ಎಂಡಿಎಂಎ ಜಾಲ ಪತ್ತೆ : ಮೂವರು ಆರೋಪಿಗಳ ಬಂಧನ

0
76

ಮಂಗಳೂರು : ನಿಷೇಧಿತ ಎಂಡಿಎಂಎ (MDMA) ಮಾದಕ ವಸ್ತುವನ್ನು ಮಂಗಳೂರು ನಗರಕ್ಕೆ ಸಾಗಿಸಿ, ಮಂಗಳೂರು ಹಾಗೂ ಕೇರಳದ ವಿವಿಧೆಡೆ ಮಾರಾಟ ಮಾಡುತ್ತಿದ್ದ ಜಾಲವನ್ನು ಮಂಗಳೂರು ನಗರ ಪೊಲೀಸರು ಪತ್ತೆಹಚ್ಚಿದ್ದಾರೆ. ಕಾರ್ಯಾಚರಣೆಯಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಮಾದಕ ವಸ್ತು ಸೇರಿದಂತೆ ವಾಹನ ಮತ್ತು ಇತರ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರನ್ನು ಕಾಸರಗೋಡು ಜಿಲ್ಲೆಯ ಮಂಜೇಶ್ವರ ಸಮೀಪದ ಬೈದಲ ನಿವಾಸಿ ಅಬ್ದುಲ್ ಹಾಫಿಲ್ ಹಾಶಿಲ್ (25), ಮಂಗಳೂರಿನ ಕೊಣಾಜೆ ನಿವಾಸಿ ಬೆಂಗ್ರೆ ಜಿಯಾವುಲ್ ಹಕ್ (30) ಹಾಗೂ ಮಂಗಳೂರಿನ ಪಾಂಡೇಶ್ವರದ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದ ಅಲ್ತಾಫ್ (28) ಎಂದು ಗುರುತಿಸಲಾಗಿದೆ.

ಉಳ್ಳಾಲ ತಾಲೂಕು ಕುಂಪಲದ ದೀಪಕ್ ಅವರ ನಿವಾಸದ ಬಳಿ ಅಕ್ಟೋಬರ್ 8ರಂದು ರಾತ್ರಿ 10 ಗಂಟೆಗೆ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ, ಮಾದಕ ವಸ್ತು ಮಾರಾಟದಲ್ಲಿ ತೊಡಗಿದ್ದ ಆರೋಪದ ಮೇಲೆ ಮೂವರನ್ನು ಬಂಧಿಸಿದ್ದಾರೆ.

ಏನೇನು ವಶಪಡಿಸಿಕೊಳ್ಳಲಾಗಿದೆ?

ಬಂಧಿತರಿಂದ 1 ಕೆಜಿ 796.96 ಗ್ರಾಂ ಎಂಡಿಎಂಎ ಮಾದಕ ವಸ್ತು, ಮೂರು ಮೊಬೈಲ್ ಫೋನ್‌ಗಳು ಹಾಗೂ ಮಾದಕ ವಸ್ತು ಸಾಗಾಟಕ್ಕೆ ಬಳಸಿದ್ದ ಮಾರುತಿ ಸುಜುಕಿ ಸ್ವಿಫ್ಟ್ ಕಾರು ಸೇರಿದಂತೆ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಜಾಲದ ಮೂಲದ ಬಗ್ಗೆ ತನಿಖೆ

ಮಾದಕ ವಸ್ತುಗಳನ್ನು ಎಲ್ಲಿಂದ ತರಲಾಗುತ್ತಿತ್ತು, ಮಂಗಳೂರು ಹಾಗೂ ಕೇರಳದ ಯಾವ ಪ್ರದೇಶಗಳಿಗೆ ಪೂರೈಕೆ ಮಾಡಲಾಗುತ್ತಿತ್ತು ಮತ್ತು ಈ ಜಾಲದ ಹಿಂದೆ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಮಾದಕ ವಸ್ತು ಸಾಗಾಟ ಮತ್ತು ಮಾರಾಟದ ಜಾಲವನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.