ತುಳುವಿಗೆ 8ನೇ ಪರಿಚ್ಛೇದದ ಮಾನ್ಯತೆಗೆ ಆಗ್ರಹ; ಕೇರಳದಲ್ಲೂ ಅಧಿಕೃತ ಸ್ಥಾನಮಾನಕ್ಕೆ ಒತ್ತಾಯ

0
19

ರಾಜ್ಯವ್ಯಾಪಿ ಹೆಚ್ಚುವರಿ ಅಧಿಕೃತ ಭಾಷೆಯ ಸ್ಥಾನಮಾನ ನೀಡಲು ಸರ್ಕಾರಕ್ಕೆ ಒತ್ತಾಯ

ಮಂಗಳೂರು: ತುಳು ಭಾಷೆಯ ಅಭಿವೃದ್ಧಿ ಮತ್ತು ಆಡಳಿತಾತ್ಮಕ ಬಳಕೆಗೆ ಸರ್ಕಾರಗಳು ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು ಎಂದು ಆಗ್ರಹಿಸಿ ಜೈ ತುಳುನಾಡ್ ಕುಡ್ಲ ಘಟಕವು ಹಲವು ಬೇಡಿಕೆಗಳನ್ನು ಮುಂದಿಟ್ಟಿದೆ.

ಗುರುವಾರ ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಘಟಕದ ಸ್ಥಾಪಕ ಸದಸ್ಯ ಕಿರಣ್ ತುಲುವೆ, ತುಳುವನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವ ಪ್ರಕ್ರಿಯೆಗೆ ರಾಜ್ಯ ಸರ್ಕಾರ ಕೇಂದ್ರದ ಮೇಲೆ ಒತ್ತಡ ಹೇರಬೇಕು ಎಂದು ಒತ್ತಾಯಿಸಿದರು.

ಕರ್ನಾಟಕದಲ್ಲಿ ತುಳುವಿಗೆ ನಿರ್ದಿಷ್ಟ ಜಿಲ್ಲೆಗಳ ವ್ಯಾಪ್ತಿಗೆ ಸೀಮಿತವಾಗದೆ, ರಾಜ್ಯವ್ಯಾಪಿ ಹೆಚ್ಚುವರಿ ಅಧಿಕೃತ ಭಾಷೆಯ ಸ್ಥಾನಮಾನ ಕಲ್ಪಿಸಬೇಕು. ಇದೇ ರೀತಿಯಲ್ಲಿ ಕೇರಳದಲ್ಲೂ ತುಳು ಭಾಷೆಗೆ ಅಧಿಕೃತ ಸ್ಥಾನಮಾನ ನೀಡಲು ಅಲ್ಲಿನ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದರು.

ತುಳು ಭಾಷೆಯ ಆಡಳಿತಾತ್ಮಕ ಬಳಕೆಗೆ ಅಗತ್ಯವಿರುವ ವ್ಯವಸ್ಥೆಗಳನ್ನು ರೂಪಿಸುವುದರ ಜೊತೆಗೆ, ಡಿಜಿಟಲ್ ಕ್ಷೇತ್ರದಲ್ಲಿಯೂ ತುಳುವಿನ ಅಭಿವೃದ್ಧಿಗೆ ಮೂಲಸೌಕರ್ಯ ಕಲ್ಪಿಸಬೇಕು. ಈ ಉದ್ದೇಶಕ್ಕಾಗಿ ಕನಿಷ್ಠ ₹5 ಕೋಟಿ ಅನುದಾನ ಮೀಸಲಿಡಬೇಕು ಎಂದು ಆಗ್ರಹಿಸಿದರು.

ತುಳು ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ, ಉಡುಪಿ ಜಿಲ್ಲೆ ಹಾಗೂ ಪುತ್ತೂರಿನಲ್ಲಿ ತುಳು ಭವನ ನಿರ್ಮಾಣ, ಹಂತ ಹಂತವಾಗಿ ತುಳು ಲಿಪಿಯ ಬಳಕೆಗೆ ಉತ್ತೇಜನ ಹಾಗೂ ತುಳು ಭಾಷೆಯ ಸಮಗ್ರ ಅಭಿವೃದ್ಧಿಗೆ ಸ್ಪಷ್ಟ ಕಾರ್ಯಯೋಜನೆ ರೂಪಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.

ದಕ್ಷಿಣ ಕನ್ನಡ ಜಿಲ್ಲೆಗೆ ‘ಮಂಗಳೂರು ಜಿಲ್ಲೆ’ ಎಂದು ಮರುನಾಮಕರಣ ಮಾಡುವ ಬೇಡಿಕೆಯನ್ನೂ ಅವರು ಪ್ರಸ್ತಾಪಿಸಿದರು. ಕೇರಳದಲ್ಲಿ ತುಳುವಿಗೆ ಅಧಿಕೃತ ಮಾನ್ಯತೆ ದೊರಕಿಸುವ ಉದ್ದೇಶದಿಂದ #TuluOfficialInKerala ಸಾಮಾಜಿಕ ಜಾಲತಾಣ ಅಭಿಯಾನ ಆರಂಭಿಸಲಾಗಿದೆ ಎಂದರು.

ಮಾಜಿ ಅಧ್ಯಕ್ಷ ಸುದರ್ಶನ್ ಸುರತ್ಕಲ್ ಮಾತನಾಡಿ, ತುಳು ಭಾಷೆಯ ಹಕ್ಕು ಹಾಗೂ ಅಭಿವೃದ್ಧಿಗೆ ಸಂಬಂಧಿಸಿದ ಬೇಡಿಕೆಗಳಿಗಾಗಿ ಸಂಘಟನೆ ಪ್ರಜಾಸತ್ತಾತ್ಮಕ, ಶಾಂತಿಯುತ ಮತ್ತು ಪಕ್ಷಾತೀತ ರೀತಿಯಲ್ಲಿ ತನ್ನ ಪ್ರಯತ್ನಗಳನ್ನು ಮುಂದುವರಿಸಲಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷೆ ರಾಜಶ್ರೀ ಚಂದ್ರಶೇಖರ್, ಉಪಾಧ್ಯಕ್ಷ ಚೇತನ್ ಅಂಚನ್ ಮಂಜಲ್‌ಕಟ್ಟೆ, ಮಾಜಿ ಅಧ್ಯಕ್ಷ ಉದಯ್ ಪೂಂಜ ತಾರಿಪಾಡಿಗುತ್ತು ಹಾಗೂ ಸಂಘಟನಾ ಕಾರ್ಯದರ್ಶಿ ನಿರಂಜನ್ ಕರ್ಕೇರ ಪೊರ್ಕೋಡಿ ಉಪಸ್ಥಿತರಿದ್ದರು.