ಮಂಗಳೂರು : ಬಲ್ಲಾಳಬಾಗ್ ನಲ್ಲಿರುವ ಪ್ರಸಾದ್ ಆರ್ಟ್ ಗ್ಯಾಲರಿಯ ಕರಾವಳಿ ಚಿತ್ರಕಲಾ ಚಾವಡಿಯ ಮೂವರು ಹಿರಿಯ ಕಲಾವಿದರ ಚಿತ್ರಕಲಾ ಪ್ರದರ್ಶನ ಬೆಂಗಳೂರಿನ ಚಿತ್ರಕಲಾ ಪರಿಷತ್ ನಲ್ಲಿ ನಡೆಯಲಿದೆ. ಅಕ್ಟೋಬರ್ 1ರಿಂದ 7ರವರೆಗೆ ನಡೆಯಲಿರುವ ಈ ಚಿತ್ರಕಲಾ ಪ್ರದರ್ಶನದಲ್ಲಿ ಗಣೇಶ ಸೋಮಯಾ ಜಿ, ಶರತ್ ಹೊಳ್ಳ, ಜಯರಾಮ ಗಿಳಿಯಾಳ ಅವರ 120ಕ್ಕೂ ಹೆಚ್ಚು ಕಲಾಕೃತಿಗಳು ಪ್ರದರ್ಶನಗೊಳ್ಳಲಿವೆ.
ಸುಪ್ರಸಿದ್ಧ ಹಿರಿಯ ಕಲಾವಿದ ಚಿ ಸು ಕೃಷ್ಣಶೆಟ್ಟಿ ಪ್ರದರ್ಶನ ಉದ್ಘಾಟಿಸಲಿದ್ದು ಕರ್ನಾಟಕ ಲಲಿತಕಲಾ ಅಕಾಡೆಮಿಯ ಅಧ್ಯಕ್ಷ ಪ ಸ ಕುಮಾರ್ ಹಾಗೂ ಮಂಗಳೂರಿನ ಉದ್ಯಮಿ ಮಧುಬನ್ ಗ್ರಾಫಿಕ್ಸ್ನ ಮಾಲಕ ಪ್ರಸನ್ನ ಕೆ. ಹಾಜರಿರಲಿದ್ದಾರೆ ಎಂದು ಕರಾವಳಿ ಚಿತ್ರಕಲಾ ಚಾವಡಿಯ ಅಧ್ಯಕ್ಷ ಕೋಟಿ ಪ್ರಸಾದ್ ಆಳ್ವ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
