
ಮುಲ್ಕಿ : ಶಿಮಂತೂರು ದೇವಸ್ಥಾನಕ್ಕೆ ಪ್ರದಾನ ರಸ್ತೆ ಸಂಪರ್ಕ ಕಲ್ಪಿಸುವ ಕಿಲ್ಪಾಡಿ ಗ್ರಾಮದ ತಿರುಮಲ ಗುತ್ತು ಬಳಿಯ ಶಕೀಲಾ ಪೂಜಾರಿ ಎಂಬವರ ಮನೆಯಿಂದ ಹಾಡು ಹಗಲೇ ಲಕ್ಷಾಂತರ ರೂ ಮೌಲ್ಯದ ನಗ-ನಗದು ಕಳ್ಳತನವಾಗಿರುವ ಬಗ್ಗೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಕೀಲಾ ರವರು ಪತಿ ಹಾಗೂ ಮನೆಯ ಮೇಲ್ಗಡೆ ಬಾಡಿಗೆಗೆ ವಾಸವಾಗಿದ್ದ ಯುವತಿಯೊಬ್ಬರು ಹೊರಗಡೆ ಹೋದ ಸಂದರ್ಭದಲ್ಲಿ ಕಳ್ಳರು ಶಕೀಲಾ ರವರ ಮನೆಯ ಎದುರು ಭಾಗದ ಕಬ್ಬಿಣದ ಬಾಗಿಲಿನ ಒಳಭಾಗದ ಚಿಲಕವನ್ನು ಭಾರವಾದ ಸಾಧನದಿಂದ ತುಂಡರಿಸಿ ಒಳಗಡೆ ಹೋಗಿದ್ದಾರೆ ಬಳಿಕ ತೆರೆದ ಕಪಾಟನ್ನು ಜಾಲಾಡಿ, ಬಟ್ಟೆಯೊಳಗೆ ಅಡಗಿಸಿಟ್ಟಿದ್ದ ಕಪಾಟಿನ ಬೀಗದ ಕೈ ಮೂಲಕ ಕಪಾಟಿನ ಒಳಗಡೆಯ ಡ್ರಾವರ್ ಜಾಲಾಡಿ ಸುಮಾರು 40 ,56 ,000 ರೂ ಮೌಲ್ಯದ
321 ಗ್ರಾಂ(39 ಪವನ್ ಚಿನ್ನಾಭರಣ), ಸುಮಾರು 10,000ರೂ,2000ರೂ ನಾಣ್ಯಗಳು ಸೇರಿ ಲಕ್ಷಾಂತರ ರೂ ಮೌಲ್ಯದ ನಗನಗದು ಹಾಗೂ ಕಪಾಟಿನಲ್ಲಿದ್ದ ಶಕಿಲಾರವರ ಮಗಳ ಚೂಡಿದಾರ ಸಹಿತ ಬಟ್ಟೆ ಬರೆಗಳನ್ನು ಕಳ್ಳತನ ಮಾಡಿದ್ದಾರೆ.

ಕಳ್ಳರು ಕಳ್ಳತನ ಮಾಡಿ ವಾಪಸ್ ಹೋಗುವಾಗ ಒಂದು ಕರಿಮಣಿ ಸರವನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾರೆ ಹಾಗೂ ಮನೆಯ ಎದುರಿನ ಬಾಗಿಲನ್ನು ಒಳಗಿನ ಬದಿಯಿಂದ ಲಾಕ್ ಮಾಡಿದ್ದಾರೆ .
ಗ್ರಾಮೀಣ ಪ್ರದೇಶದಲ್ಲಿ ಹಾಡು ಹಗಲೇ ಲಕ್ಷಾಂತರ ರೂ ಮೌಲ್ಯದ ನಗ ನಗದು ಕಳ್ಳತನ ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ . ಸ್ಥಳಕ್ಕೆ ಶ್ವಾನದಳ, ಬೆರಳಚ್ಚುತಜ್ಞರು , ಮುಲ್ಕಿ ಪೊಲೀಸ್ ಇನ್ಸ್ಪೆಕ್ಟರ್ ಶ್ರೀಕಾಂತ್, ಸಾಮಾಜಿಕ ಕಾರ್ಯಕರ್ತರಾದ ಭೀಮಾಶಂಕರ್, ಕಾರ್ನಾಡ್ ಆಟೋ ಚಾಲಕರ ಸಂಘದ ಅಧ್ಯಕ್ಷ ಕಿರಣ್ ಶಿಮಂತೂರು ಭೇಟಿ ನೀಡಿದ್ದಾರೆ. ಮನೆ ಕಳ್ಳತನವಾದ ಹಿಂದಿನ ದಿನ ಕೆಲ ಅನುಮಾನ ವ್ಯಕ್ತಿಗಳು ರಾತ್ರಿ ಹೊತ್ತು ಮನೆಯ ಸುತ್ತಮುತ್ತ ಓಡಾಡುತ್ತಿದ್ದರು ಎಂದು ಶಕೀಲಾ ತಿಳಿಸಿದ್ದಾರೆ
ಶಕೀಲಾ ರವರ ಮನೆಯ ಪಕ್ಕ ಯಾವುದೇ ಮನೆ ಇಲ್ಲದಿರುವುದು ಹಾಗೂ ದಾರಿದೀಪದ ಅವ್ಯವಸ್ಥೆ ಕಳ್ಳರಿಗೆ ವರದಾನವಾಗಿ ಪರಿಣಮಿಸಿದೆ.
ಮುಲ್ಕಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
