
ಹೆಬ್ರಿ :ವೈವಿಧ್ಯಮಯ ಸಂಸ್ಕೃತಿಯಲ್ಲಿ ಏಕತೆ ಇದ್ದು, ಪ್ರತಿಯೊಂದು ಸಂಸ್ಕೃತಿಯನ್ನು ಶ್ರೇಷ್ಠವಾಗಿ ನೋಡುವ ಮನೋಭಾವ ನಮ್ಮ ಭಾರತೀಯರದ್ದು . ಹಲವು ಭಾಷೆಗಳಲ್ಲಿ ಹಂಚಿದ್ದ ಭಾರತವನ್ನು ಭಾಷಾವಾರು ಪ್ರತ್ಯೇಕ ರಾಜ್ಯಗಳಾಗಿ ವಿಂಗಡಿಸುವ ಮೂಲಕ ಪ್ರತಿಯೊಂದು ರಾಜ್ಯವು ಪ್ರಾದೇಶಿಕ ಅಸ್ಮಿತೆಯನ್ನು ಹೊಂದಲು ಸಾಧ್ಯವಾಯಿತು.
ಕರ್ನಾಟಕದ ಏಕೀಕರಣ ಚಳುವಳಿಯಲ್ಲಿ ಹಲವಾರು ಮಂದಿ ಹೋರಾಡಿದ್ದಾರೆ. ಮೈಸೂರು, ಕೊಡಗು,ಕಾಸರಗೋಡು, ಬೆಳಗಾವಿ ಮುಂತಾದ ಭಾಗಗಳನ್ನು ಒಂದುಗೂಡಿಸಿದ್ದು ಸಣ್ಣ ಸಾಧನೆಯೇನಲ್ಲ.ಒಟ್ಟಾರೆಯಾಗಿ ಪ್ರತಿ ಭಾಷೆಯನ್ನು ಗೌರವಿಸಿ ಮತ್ತು ಕನ್ನಡವನ್ನು ಹೃದಯದ ಭಾಷೆಯಾಗಿ ಪ್ರೀತಿಸಿ ಎಂದು ಮುದ್ರಾಡಿ ಅಶೋಕ ಕುಮಾರ್ ಶೆಟ್ಟಿ ಹೇಳಿದರು. ಅವರು ಮುದ್ರಾಡಿಯ ವಿದ್ಯಾಸಾಗರ ಎಜ್ಯುಕೇಶನ್ ಟ್ರಸ್ಟ್ (ರಿ.) ಇದರ ಆಡಳಿತಕ್ಕೊಳಪಟ್ಟ ಮುದ್ರಾಡಿ ಎಂ.ಎನ್.ಡಿ.ಎಸ್.ಎಂ. ಅನುದಾನಿತ ಪ್ರೌಢಶಾಲೆಯಲ್ಲಿ ನಡೆದ 71 ನೆ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಭುವನೇಶ್ವರಿ ತಾಯಿಗೆ ದೀಪ ಬೆಳಗಿ, ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.

ರಾಜ್ಯೋತ್ಸವದ ಪ್ರಯುಕ್ತ ವಿದ್ಯಾರ್ಥಿಗಳಿಗೆ ಭಾಷಣ, ರಸಪ್ರಶ್ನೆ, ಗೀತ ಗಾಯನ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನವನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರದ ಆಪ್ತ ಸಮಾಲೋಚಕಿ ಪವಿತ್ರ ಮಹೇಶ್, ವಿದ್ಯಾರ್ಥಿ ನಾಯಕ ಪ್ರತೀಕ್ ಹೆಬ್ಬಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಶಾಲೆಯ ಮುಖ್ಯ ಶಿಕ್ಷಕ ಬಲ್ಲಾಡಿ ಚಂದ್ರಶೇಖರ್ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕನ್ನಡ ಭಾಷಾ ಶಿಕ್ಷಕ ಪಿ. ವಿ.ಆನಂದ ಕಾರ್ಯಕ್ರಮ ನಿರೂಪಿಸಿ, ವಿಜ್ಞಾನ ಶಿಕ್ಷಕಿ ಶ್ಯಾಮಲಾ ವಂದಿಸಿದರು.ಶಿಕ್ಷಕರಾದ ಮಹೇಶ್ ನಾಯ್ಕ್, ರಘುಪತಿ ಹೆಬ್ಬಾರ್, ಅನುಷಾ, ಶಿಕ್ಷಕೇತರ ಸಿಬ್ಬಂದಿ ಮಹೇಶ್ , ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
