ನ.24ರಂದು ಜಿಲ್ಲಾ ಕೇಂದ್ರದಲ್ಲಿ ನಡೆಯುವ ರಾಜ್ಯ ಸರಕಾರದ ಗ್ಯಾರಂಟಿ ಸಮಾವೇಶಕ್ಕೆ ಗ್ರಾಮ ಪಂಚಾಯತ್ ವ್ಯಾಪ್ತಿಯಿಂದ ಫಲಾನುಭವಿಗಳನ್ನು ಕರೆತರಲು ಹಾಗೂ ಉಟೋಪಚಾರದ ವೆಚ್ಚಗಳಿಗಾಗಿ ಪ್ರತೀ ಗ್ರಾಮ ಪಂಚಾಯತ್ ಗಳಿಂದ ರೂ.25,000 ಮೊತ್ತವನ್ನು ನೀಡುವಂತೆ ಜಿ.ಪಂ. ಕಾರ್ಯ ನಿರ್ವಹಣಾಧಿಕಾರಿಗಳ ಮೂಲಕ ರಾಜ್ಯ ಸರಕಾರ ಆದೇಶ ಹೊರಡಿಸಿರುವುದನ್ನು ಉಡುಪಿ ಜಿಲ್ಲಾ ಬಿಜೆಪಿ ತೀವ್ರವಾಗಿ ಖಂಡಿಸಿದೆ. ಈ ಬೆಳವಣಿಗೆ ರಾಜ್ಯ ಕಾಂಗ್ರೆಸ್ ಸರಕಾರದ ದಿವಾಳಿತನಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರಕಾರ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯನ್ನು ಸಕಾಲದಲ್ಲಿ ನಡೆಸದೇ ಇರುವುದರಿಂದ ಕೇಂದ್ರ ಸರಕಾರದಿಂದ ದೊರೆಯುವ ಶಾಸನಬದ್ಧ ಅನುದಾನಗಳಿಗೆ ತಡೆಯುoಟಾಗಿದೆ. ಇದರಿಂದಾಗಿ ಗ್ರಾಮ ಪಂಚಾಯತ್ ಗಳ ಅಭಿವೃದ್ಧಿಗೆ ತೊಡಕುಂಟಾಗಿದೆ. ಇದರ ನಡುವೆ ಜನರ ತೆರಿಗೆಯ ಹಣವನ್ನು ರಾಜ್ಯ ಕಾಂಗ್ರೆಸ್ ಸರಕಾರದ ರಾಜಕೀಯ ಪ್ರೇರಿತ ಗ್ಯಾರಂಟಿ ಯೋಜನೆಗಳ ಸಮಾವೇಶದ ಖರ್ಚು ವೆಚ್ಚಗಳಿಗೆ ಬಳಸಲು ಉದ್ದೇಶಿಸಿರುವ ಸರಕಾರದ ಆದೇಶಕ್ಕೆ ವ್ಯಾಪಕ ಜನಾಕ್ರೋಶ ವ್ಯಕ್ತವಾಗಿದೆ.
ಗ್ರಾಮ ಪಂಚಾಯತ್ ಸಿಬ್ಬಂದಿಗಳಿಗೆ ಕಳೆದ 3 ತಿಂಗಳಿಂದ ವೇತನ ಬಾಕಿ, ವಿದ್ಯುತ್ ಬಿಲ್ ಬಾಕಿ, ಕುಡಿಯುವ ನೀರಿನ ನಿರ್ವಹಣೆಯ ಬಿಲ್ ಬಾಕಿ ಉಳಿಸಿಕೊಂಡಿರುವ ಗ್ರಾಮ ಪಂಚಾಯತ್ ಗಳು ಸ್ವಚ್ಛತೆ, ಚರಂಡಿ, ರಸ್ತೆ ನಿರ್ವಹಣೆ ಮುಂತಾದ ಮೂಲಭೂತ ಸೌಕರ್ಯಗಳ ಆದ್ಯತೆಯನ್ನು ಪೂರೈಸಲು ಹಣದ ಕೊರತೆಯಿಂದ ನಲುಗುತ್ತಿರುವ ಸಂಧಿಗ್ದ ಸನ್ನಿವೇಶದಲ್ಲಿ ರಾಜ್ಯ ಕಾಂಗ್ರೆಸ್ ಸರಕಾರ ಗ್ರಾಮ ಸರಕಾರಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಈ ಹಿನ್ನೆಲೆಯಲ್ಲಿ ಅವೈಜ್ಞಾನಿಕ ಗ್ಯಾರಂಟಿಗಳನ್ನು ನೀಡಿ, ಬೇಕಾಬಿಟ್ಟಿ ಬೆಲೆ ಏರಿಕೆ ಮೂಲಕ ರಾಜ್ಯದ ಜನತೆಯನ್ನು ಸುಲಿಗೆ ಮಾಡುತ್ತಿರುವ ರಾಜ್ಯ ಕಾಂಗ್ರೆಸ್ ಸರಕಾರ ಬೊಕ್ಕಸವನ್ನು ದಿವಾಳಿ ಮಾಡಿ ಇದೀಗ ಗ್ರಾಮ ಪಂಚಾಯತ್ ನಲ್ಲಿ ಗ್ರಾಮದ ಅಭಿವೃದ್ಧಿಗೆ ವಿನಿಯೋಗಿಸಬೇಕಾದ ಮೊತ್ತವನ್ನು ರಾಜಕೀಯ ಪ್ರೇರಿತ ಕಾರ್ಯಕ್ರಮಗಳಿಗೆ ವ್ಯಯಿಸಲು ಮುಂದಾಗುವ ಮೂಲಕ ಗ್ರಾಮ ಪಂಚಾಯತ್ ಗಳನ್ನೂ ದಿವಾಳಿಯಾಗಿಸಲು ಹುನ್ನಾರ ನಡೆಸುತ್ತಿರುವುದನ್ನು ರಾಜ್ಯದ ಜನತೆ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಮುಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕುತ್ಯಾರು ನವೀನ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

