಕ್ಕೆ ಅಡ್ಡಿಯಾಗದಂತೆ ಸಹಕರಿಸುವುದು ಸುರಕ್ಷಿತ ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.

₹18 ಕೋಟಿ ಅನುದಾನ

ಆಗುಂಬೆ ಘಾಟಿ ರಸ್ತೆಯ ದುರಸ್ತಿಗಾಗಿ ಸುಮಾರು ₹18 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಸದ್ಯದಲ್ಲೇ ಕಾಮಗಾರಿ ಆರಂಭವಾಗಲಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಘಾಟಿ ರಸ್ತೆಯ ದುಃಸ್ಥಿತಿಗೆ ಶಾಶ್ವತ ಪರಿಹಾರ ಕಲ್ಪಿಸುವ ಉದ್ದೇಶದಿಂದ ಬಿಡುಗಡೆಯಾಗಿರುವ ಅನುದಾನದಲ್ಲಿ ಕಾಮಗಾರಿಯನ್ನು ತ್ವರಿತವಾಗಿ ಕೈಗೆತ್ತಿಕೊಳ್ಳಬೇಕಿದೆ. ರಸ್ತೆ ಕುಸಿತ ಹಾಗೂ ಹೆಚ್ಚುತ್ತಿರುವ ಪ್ರವಾಸಿಗರ ವಾಹನ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಸುರಕ್ಷಿತ ಮತ್ತು ಸುಗಮ ಸಂಚಾರಕ್ಕೆ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕು ಎಂಬ ಆಗ್ರಹ ಕೇಳಿಬಂದಿದೆ.

ಜುಲೈನಲ್ಲಿ ಆಗುಂಬೆ ಘಾಟಿ ಪ್ರದೇಶಕ್ಕೆ ಭೇಟಿ ನೀಡಿದ್ದ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರು ಅಪಾಯಕಾರಿ ತಿರುವುಗಳ ದುರಸ್ತಿಗೆ ವಿಶೇಷ ಗಮನ ನೀಡಲಾಗುವುದು ಎಂದು ತಿಳಿಸಿದ್ದರು.

ಘಾಟಿ ಪ್ರದೇಶದ ಕಾಮಗಾರಿಗೆ ಅನುದಾನ ಮಂಜೂರಾಗಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭಿಸಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಎಂಜಿನಿಯರ್ ಶಶಿಧರ್ ತಿಳಿಸಿದ್ದಾರೆ.