ಒಂದೇ ಕುಟುಂಬದ ಏಳು ಮಂದಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಭೀಕರ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಕ್ಯಾಬ್ ಚಾಲಕನೊಬ್ಬ ತನ್ನ ಪತ್ನಿ ಸೇರಿದಂತೆ ಆಕೆಯ ಕುಟುಂಬದ ಏಳು ಮಂದಿಯನ್ನು ರುಬ್ಬುಗುಂಡಿನಿಂದ ಹೊಡೆದು ಕೊಂದಿರುವ ಘಟಣೆ ಬೆಂಗಳೂರಿನಲ್ಲಿ ನಡೆದಿದೆ. ಬಳಿಕ ಮೃತದೇಹಗಳನ್ನು ಬೇರೆ ಬೇರೆ ಸ್ಥಳಗಳಲ್ಲಿ ಎಸೆದು ಪರಾರಿಯಾಗಲು ಯತ್ನಿಸಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಇಂದುಶೇಖರ್ನನ್ನು ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ.
ಏಳು ವರ್ಷದ ಮಗುವನ್ನೂ ಬಿಡದ ಆರೋಪಿ!
ಶ್ರೀರಾಮಪುರದ ರೂಪವತಿ, ಆಕೆಯ ಮಗಳು ಸುನೀತಾ, ಪುತ್ರರಾದ ಶಿವಕುಮಾರ್ ಮತ್ತು ಶಂಕರ್, ಸೊಸೆಯಂದಿರಾದ ದಿವ್ಯಾ ಮತ್ತು ನಳಿನಿ ಹಾಗೂ ಏಳು ವರ್ಷದ ಮೊಮ್ಮಗ ಪುನೀತ್ ಮೃತಪಟ್ಟ ದುರ್ದೈವಿಗಳು. ಸುಮಾರು 20 ವರ್ಷಗಳ ಹಿಂದೆ ಸುನೀತಾಳನ್ನು ವಿವಾಹವಾಗಿದ್ದ ಇಂದುಶೇಖರ್, ಪತ್ನಿ ತನ್ನ ತವರು ಮನೆಯವರೊಂದಿಗೆ ಹೊಂದಿದ್ದ ಸಂಬಂಧದ ವಿಚಾರವಾಗಿ ಅಸಮಾಧಾನ ಹೊಂದಿದ್ದ. ಇದೇ ಕಾರಣಕ್ಕೆ ದಂಪತಿ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಪತ್ನಿಯ ತಾಯಿ ಮತ್ತು ಸಹೋದರರು ಆಕೆಯ ಪರವಾಗಿ ನಿಲ್ಲುತ್ತಿದ್ದುದೂ ಆರೋಪಿಯ ಆಕ್ರೋಶಕ್ಕೆ ಕಾರಣವಾಗಿತ್ತು.
ಕೌಟುಂಬಿಕ ಕಲಹವೇ ಸಾಮೂಹಿಕ ಹತ್ಯೆಗೆ ಕಾರಣ?
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಕೌಟುಂಬಿಕ ಕಲಹವೇ ಈ ಕೃತ್ಯಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ಎರಡು ದಿನಗಳ ಹಿಂದೆ ನಡೆದಿರುವ ಈ ಕೃತ್ಯದಲ್ಲಿ ಏಳು ಮಂದಿ ಪ್ರಾಣ ಕಳೆದುಕೊಂಡಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಒಂದೇ ಕುಟುಂಬದ ಏಳು ಮಂದಿ ಹತ್ಯೆಯಾಗಿರುವ ಘಟನೆ ಬೆಂಗಳೂರಿನಲ್ಲಿ ತೀವ್ರ ಆತಂಕ ಮತ್ತು ಆಘಾತಕ್ಕೆ ಕಾರಣವಾಗಿದೆ. ಘಟನೆಯ ಹಿಂದಿನ ಸಂಪೂರ್ಣ ಕಾರಣ ಹಾಗೂ ಮೃತದೇಹಗಳನ್ನು ಬೇರೆ ಬೇರೆ ಸ್ಥಳಗಳಲ್ಲಿ ಎಸೆದಿರುವ ಕುರಿತು ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

