ದಸರಾ 2026ರ ಸಂದರ್ಭದಲ್ಲಿ ಮಂಗಳಾದೇವಿ ಬಸ್ ಟರ್ಮಿನಲ್ ಬಳಕೆಗೆ ತರಲು ಶ್ರೀ ಅಂಬಾಮಹೇಶ್ವರಿ ಸೇವಾ ಟ್ರಸ್ಟ್ ಮನವಿ

0
9

ಮಂಗಳೂರಿನಲ್ಲಿ ನವರಾತ್ರಿ ಹಬ್ಬ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ, ಮಂಗಳಾದೇವಿ ದೇವಸ್ಥಾನ ರಸ್ತೆಯಲ್ಲಿನ ಸಂಚಾರ ಸಮಸ್ಯೆಯನ್ನು ಕಡಿಮೆ ಮಾಡಲು ಜೆಪ್ಪುವಿನ ನೂತನ ಮಂಗಳಾದೇವಿ ಬಸ್ ಟರ್ಮಿನಲ್ ಅನ್ನು ತಕ್ಷಣ ಬಳಕೆಗೆ ತರಬೇಕೆಂದು ಶ್ರೀ ಅಂಬಾಮಹೇಶ್ವರಿ ಸೇವಾ ಟ್ರಸ್ಟ್ (ರಿ.) ಮನವಿ ಮಾಡುತ್ತಿದ್ದೇವೆ. ಈ ಕುರಿತು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ಪತ್ರ ಸಲ್ಲಿಸಲಾಗಿದ್ದು, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರು, ಮಂಗಳೂರು ನಗರ ಪೊಲೀಸ್ ಆಯುಕ್ತರು ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೂ (RTO) ಪ್ರತಿಗಳನ್ನು ಕಳುಹಿಸಲಾಗಿದೆ.

ಮಂಗಳಾದೇವಿ ದೇವಸ್ಥಾನಕ್ಕೆ ದಸರಾ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಪ್ರಸ್ತುತ ದೇವಸ್ಥಾನದ ಸಮೀಪದಲ್ಲೇ ಬಸ್‌ಗಳು ಯು-ಟರ್ನ್ ತೆಗೆದುಕೊಳ್ಳುವುದರಿಂದ ಸಾರ್ವಜನಿಕರು ಹಾಗೂ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಹಬ್ಬದ ಸಂದರ್ಭದಲ್ಲಿ ವಾಹನ ಸಂಚಾರ ಹೆಚ್ಚಾಗುವುದರಿಂದ ಸಂಚಾರ ದಟ್ಟಣೆ ಮತ್ತು ಅಪಘಾತದ ಅಪಾಯವೂ ಹೆಚ್ಚಾಗುವ ಸಾಧ್ಯತೆಯಿದೆ.

ಜೆಪ್ಪುವಿನಲ್ಲಿ ನಿರ್ಮಿಸಲಾದ ಮಂಗಳಾದೇವಿ ಬಸ್ ಟರ್ಮಿನಲ್ ಅನ್ನು ಫೆಬ್ರವರಿ 2025ರಲ್ಲಿ ಉದ್ಘಾಟಿಸಲಾಗಿತ್ತು. ಆದರೆ, ಉದ್ಘಾಟನೆಯಾಗಿ ಸಾಕಷ್ಟು ಸಮಯ ಕಳೆದಿದ್ದರೂ ಈ ಟರ್ಮಿನಲ್ ಇನ್ನೂ ಬಳಕೆಗೆ ಬಂದಿಲ್ಲ. ಆದ್ದರಿಂದ, ಈ ವರ್ಷದ ದಸರಾ ಸಂದರ್ಭದಲ್ಲಿ ಬಸ್‌ಗಳನ್ನು ಈ ಟರ್ಮಿನಲ್‌ಗೆ ಸ್ಥಳಾಂತರಿಸಿ, ಮುಂದಿನ ದಿನಗಳಲ್ಲಿಯೂ ಅಲ್ಲಿಯೇ ಬಸ್‌ಗಳ ನಿಲುಗಡೆಗೆ ವ್ಯವಸ್ಥೆ ಮಾಡಬೇಕು ಎಂದು ಕೋರುತ್ತಿದ್ದೇವೆ.

ಇದರಿಂದ ಮಂಗಳಾದೇವಿ ದೇವಸ್ಥಾನದ ಸುತ್ತಮುತ್ತಲಿನ ಸಂಚಾರದ ಒತ್ತಡ ಕಡಿಮೆಯಾಗುವುದರ ಜೊತೆಗೆ, ದೇವಸ್ಥಾನಕ್ಕೆ ಆಗಮಿಸುವ ಭಕ್ತರು, ಪ್ರಯಾಣಿಕರು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಸಂಬಂಧಪಟ್ಟ ಇಲಾಖೆಗಳು ಪರಸ್ಪರ ಸಮನ್ವಯದೊಂದಿಗೆ ಈ ಸಮಸ್ಯೆಯನ್ನು ಆದ್ಯತೆಯ ಮೇರೆಗೆ ಪರಿಗಣಿಸಿ, ದಸರಾ ಹಬ್ಬ ಆರಂಭವಾಗುವ ಮುನ್ನವೇ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಶ್ರೀ ಅಂಬಾಮಹೇಶ್ವರಿ ಸೇವಾ ಟ್ರಸ್ಟ್ (ರಿ.) ವಿನಂತಿಸಿದೆ.