ಶಾಸ್ತ್ರಜ್ಞಾನ ಪರಂಪರಾಭೂಷಣ ಗೌರವಕ್ಕೆ ಪ್ರೊ. ನವೀನ ಹೊಳ್ಳ

0
7

ಮಂಗಳೂರು: ಶಾಸ್ತ್ರಜ್ಞಾನ ಪರಂಪರೆಯ ಅಧ್ಯಯನ, ಸಂರಕ್ಷಣೆ ಹಾಗೂ ಮುಂದಿನ ಪೀಳಿಗೆಗೆ ಅದರ ಮಹತ್ವವನ್ನು ಪರಿಚಯಿಸುವಲ್ಲಿ ಸಲ್ಲಿಸಿರುವ ಕೊಡುಗೆಯನ್ನು ಗುರುತಿಸಿ ಪ್ರೊ. ನವೀನ ಹೊಳ್ಳ ವಿ. ಅವರಿಗೆ ‘ಶಾಸ್ತ್ರಜ್ಞಾನ ಪರಂಪರಾಭೂಷಣ’ ಗೌರವ ಸಮರ್ಪಿಸಲಾಯಿತು. ಕೂಟ ಮಹಾಜಗತ್ತು ಸಾಲಿಗ್ರಾಮ (ರಿ.) ವತಿಯಿಂದ ಮಂಗಳೂರಿನಲ್ಲಿ ನಡೆದ ಕೇಂದ್ರ ಮಹಾಧಿವೇಶನ ‘ಕೋಟದವರ ಹಬ್ಬ’ದಲ್ಲಿ ಅವರಿಗೆ ಈ ಗೌರವವನ್ನು ನೀಡಲು ನಿರ್ಧರಿಸಲಾಗಿತ್ತು.

ಸಮ್ಮೇಳನದ ದಿನ ನವೀನ ಹೊಳ್ಳ ಅವರಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ, ಕೂಟ ಮಹಾಜಗತ್ತಿನ ಪದಾಧಿಕಾರಿಗಳು ಹಾಗೂ ಪ್ರಮುಖರು ಅವರ ನಿವಾಸಕ್ಕೆ ತೆರಳಿ ಸನ್ಮಾನ ಪತ್ರವನ್ನು ಹಸ್ತಾಂತರಿಸಿದರು.

ಕೂಟ ಸಮುದಾಯದ ಶಾಸ್ತ್ರ, ಸಂಸ್ಕೃತಿ ಹಾಗೂ ಜ್ಞಾನ ಪರಂಪರೆಯೊಂದಿಗೆ ನವೀನ ಹೊಳ್ಳ ಅವರು ಹೊಂದಿರುವ ನಂಟು ಮತ್ತು ಪರಂಪರೆಯ ಜ್ಞಾನವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನೀಡಿರುವ ಕೊಡುಗೆಯನ್ನು ಗುರುತಿಸಿ ಈ ಗೌರವವನ್ನು ಸಮರ್ಪಿಸಲಾಗಿದೆ.

ಗೌರವ ಸ್ವೀಕರಿಸಿ ಮಾತನಾಡಿದ ಪ್ರೊ. ನವೀನ ಹೊಳ್ಳ, “ಮಕ್ಕಳಿಗೆ ಸಂಸ್ಕಾರವನ್ನು ನೀಡುವ ಕಾರ್ಯ ಮನೆಯಿಂದಲೇ ಆರಂಭವಾಗಬೇಕು. ನಮ್ಮ ಪರಂಪರೆ, ಆಚಾರ–ವಿಚಾರ ಮತ್ತು ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಕೂಟ ಮಹಾಜಗತ್ತಿನ ಇಂತಹ ಕಾರ್ಯಕ್ರಮಗಳು ಇನ್ನಷ್ಟು ಮುನ್ನಡೆಯಲಿ. ಎಲ್ಲ ಕಾರ್ಯಗಳಿಗೂ ಶಾರದಾ ಮಾತೆಯ ಆಶೀರ್ವಾದ ದೊರೆಯಲಿ” ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಕೂಟ ಮಹಾಜಗತ್ತಿನ ಮಂಗಳೂರು ಅಂಗಸಂಸ್ಥೆಯ ಅಧ್ಯಕ್ಷ ಶ್ರೀಧರ ಹೊಳ್ಳ, ಉಪಾಧ್ಯಕ್ಷ ಪ್ರಭಾಕರ ಐತಾಳ್, ಸಮ್ಮೇಳನದ ಮಾಧ್ಯಮ ಸಮಿತಿ ಸದಸ್ಯ ಪ್ರವೀಣ್ ಮಯ್ಯ, ದೈವಜ್ಞ ಶ್ರೀರಂಗ ಐತಾಳ್, ವಿದುಷಿ ಪ್ರತಿಮಾ ಶ್ರೀಧರ್ ಹಾಗೂ ಯೋಗೀಶ್ ಹೊಳ್ಳ ಉಪಸ್ಥಿತರಿದ್ದರು.