ಎಸ್ ಐ ಆರ್ ನೆಪದಲ್ಲಿ ಮಹಿಳೆಯ ಮನೆಗೆ ನುಗ್ಗಿ ಚಿನ್ನದ ಸರ ಸುಲಿಗೆ ಮಾಡಿದ್ದ ಇಬ್ಬರು ಆರೋಪಿಗಳ ಬಂಧನ

0
11

ಉಡುಪಿ : ನಗರದ ನಿಟ್ಟೂರು ಪ್ರದೇಶದಲ್ಲಿ ಒಂಟಿ ಮಹಿಳೆಯೊಬ್ಬರ ಮನೆಗೆ ನುಗ್ಗಿ, ಎಸ್ ಐ ಆರ್ ಮಾಹಿತಿ ಕೇಳುವ ನಾಟಕವಾಡಿ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಬಲವಂತವಾಗಿ ಎಳೆದುಕೊಂಡು ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ ಕೇವಲ ಮೂರೇ ದಿನಗಳಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಗಳನ್ನು ಉಡುಪಿ ನಿಟ್ಟೂರಿನ ವಾದಿರಾಜ್ ಗಾಣಿಗ (44) ಮತ್ತು ಕಾಪು ತಾಲೂಕು ಪಡು ಗ್ರಾಮದ ಸಚಿನ್ (30) ಎಂದು ಗುರುತಿಸಲಾಗಿದೆ. ವಾದಿರಾಜ್ ಗಾಣಿಗ ಮಹಿಳೆಯ ನೆರೆಮನೆಯವ. ಅ. 7ರಂದು ನಿಟ್ಟೂರಿನಲ್ಲಿ 74 ವರ್ಷದ ವೃದ್ಧೆ ಶಾಂತ ಕಾರಂತ್ ಅವರು ಒಂಟಿಯಾಗಿರುವಾಗ ಇಬ್ಬರು ಅಪರಿಚಿತರು ಬಂದಿದ್ದರು. ಜನಗಣತಿ ಕುರಿತು ಮಾಹಿತಿ ಕೇಳುವಂತೆ ನಟಿಸಿ ಮನೆಯೊಳಗೆ ಪ್ರವೇಶಿಸಿದ್ದರು. ಬಳಿಕ ಮಹಿಳೆ ಕುತ್ತಿಗೆಯಲ್ಲಿದ್ದ ಸುಮಾರು 30 ಗ್ರಾಂ (ಅಂದಾಜು 4 ಲಕ್ಷ ರೂ. ಮೌಲ್ಯದ) ಚಿನ್ನದ ಸರವನ್ನು ಬಲವಂತವಾಗಿ ಕಿತ್ತುಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಾತ್ಮಿದಾರರ ಖಚಿತ ಮಾಹಿತಿಯ ಮೇರೆಗೆ ಮಣಿಪಾಲದ ಮಣ್ಣಪಳ್ಳ ಎಂಬಲ್ಲಿ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ದಸ್ತಗಿರಿ ಮಾಡಿದ್ದಾರೆ.

ವಿಚಾರಣೆ ವೇಳೆ ಆರೋಪಿಗಳು ಸುಲಿಗೆ ಮಾಡಿದ್ದ ಚಿನ್ನದ ಸರವನ್ನು ಮಣಿಪಾಲದ ಇಂಡಸ್ಟ್ರಿಯಲ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಅಡವಿಟ್ಟಿರುವುದಾಗಿ ಬಾಯಬಿಟ್ಟಿದ್ದಾರೆ. ಆರೋಪಿಗಳಿಂದ ಒಟ್ಟು ರೂ. 5,53,000- ಮೌಲ್ಯದ ಈ ಕೆಳಗಿನ ಸ್ವತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.

ಸಾಲ ತೀರಿಸಲು ಕೃತ್ಯ

ಆರೋಪಿ ವಾದಿರಾಜ್ ಗಾಣಿಗನು ಸಾಕಷ್ಟು ಸಾಲ ಪಡೆದಿದ್ದನು. 2ನೇ ಆರೋಪಿ ಸಚಿನ್ ಕೂಡ ಸಾಲದ ಸುಳಿಯಲ್ಲಿದ್ದನು. ಸಾಲ ತೀರಿಸುವ ಹಾಗೂ ಐಷಾರಾಮಿ ಜೀವನ ನಡೆಸುವ ದುರಾಸೆಯಿಂದ ಈ ಕೃತ್ಯ ಎಸಗಿರುವುದಾಗಿ ವಿಚಾರಣೆಯಿಂದ ತಿಳಿದುಬಂದಿದೆ. ಅಕ್ಟೋಬರ್ 10ರಂದು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.