ಹಿಂದೂ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಗಡಿಪಾರು ಮಾಡುತ್ತಿರುವುದು ಪೊಲೀಸ್ ಇಲಾಖೆಯ ದ್ವಂದ್ವ ನಿಲುವಿಗೆ ಸಾಕ್ಷಿ: ಜಗದೀಶ್ ಕಾರಂತ್
ಮೂಡಬಿದಿರೆ: ಹಿಂದೂ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸಮಾಜದ ಪರವಾಗಿ ಕೆಲಸ ಮಾಡುತ್ತಿರುವ ಹಿಂದೂ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಗಡಿಪಾರು ಮಾಡುವ ಕ್ರಮ ಪೊಲೀಸ್ ಇಲಾಖೆಯ ದ್ವಂದ್ವ ನಿಲುವನ್ನು ಎತ್ತಿತೋರಿಸುತ್ತಿದೆ ಎಂದು ಹಿಂದೂ ಮುಖಂಡ ಜಗದೀಶ್ ಕಾರಂತ್ ಆಕ್ರೋಶ ವ್ಯಕ್ತಪಡಿಸಿದರು.
ಅವರು ಗಡಿಪಾರು ಆದೇಶಕ್ಕೆ ಒಳಗಾಗಿರುವ ಹಿಂದೂ ಕಾರ್ಯಕರ್ತ ಜಗದೀಶ್ ಮೂಡಬಿದ್ರೆ ಅವರ ಮನೆಗೆ ಭೇಟಿ ನೀಡಿ ಕುಟುಂಬದ ಸದಸ್ಯರನ್ನು ಭೇಟಿಯಾಗಿ ಮಾತನಾಡಿದ ಬಳಿಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಮೂಡಬಿದಿರೆ ಪರಿಸರದಲ್ಲಿ ಅಕ್ರಮ ಕಸಾಯಿಖಾನೆಗಳು ನಿರಂತರವಾಗಿ ಕಾರ್ಯಾಚರಿಸುತ್ತಿವೆ ಅವುಗಳ ವಿರುದ್ಧ ಪೊಲೀಸ್ ಇಲಾಖೆ ಯಾವ ರೀತಿಯ ಕಠಿಣ ಕ್ರಮ ಕೈಗೊಂಡಿದೆ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡುತ್ತಿದೆ. ಹಟ್ಟಿಗಳಿಂದಲೇ ಗೋವುಗಳನ್ನು ಕಳ್ಳತನ ಮಾಡುವ ಪ್ರಕರಣಗಳು ನಡೆಯುತ್ತಿದ್ದರೂ, ಅಂತಹ ಕೃತ್ಯಗಳಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆಯೇ ಎಂಬುದನ್ನು ಸ್ಪಷ್ಟಪಡಿಸಬೇಕಿದೆ. ಆದರೆ ಹಿಂದೂ ಸಂಘಟನೆಗಳ ಪರವಾಗಿ ಕೆಲಸ ಮಾಡುವ ಕಾರ್ಯಕರ್ತರ ವಿರುದ್ಧ ಮಾತ್ರ ಗಡಿಪಾರು ಸೇರಿದಂತೆ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿರುವುದು ಖಂಡನೀಯ ಎಂದು ಹೇಳಿದರು.
ಜಗದೀಶ್ ಮೂಡಬಿದ್ರೆ ಅವರ ವಿರುದ್ಧ ಕೇವಲ ನಾಲ್ಕು ಪ್ರಕರಣಗಳಿದ್ದು, ಅವುಗಳಲ್ಲಿ ಒಂದು ಪ್ರಕರಣ ನ್ಯಾಯಾಲಯದಲ್ಲಿ ಇತ್ಯರ್ಥಗೊಂಡಿದೆ ಎನ್ನಲಾಗಿದೆ. ಇಂತಹ ಸಂದರ್ಭದಲ್ಲಿ ಗಡಿಪಾರು ಆದೇಶ ಹೊರಡಿಸಿರುವುದರ ಹಿಂದಿನ ಕಾರಣಗಳೇನು? ಈ ನಿರ್ಧಾರ ಕೈಗೊಳ್ಳಲು ಪೊಲೀಸರ ಮೇಲೆ ಯಾರಾದರೂ ಒತ್ತಡ ಹೇರಿದ್ದಾರೆಯೇ? ಎಂಬುದನ್ನು ಪೊಲೀಸ್ ಇಲಾಖೆ ಸಾರ್ವಜನಿಕವಾಗಿ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.
ಹಿಂದೂ ಕಾರ್ಯಕರ್ತರು ಸಮಾಜದ ಹಿತದೃಷ್ಟಿಯಿಂದ ಸಂಘಟನಾತ್ಮಕವಾಗಿ ಕೆಲಸ ಮಾಡುತ್ತಿದ್ದಾರೆ. ಅಂತಹ ಕಾರ್ಯಕರ್ತರನ್ನು ರಾಜಕೀಯ ಅಥವಾ ಇತರ ಒತ್ತಡಗಳ ಕಾರಣಕ್ಕೆ ಗುರಿಯಾಗಿಸಿ ಕಿರುಕುಳ ನೀಡುವ ಪ್ರಯತ್ನ ನಡೆದರೆ ಅದನ್ನು ಸಹಿಸಲು ಸಾಧ್ಯವಿಲ್ಲ. ಸರಕಾರ ಮತ್ತು ಪೊಲೀಸ್ ಇಲಾಖೆಯ ಇಂತಹ ಕ್ರಮಗಳು ಮುಂದುವರಿದರೆ ಮುಂದಿನ ದಿನಗಳಲ್ಲಿ ಜನಾಂದೋಲನ ರೂಪಿಸುವ ಅನಿವಾರ್ಯತೆ ಎದುರಾಗಲಿದೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಎಚ್ಚರಿಕೆಯಿಂದ ನಡೆದುಕೊಳ್ಳಬೇಕು ಎಂದು ಜಗದೀಶ್ ಕಾರಂತ್ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆ ಮಂಗಳೂರು ಗ್ರಾಮಾಂತರ ಜಿಲ್ಲಾ ಪ್ರಮುಖರಾದ ಸಮಿತ್ ರಾಜ್ ಧರೆಗುಡ್ಡೆ, ಸಂದೀಪ್ ಹೆಗ್ಡೆ, ಮಹೇಶ್ ಬೈಲೂರು, ಉಮೇಶ್ ಸೂಡ ಹಾಗೂ ನಿಖಿಲ್ ಉಡುಪಿ ಉಪಸ್ಥಿತರಿದ್ದರು.

