ಕನಕದಾಸರ ಸಾಹಿತ್ಯ ಕೊಂಕಣಿಯಲ್ಲಿ: ವಿಶ್ವ ಕೊಂಕಣಿ ಕೇಂದ್ರದಲ್ಲಿ ವಿಚಾರಸಂಕಿರಣ

0
3

ಮಂಗಳೂರು : ಕೊಂಕಣಿ ಭಾಷೆ ಮತ್ತು ಸಂಸ್ಕೃತಿ ಪ್ರತಿಷ್ಠಾನದ ವತಿಯಿಂದ ಶಕ್ತಿನಗರದ ವಿಶ್ವ ಕೊಂಕಣಿ ಕೇಂದ್ರದಲ್ಲಿ ‘ಕನಕದಾಸರು ಕೊಂಕಣಿಯಲ್ಲಿ, ಕನಕದಾಸರ ಸಾಹಿತ್ಯ ಕೊಂಕಣಿಯಲ್ಲಿ’ ಎಂಬ ವಿಷಯದ ಕುರಿತು ಎರಡು ದಿನಗಳ ವಿಚಾರಸಂಕಿರಣ ಹಾಗೂ ಗೀತಗಾಯನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಅ.3ರಂದು ನಡೆದ ಉದ್ಘಾಟನಾ ಸಮಾರಂಭದಲ್ಲಿ ಕನ್ನಡದ ಪ್ರಸಿದ್ಧ ಅನುವಾದಕರೂ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಮಾಜಿ ಅಧ್ಯಕ್ಷರೂ ಆದ ಡಾ. ಪ್ರಧಾನ ಗುರುದತ್ತ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.

ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಸಿ.ಎ. ನಂದಗೋಪಾಲ ಶೆಣೈ ಸ್ವಾಗತಿಸಿ, ಕೊಂಕಣಿ ಭಾಷೆಯಲ್ಲಿ ಪ್ರಕಟವಾಗಿರುವ ಕನಕದಾಸರ ಸಾಹಿತ್ಯವನ್ನು ಕೊಂಕಣಿ ಭಾಷಿಕರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು. ಬೆಂಗಳೂರು ಸಂತ ಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷ ಕಾ.ತ. ಚಿಕ್ಕಣ್ಣ ಅವರ ಶುಭ ಸಂದೇಶವನ್ನು ಸಭೆಯಲ್ಲಿ ವಾಚಿಸಲಾಯಿತು.

ಮಂಗಳೂರು ವಿಶ್ವವಿದ್ಯಾಲಯದ ಪ್ರಾಂಶುಪಾಲ ಡಾ. ಜಯವಂತ ನಾಯಕ್ ಅವರು ಕನಕದಾಸರ ಕಾವ್ಯಗಳ ಮೂರು ಸಂಪುಟಗಳನ್ನು ಲೋಕಾರ್ಪಣೆ ಮಾಡಿದರು. ಸಂತ ಅಲೋಶಿಯಸ್ ಕಾಲೇಜಿನ ಕೊಂಕಣಿ ಸಂಸ್ಥೆಯ ಫಾದರ್ ಪ್ರಶಾಂತ ಮಾಡ್ತಾ ಉಪಸ್ಥಿತರಿದ್ದು ಶುಭ ಹಾರೈಸಿದರು.

ಕಾರ್ಯಕ್ರಮದ ಅಂಗವಾಗಿ ಮಂಗಳೂರಿನ ಸಾಧನಾ ಬಳಗ ಮತ್ತು ನಾಟ್ಯಧಾರಾ ಮಹಿಳಾ ತಂಡದಿಂದ ‘ಕನಕದಾಸರ ಕೀರ್ತನೆಗಳ ಕುಣಿತ ಭಜನೆ’ ಹಾಗೂ ಉಪೇಂದ್ರ ಮಲ್ಯ ತಂಡದಿಂದ ‘ಶ್ರೀನಿವಾಸ ಕಲ್ಯಾಣ’ ಗೀತನಾಟಕ ಪ್ರದರ್ಶನಗೊಂಡು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.

ಸಾಹಿತ್ಯ ವಿಚಾರಸಂಕಿರಣ

ಕನಕದಾಸರ ಕೀರ್ತನೆಗಳ ವಿಚಾರಸಂಕಿರಣದಲ್ಲಿ ಅವರ ಸಾಹಿತ್ಯವನ್ನು ಕೊಂಕಣಿಗೆ ಅನುವಾದಿಸಿರುವ ತಜ್ಞರು ಸಂಶೋಧನಾತ್ಮಕ ಪ್ರಬಂಧಗಳನ್ನು ಮಂಡಿಸಿದರು. ಡಾ. ಗೀತಾ ಶೆಣೈ, ಡಾ. ಬಿ. ದೇವದಾಸ ಪೈ, ಡಾ. ಸಂಧ್ಯಾ ನಾಯಕ್, ಡಾ. ಶೈಲಜಾ ಮಂಗಳೂರುಕಾರ, ಶಕುಂತಳಾ ಆರ್. ಕಿಣಿ, ಜಯಶ್ರೀ ಶೆಣೈ, ಮಧುಕರ ಮಲ್ಯ, ಡಾ. ಅರವಿಂದ ಶ್ಯಾನಭಾಗ್ ಹಾಗೂ ಸ್ಮಿತಾ ಶೆಣೈ ಸೇರಿದಂತೆ ಹಲವು ಸಾಹಿತ್ಯ ತಜ್ಞರು ಭಾಗವಹಿಸಿ ವಿಚಾರ ಮಂಡಿಸಿದರು.

ಕೊಂಕಣಿಯಲ್ಲಿ ಕನಕದಾಸರ ಕೀರ್ತನೆಗಳ ಗೀತಗಾಯನ

ಗೀತಗಾಯನ ಕಾರ್ಯಕ್ರಮದಲ್ಲಿ ಕನಕದಾಸರ ಕೊಂಕಣಿ ಅನುವಾದಿತ ಕೀರ್ತನೆಗಳನ್ನು ಖ್ಯಾತ ಸಂಗೀತ ತಜ್ಞರಾದ ಪುತ್ತೂರು ನರಸಿಂಹ ನಾಯಕ್, ವಿದ್ವಾನ್ ಯೋಗೀಶ ಕಿಣಿ, ಚೈತ್ರಾ ಪೈ, ರವೀಂದ್ರ ಪ್ರಭು, ಮುರಳೀಧರ ಕಾಮತ್, ವರ್ಷಾ ಪ್ರಭು ಹಾಗೂ ಪುತ್ತೂರು ಪಾಂಡುರಂಗ ನಾಯಕ ಅವರು ಸುಶ್ರಾವ್ಯವಾಗಿ ಹಾಡಿ ರಂಜಿಸಿದರು. ಗಾಯಕರ ಹಾಗೂ ಅನುವಾದಕರನ್ನು ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ಅಖಿಲ ಭಾರತ ಕೊಂಕಣಿ ಪರಿಷತ್‌ನ 34ನೇ ಸಮ್ಮೇಳನದ ಅಧ್ಯಕ್ಷರಾಗಿ ಸಿ.ಎ. ನಂದಗೋಪಾಲ ಶೆಣೈ ಆಯ್ಕೆಯಾಗಿರುವುದನ್ನು ಟ್ರಸ್ಟಿ ಮೆಲ್ವಿನ್ ರೊಡ್ರಿಗಸ್ ಸಭೆಗೆ ತಿಳಿಸಿದರು. ವಿಶ್ವ ಕೊಂಕಣಿ ಕೇಂದ್ರದ ವಿಶ್ವಸ್ಥ ಮಂಡಳಿಯ ವತಿಯಿಂದ ನಂದಗೋಪಾಲ ಶೆಣೈ ಅವರನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ವಿಲಿಯಂ ಡಿಸೋಜಾ, ರಮೇಶ್ ಡಿ. ನಾಯಕ್, ಟ್ರಸ್ಟಿ ಗಿಲ್ಬರ್ಟ್ ಡಿಸೋಜಾ, ಕೋಶಾಧಿಕಾರಿ ಬಿ.ಆರ್. ಭಟ್, ಆಡಳಿತಾಧಿಕಾರಿ ಡಾ. ಬಿ. ದೇವದಾಸ ಪೈ, ಪ್ರಧಾನ ಸಂಪಾದಕಿ ಡಾ. ಗೀತಾ ಶೆಣೈ, ಕಾರ್ಯಕ್ರಮದ ಪ್ರಾಯೋಜಕಿ ಉಷಾ ನಂದಗೋಪಾಲ ಶೆಣೈ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಬಾಲಚಂದ್ರ ಪ್ರಭು ಅವರು ಕನಕದಾಸರ ಕೀರ್ತನೆಗೆ ಕೊಂಕಣಿ ಭಾಷೆಯಲ್ಲಿ ರಾಗ ಸಂಯೋಜಿಸಿ ಪ್ರಾರ್ಥನಾ ಗೀತೆ ಹಾಡಿದರು. ಸುಚಿತ್ರಾ ಶೆಣೈ, ಸ್ಮಿತಾ ಶೆಣೈ ಹಾಗೂ ಡಾ. ವಿಜಯಲಕ್ಷ್ಮೀ ನಾಯಕ ಕಾರ್ಯಕ್ರಮ ನಿರ್ವಹಿಸಿದರು. ಎರಡು ದಿನಗಳ ಕಾರ್ಯಕ್ರಮದಲ್ಲಿ ಗಣ್ಯರು ಹಾಗೂ ಸಾಹಿತ್ಯಾಸಕ್ತರು ಭಾಗವಹಿಸಿ ಸಂಭ್ರಮಿಸಿದರು.