529 ಸ್ಪರ್ಧಿಗಳಿಂದ ಪ್ರತಿಭಾ ಅನಾವರಣ – ಸಂಸ್ಕೃತಿ, ಕಲೆ ಹಾಗೂ ಸಂಸ್ಕಾರಕ್ಕೆ ವೇದಿಕೆ
ಮೂಡುಬಿದಿರೆ : ಶ್ರೀ ಕ್ಷೇತ್ರ ಬನ್ನಡ್ಕದ ಸಾರ್ವಜನಿಕ ಶ್ರೀ ಶಾರದೋತ್ಸವ ಟ್ರಸ್ಟ್ (ರಿ.) ವತಿಯಿಂದ 5ನೇ ವರ್ಷದ ಶ್ರೀ ಸಾರ್ವಜನಿಕ ಶಾರದೋತ್ಸವದ ಅಂಗವಾಗಿ ಅಕ್ಟೋಬರ್ 4ರಂದು ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳನ್ನು ಅದ್ಧೂರಿಯಾಗಿ ಆಯೋಜಿಸಲಾಯಿತು.
ಶ್ರೀ ಗುರು ರಾಘವೇಂದ್ರ ಮಠದ ನಳಿನಾಕ್ಷಿ ಸಭಾಭವನದಲ್ಲಿ ನಡೆದ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳ ಒಟ್ಟು 529 ಸ್ಪರ್ಧಿಗಳು ಉತ್ಸಾಹದಿಂದ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು.

ಕಾರ್ಯಕ್ರಮದಲ್ಲಿ ಚಿತ್ರಕಲೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳು ನಡೆದಿದ್ದು, ಮಕ್ಕಳಿಂದ ಅತ್ಯಂತ ಉತ್ಸಾಹಭರಿತ ಸ್ಪಂದನೆ ವ್ಯಕ್ತವಾಯಿತು. ಎಲ್‌ಕೆಜಿಯಿಂದ ಕಾಲೇಜು ವಿಭಾಗದವರೆಗೆ ವಿವಿಧ ವಯೋಮಾನದ ಸ್ಪರ್ಧಿಗಳು ಭಾಗವಹಿಸಿ ತಮ್ಮ ಕಲಾ ಪ್ರತಿಭೆ, ಸೃಜನಶೀಲತೆ ಹಾಗೂ ಆತ್ಮವಿಶ್ವಾಸವನ್ನು ಪ್ರದರ್ಶಿಸಿದರು.
ಚಿತ್ರಕಲಾ ಸ್ಪರ್ಧೆಯಲ್ಲಿ ಎಲ್‌ಕೆಜಿ ಮತ್ತು 1ನೇ ತರಗತಿ ವಿಭಾಗಕ್ಕೆ ‘ಪರಿಸರ’, 2ರಿಂದ 4ನೇ ತರಗತಿಗೆ ‘ಪ್ರಕೃತಿಯೊಂದಿಗೆ ನವಿಲಿನ ಚಿತ್ರ’, 5ರಿಂದ 7ನೇ ತರಗತಿಗೆ ‘ಪ್ರಕೃತಿ ಉಳಿಸಿ’, 8ರಿಂದ 10ನೇ ತರಗತಿಗೆ ‘ಕರಾವಳಿ ಜೀವನ ಶೈಲಿ’ ಹಾಗೂ ಕಾಲೇಜು ವಿಭಾಗಕ್ಕೆ ‘ಕರಾವಳಿಯ ಸಾಂಸ್ಕೃತಿಕ ವೇಷಗಳು’ ಎಂಬ ವಿಷಯಗಳನ್ನು ನೀಡಲಾಗಿತ್ತು.
ಗುರು ರಾಯರ ದಿವ್ಯ ಸನ್ನಿಧಿಯಲ್ಲಿ ನಡೆದ ಈ ಸಾಂಸ್ಕೃತಿಕ ಕಾರ್ಯಕ್ರಮವು ಮಕ್ಕಳ ಪ್ರತಿಭೆ ಪ್ರದರ್ಶನಕ್ಕೆ ಉತ್ತಮ ವೇದಿಕೆಯಾಗುವುದರ ಜೊತೆಗೆ, ಅವರಲ್ಲಿ ನಮ್ಮ ಸಂಸ್ಕೃತಿ, ಸಂಪ್ರದಾಯ, ಕಲೆ ಹಾಗೂ ಧಾರ್ಮಿಕ ಮೌಲ್ಯಗಳ ಬಗ್ಗೆ ಅರಿವು ಮೂಡಿಸುವಂತಾಯಿತು.

ಕಾರ್ಯಕ್ರಮದ ಯಶಸ್ಸಿಗೆ ಪೋಷಕರು, ತೀರ್ಪುಗಾರರು, ಶಿಕ್ಷಕರು, ಸ್ವಯಂಸೇವಕರು, ಕಾರ್ಯಕರ್ತರು, ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಸೇರಿದಂತೆ ಹಲವರು ಸಹಕರಿಸಿದರು.
ಇಂದಿನ ಮಕ್ಕಳೇ ನಾಳಿನ ಸಮಾಜದ ಭವಿಷ್ಯ ಎಂಬ ಆಶಯದೊಂದಿಗೆ ಮಕ್ಕಳ ಪ್ರತಿಭೆ ಮತ್ತು ಸಂಸ್ಕಾರಕ್ಕೆ ಉತ್ತೇಜನ ನೀಡುವ ಇಂತಹ ಕಾರ್ಯಕ್ರಮಗಳು ಮುಂದಿನ ವರ್ಷಗಳಲ್ಲಿಯೂ ಇನ್ನಷ್ಟು ವಿಜೃಂಭಿಸಲಿ ಎಂಬುದು ಸಾರ್ವಜನಿಕ ಶ್ರೀ ಶಾರದೋತ್ಸವ ಟ್ರಸ್ಟ್‌ನ ಆಶಯವಾಗಿದೆ.
5ನೇ ವರ್ಷದ ಬನ್ನಡ್ಕ ಶಾರದೋತ್ಸವದ ಪ್ರಯುಕ್ತ ನಡೆದ ಸಾಂಸ್ಕೃತಿಕ ಸ್ಪರ್ಧೆಗಳ ವಿಜೇತರ ಫಲಿತಾಂಶವನ್ನು ಅಕ್ಟೋಬರ್ 6ರಂದು ಸಂಜೆ 6 ಗಂಟೆಯೊಳಗೆ ಪ್ರಕಟಿಸಲಾಗುವುದು ಎಂದು ಟ್ರಸ್ಟ್ ತಿಳಿಸಿದೆ.

