ವಾಹನ ನಿಲ್ದಾಣ ಮೇಲ್ಛಾವಣಿ ಕಾಮಗಾರಿ ಶೀಘ್ರ ಲೋಕಾರ್ಪಣೆ :- ಶಾಸಕ ಡಾ. ಮಂತರ್ ಗೌಡ

0
44

ಕುಶಾಲನಗರ : ಶುಂಠಿಕೊಪ್ಪ ವಾಹನ ಚಾಲಕರ ಸಂಘದ ವಾಹನ ನಿಲ್ದಾಣಕ್ಕೆ ಮೇಲ್ಚಾವಣಿ ನಿರ್ಮಾಣ ಪ್ರಗತಿಯಲ್ಲಿದ್ದು, ಕೆಲವು ತಾಂತ್ರಿಕ ಕಾರಣಗಳನ್ನು ಸರಿಪಡಿಸಿಕೊಂಡು ಶೀಘ್ರದಲ್ಲೇ ಲೋಕಾರ್ಪಣೆ ಮಾಡಲಾಗುವುದು ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಹೇಳಿದ್ದಾರೆ.

ವಾಹನ ಚಾಲಕರ ಸಂಘದ 56ನೇ ವಾರ್ಷಿಕೋತ್ಸವದ ಆಯುಧ ಪೂಜಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈಗಾಗಲೇ ಮೇಲ್ಚಾವಣಿ ಕಾಮಗಾರಿ ರೂ.40 ಲಕ್ಷ ವೆಚ್ಚದಲ್ಲಿ ಆರಂಭಿಕ ಹಂತದಲ್ಲಿದ್ದು, ಹೆಚ್ಚು ಅನುದಾನ ಬೇಕಾಗುವ ನಿರೀಕ್ಷೆ ಇದೆ. ಈ ಅನುದಾನವನ್ನು ತಾವು ಭರಿಸಲಿದ್ದು, ಕಾಮಗಾರಿಯನ್ನು ಅತೀ ಶೀಘ್ರವಾಗಿ ಮುಕ್ತಾಯಗೊಳಿಸಲು ಕ್ರಮ ವಹಿಸಲಾಗುವುದು ಎಂದರು. ವಾಹನ ಚಾಲಕರ ಸಂಘಕ್ಕೆ ಅದ್ಭುತವಾದ ಇತಿಹಾಸವಿದ್ದು, ಬದಲಾದ ಕಾಲಘಟ್ಟದಲ್ಲಿ ಚಾಲಕರು ಸುರಕ್ಷತೆಯಿಂದ ವಾಹನ ಚಲಿಸುವುದು ಜೊತೆಗೆ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಸವಾಲಿನ ಕೆಲಸವಾಗಿದ್ದು, ಇದನ್ನು ಚಾಲಕರು ಮನಸ್ಸಿನಲ್ಲಿಟ್ಟುಕೊಂಡು ಕರ್ತವ್ಯ ನಿರ್ವಹಿಸಬೇಕು ಎಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಸುಂಟಿಕೊಪ್ಪದವರೇ ಆದ ಆಧ್ಯಾತ್ಮಿಕ ಗುರು ರೋಶಿನಿ ರಾಮಪುರಂ ಅವರ ‘ದಿ ಅಮರನಾಥ್ ಕೋಡ್’ ಗ್ರಂಥವನ್ನು ಲೋಕಾರ್ಪಣೆಗೊಳಿಸಿದರು. ಬಹುಮುಖ ಪ್ರತಿಭೆಯ ರೋಶಿನಿ ರಾಮಪುರಂ ಅವರನ್ನು ಶಾಸಕರು ಸನ್ಮಾನಿಸಿ ಗೌರವಿಸಿದರು.

ಮುಖ್ಯ ಅತಿಥಿ ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್ ಮಾತನಾಡಿ, ಸುಂಟಿಕೊಪ್ಪ ವಾಹನ ಚಾಲಕರು ಮತ್ತು ಮಾಲೀಕರ ಸಂಘಕ್ಕೆ ಭವ್ಯವಾದ ಹಿರಿಮೆ ಇದೆ. ಸುಂಟಿಕೊಪ್ಪದ ಅಭಿವೃದ್ಧಿ ಹಂತಗಳಲ್ಲಿ ಸಂಘದ ಕೊಡುಗೆ ಅಪಾರವಾಗಿದೆ. ಅನೇಕ ಬೇಡಿಕೆಗಳ ಈಡೇರಿಕೆಗೆ ಈ ವೇದಿಕೆ ಅವಕಾಶ ಕಲ್ಪಿಸಿದೆ. ಆಯುಧ ಪೂಜೆ, ವಿಜಯದಶಮಿಯ ದುಷ್ಟ ಶಿಕ್ಷಣ, ಶಿಷ್ಟ ರಕ್ಷಣಾ ಸಂದೇಶವು ಸಮಾಜಕ್ಕೆ ಮಾದರಿಯಾಗಿದೆ ಎಂದರು.

ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಕೊಡಗು ಜಿಲ್ಲಾಡಳಿತದ ಕಾನೂನು ಸಲಹೆಗಾರ ಎ.ಲೋಕೇಶ್ ಕುಮಾರ್, ಸುಂಟಿಕೊಪ್ಪ ವಾಹನ ಚಾಲಕರ ವೇದಿಕೆಯು ಸ್ಥಳೀಯ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದು, ಮಕ್ಕಳ ಪ್ರತಿಭೆಯು ಈ ವೇದಿಕೆಯ ಮೂಲಕ ಅನಾವರಣಗೊಂಡು ದೇಶ-ವಿದೇಶಗಳಲ್ಲಿ ಖ್ಯಾತಿ ಪಡೆಯುವಂತಾಗಲಿ ಎಂದು ಹಾರೈಸಿದರು.

ಸಮಾರಂಭವನ್ನು ಉದ್ದೇಶಿಸಿ ಜಿ.ಪಂ.ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ, ಮಾಜಿ ಸದಸ್ಯರುಗಳಾದ ಪಿ.ಎಂ.ಲತೀಫ್, ಬಿ.ಬಿ.ಭಾರತೀಶ್, ಗ್ರಾ.ಪಂ.ಮಾಜಿ ಅಧ್ಯಕ್ಷ ಪಿ.ಆರ್.ಸುನಿಲ್ ಕುಮಾರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿ.ಜಿ.ಲೋಕೇಶ್, ಎಡಿಕೇರಿ ಪ್ರಸನ್ನ, ರೋಶಿನಿ ರಾಮಪುರಂ, ಪ್ರಸಾದ್ ಕುಟ್ಟಪ್ಪ, ಪಿ.ಎಲ್.ಹರ್ಷದ್, ಎ.ಎಂ.ಹಕೀಂ, ರಫೀಕ್ ಖಾನ್ ಸೇರಿದಂತೆ ಅತಿಥಿಗಳು ಆಯುಧ ಪೂಜೆ ಮತ್ತು ವಿಜಯದಶಮಿಯ ಕುರಿತು ಮಾತನಾಡಿ ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಪ್ರಸಾದ್ ಕುಟ್ಟಪ್ಪ ಮಾತನಾಡಿ, ರೋಶಿನಿ ರಾಮಪುರಂ ಅವರು ತಮ್ಮ ತಂದೆಯ ಸ್ಮರಣಾರ್ಥ ಮೃತದೇಹಗಳನ್ನು ಸಂರಕ್ಷಿಸಿ ಇಡುವ ಶೀತಲೀಕರಣ ಪೆಟ್ಟಿಗೆಯನ್ನು ವಾಹನ ಚಾಲಕರ ಸಂಘಕ್ಕೆ ಕೊಡುಗೆಯಾಗಿ ನೀಡಿದ್ದಾರೆ ಮತ್ತು ಬಸ್ ನಿಲ್ದಾಣದಲ್ಲಿ ಶುದ್ಧ ನೀರಿನ ಘಟಕವನ್ನು ಪಾ.ಕೃ.ಪ.ಸ.ನಿ. ಅಧ್ಯಕ್ಷ ಜೆರ್ಮಿ ಡಿಸೋಜ ಅವರು ನಿರ್ಮಿಸಿಕೊಡುವುದಾಗಿ ಘೋಷಿಸಿದರು.

ವೇದಿಕೆಯಲ್ಲಿ ಉದ್ಯಮಿ ವಿಲಿಯಂ, ಆಶಾ ಟೋಮಿ, ಪಾ.ಕೃ.ಪ.ಸ.ನಿ. ಅಧ್ಯಕ್ಷ ಜೆರ್ಮಿ ಡಿಸೋಜ, ದಾನಿಗಳಾದ ಜಯಣ್ಣ, ವಾಹನ ಚಾಲಕರ ಸಂಘದ ಅಧ್ಯಕ್ಷ ಕೆ.ವಿ.ಕಿಟ್ಟಣ್ಣ ರೈ, ಆಟೋ ಚಾಲಕರ ಸಂಘದ ಅಧ್ಯಕ್ಷ ಎ.ಎಂ.ಶರೀಫ್ ಮತ್ತಿತರರು ಇದ್ದರು.

ವರದಿ : ಪ್ರಿತುನ್ ಪೂವಣ್ಣ